ಸಾರ್ವಜನಿಕ ಶಿಕ್ಷಣ, ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಉಳಿಸುವಂತೆ ಪ್ರಧಾನಿಗೆ ಒಂದು ಕೋಟಿ ಸಹಿ ರವಾನೆ ಅಭಿಯಾನ


 ಸೆ.28 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ರಾಜ್ಯ ಮಟ್ಟದ ವಿದ್ಯಾರ್ಥಿಗಳ ಬೃಹತ್ ಸಮಾವೇಶ

ಮೈಸೂರು : ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ಜನ್ಮ ದಿನವಾದ ಸೆ.28 ರಂದು ಬೆಂಗಳುರಿನ ಫ್ರೀಡಂ ಪಾರ್ಕ್‍ನಲ್ಲಿ ರಾಜ್ಯ ಮಟ್ಟದ ವಿದ್ಯಾರ್ಥಿ ಸಮಾವೇಶ ಆಯೋಜಿಸಲಾಗಿದ್ದು, ಸಾರ್ವಜನಿಕ ಶಿಕ್ಷಣ, ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಉಳಿಸುವಂತೆ ಪ್ರಧಾನಿಗೆ ಒಂದು ಕೋಟಿ ಸಹಿಗಳನ್ನು ರವಾನೆ ಮಾಡಲಾಗುವುದು ಎಂದು ಎಐಡಿಎಸ್‍ಒ ಮೈಸೂರು ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯಾದ್ಯಂತ ನಡೆಯುವ ವಿದ್ಯಾರ್ಥಿಗಳ ಸಹಿ ಸಂಗ್ರಹ ಅಭಿಯಾನ ದೊಡ್ಡ ಸಂಚಲನವನ್ನು ಮೂಡಿಸಿದೆ. ಕಳೆದ 145 ದಿನಗಳಿಂದ ಸತತವಾಗಿ ನಡೆಯುತ್ತಿರುವ ಈ ಅಭಿಯಾನದಲ್ಲಿ ರಾಜ್ಯದ ಲಕ್ಷಾಂತರ ಮಂದಿ ಜನ ಸಾಮಾನ್ಯರು, ಶಿಕ್ಷಕರು, ಸಾಹಿತಿಗಳು, ಬರಹಗಾರರು ತಮ್ಮ ಅಮೂಲ್ಯವಾದ ಸಹಿಯನ್ನು ನೀಡಿ ಈ ಚಳುವಳಿಗೆ ಬೆಂಬಲವಾಗಿ ನಿಂತಿದ್ದಾರೆ. ಈ ಮೂಲಕ ಮೈಸೂರು ಜಿಲ್ಲೆಯ 7 ತಾಲ್ಲೂಕುಗಳಿಂದ 3.75 ಲಕ್ಷಕ್ಕೂ ಅಧಿಕ ಸಹಿಗಳು ಸಂಗ್ರಹವಾಗಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳು ಉಳಿಯಬೇಕು ಎಂಬ ಘೋಷಣೆಯೊಂದಿಗೆ ಈ ಅಭಿಯಾನದಲ್ಲಿ 5 ಸಾವಿರಕ್ಕೂ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಈ ಅಭಿಯಾನವು ಹಲವು ಘಟ್ಟಗಳಲ್ಲಿ ಜರುಗಿ ಈಗ ಅಂತಿಮ ಘಟ್ಟಕ್ಕೆ ತಲುಪಿದೆ.
ಸಹಿ ಸಂಗ್ರಹ ಅಭಿಯಾನದ ಸಮಾರೋಪವನ್ನು ಭಗತ್‍ಸಿಂಗ್ ಅವರ ಜನ್ಮ ದಿನದಂದು ಸಂಘಟಿಸಿದ್ದೇವೆ. ಮಹಾನ್ ಕ್ರಾಂತಿಕಾರಿಗಳು, ನವೋದಯ ಚಿಂತಕರ ಆದರ್ಶ ಮತ್ತು ಆಶಯಗಳನ್ನು ನೆನೆದು ಈ ಅಭಿಯಾನಕ್ಕೆ ಎಐಡಿಎಸ್‍ಒ ಮೇ 1 ರಂದು ಚಾಲನೆ ನೀಡಿತ್ತು. 
ಸಮಾವೇಶದ ಸಮಾರೋಪ ಸಭೆಯ ನಂತರ, ರಾಜ್ಯದಲ್ಲಿ ಸಂಗ್ರಹವಾದ ಸಹಿಗಳನ್ನು ಎಐಡಿಎಸ್‍ಒ ರಾಜ್ಯ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಹಿಗಳನ್ನು ತಲುಪಿಸುತ್ತದೆ ನಂತರ ಅವರ ಮೂಲಕ ದೇಶದ ಪ್ರಧಾನ ಮಂತ್ರಿಗಳಿಗೆ ಸಹಿಗಳನ್ನು ತಲುಪಿಸಲಾಗುತ್ತದೆ. ಎಂದು ಚಂದ್ರಕಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು