ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ವಿದ್ಯಾಶಂಕರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ


 ಕೆ.ಮಹಾದೇವ್ ಸುದ್ದಿಗೋಷ್ಠಿ ವೇಳೆ ಪತ್ರಕರ್ತರ ಭವನಕ್ಕೆ ನುಗ್ಗಿ ಅಡ್ಡಿ ಪಡಿಸಿದ ಉಪನ್ಯಾಸಕ ಸುಧಾಕರ ಹೊಸಳ್ಳಿ

ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ವಿದ್ಯಾಶಂಕರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಮೈಸೂರು ವಿವಿ ಯೋಜನಾ ಮಂಡಳಿ ಸದಸ್ಯರಾದ ಡಾ.ಕೆ.ಮಹದೇವ್ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಗಂಭೀರ ಆರೋಪ ಮಾಡಿದ್ದಾರೆ. 
ಮುಕ್ತ ವಿವಿ ಕುಲಪತಿ ಪ್ರೊ.ವಿದ್ಯಾಶಂಕರ್ ಅವರು ತಮ್ಮಲ್ಲಿ ಉದ್ಯೋಗ ಕೇಳಿಬಂದ ಅನೇಕ ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ್ದಾರೆ. ಅಲ್ಲದೆ, ಉದ್ಯೋಗದಲ್ಲಿರುವವರ ಕುಟುಂಬಗಳಲ್ಲಿ ಬಿರುಕು ಉಂಟು ಮಾಡಿದ್ದಾರೆ. ಈ ರೀತಿ ಓರ್ವ ಹೆಣ್ಣು ಮಗಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಕುಟುಂಬದಲ್ಲಿ ವಿರಸ ಉಂಟು ಮಾಡಿದ್ದಾರೆ. ಹೀಗಾಗಿ ಅವರು ಒಂದು ಕ್ಷಣವೂ ಕುಲಪತಿ ಸ್ಥಾನದಲ್ಲಿರಲು ಅರ್ಹರಲ್ಲ ಎಂದು ಡಾ.ಕೆ.ಮಹದೇವ್ ಹೇಳಿದರು. 
ತಮ್ಮ ಆರೋಪ ಕುರಿತಂತೆ ಸಂತ್ರಸ್ತೆಯ ಪತಿ ಹಾಗೂ ಕುಲಪತಿ ನಡುವೆ ನಡೆದ ಸುಮಾರು ೪೫ ನಿಮಿಷಗಳ ದೂರವಾಣಿ ಸಂಭಾಷಣೆ ಬಿಡುಗಡೆಗೊಳಿಸಿದರು. ಅಲ್ಲದೆ, ಕುಲಪತಿ ತಮ್ಮ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾದ ಸಂಭಾಷಣೆಯನ್ನೂ ಸಹಾ ಪತ್ರಕರ್ತರೆದುರು ಪ್ರದರ್ಶಿಸಿದರು.
ಅಲ್ಲದೆ, ಈಗ ಈ ರೀತಿ ಅವರ ವಿರುದ್ಧದ ಆರೋಪ ಸಾಬೀತಾಗುವ ಸಾಕ್ಷ್ಯ ತಮಗೆ ದೊರೆತಿದೆ. ಮಹಿಳಾ ಆಯೋಗ ಹಾಗೂ ಇನ್ನಿತರ ಸಂಸ್ಥೆಗಳು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕೂಡಲೇ ಅವರನ್ನು ಬಂಧಿಸಬೇಕು. ಏಕೆಂದರೆ ಮರ್ಯಾದೆಗೆ ಅಂಜಿ ಮಹಿಳೆಯಾಗಲೀ ಆಕೆಯ ಪತಿಯಾಗಲೀ ದೂರು ನೀಡುವ ಸಾಧ್ಯತೆಯಿಲ್ಲ ಎಂದು ತಿಳಿಸಿದರು.
ಜೊತೆಗೆ, ಮಹಿಳೆಯೊಡನೆ ಅಸಭ್ಯವಾಗಿ ನಡೆದುಕೊಂಡ ವಿದ್ಯಾಶಂಕರ್, ಮಧ್ಯರಾತ್ರಿ ವೇಳೆ ಆಕೆಗೆ ದೂರವಾಣಿ ಕರೆ ಮಾಡಿ, ಆಕೆಯ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿ ಪತಿ ಕೈಗೆ ಸಿಕ್ಕಿಕೊಂಡಿದ್ದಾರೆ. ಆತನೊಡನೆ ವಿದ್ಯಾಶಂಕರ್ ಮಾತನಾಡಿದ ಸುಮಾರು ೪೫ ನಿಮಿಷಗಳ ದೂರವಾಣಿ ಸಂಭಾಷಣೆ ಇದಾಗಿದೆ ಎಂದು ವಿವರಿಸಿದರು.
ವಿಶ್ರಾಂತ ಕುಲಪತಿ ಪ್ರೊ.ಎನ್.ಎಸ್. ರಾಮೇಗೌಡ ಸಹಾ ಹಾಜರಿದ್ದರು.

ಪತ್ರಕರ್ತರ ಭವನಕ್ಕೆ ನುಗ್ಗಿ ಕೂಗಾಟ 

ಕುಲಪತಿ ಡಾ.ವಿದ್ಯಾಂಶಂಕರ್ ವಿರುದ್ಧ ಡಾ.ಕೆ.ಮಹದೇವ್ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಪತ್ರಿಕಾ ಭವನಕ್ಕೆ ಡಾ.ಸುಧಾಕರ ಹೊಸಳ್ಳಿ ಎಂಬ ಉಪನ್ಯಾಸಕ ಒಳನುಗ್ಗಿ ವಿದ್ಯಾಶಂಕರ್ ಪರವಾಗಿ ಸಮರ್ಥನೆ ಮಾಡುತ್ತಾ ಡಾ.ಕೆ.ಮಹಾದೇವ್ ವಿರುದ್ಧ ಆರೋಪಿಸಿ, ಏರು ದನಿಯಲ್ಲಿ ಮಾತನಾಡಿ, ಪತ್ರಕರ್ತರ ಕೆಲಸಕ್ಕೆ ತಡೆ ಒಡ್ಡಿದರು. ಈ ವೇಳೆ ಪತ್ರಕರ್ತರೂ ಮತ್ತು ಸುಧಾಕರ ಹೊಸಳ್ಳಿ ನಡುವೆ ವಾಗ್ವಾದ ನಡೆಯಿತು. ಈ ಬಗ್ಗೆ ಡಾ.ಕೆ.ಮಹಾದೇವ್ ಮತ್ತು ಪತ್ರಕರ್ತರ ಸಂಘದಿಂದ ಪೊಲೀಸರಿಗೆ ದೂರು ನೀಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು