ಮೈಸೂರಿನ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಎನ್‌ಟಿಎಂ ಶಾಲೆ ಪುನರ್ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು : ಸೆ.೨೦ : ನಗರದ ಎನ್‌ಟಿಎಂ ಶಾಲೆ ಪುನರ್ ನಿರ್ಮಾಣವಾಗಬೇಕೆಂದು ಒತ್ತಾಯಿಸಿ, ಮಹಾರಾಣಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟ ಸಮಿತಿಯಿಂದ ಮಂಗಳವಾರದ ಪ್ರತಿಭಟನೆ  ಮುಂದುವರಿಸಿತು.

ಮೈಸೂರಿನ ಚಾಮುಂಡಿಬೆಟ್ಟದ ರಸ್ತೆಯಲ್ಲಿರುವ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಕಿತ್ತೂರು ರಾಣಿ ಚೆನ್ನಮ್ಮನಿಗೆ ಕೊಟ್ಟ ಮಾತಿನಂತಯೇ ಕೊನೆಯವರೆಗೂ ನಡೆದುಕೊಂಡು, ಕಿತ್ತೂರು ಸಂಸ್ಥಾನದ ವೀರ ಕಲಿಯಾಗಿ ಮೆರೆದ ಸಂಗೊಳ್ಳಿ ರಾಯಣ್ಣನ ನಡೆತೆ, ಬದ್ಧತೆಗಳು, ಮೈಸೂರಿನ ರಾಮಕೃಷ್ಣ  ಆಶ್ರಮದವರಿಗೆ ಮಾದರಿಯಾಗಲಿ ಎಂದು ಕಿಡಿಕಾರಿದರು. 

ಎನ್‌ಟಿಎಂ ಶಾಲೆ ಉಳಿಸಿ ಹೋರಾಟವು, ಕೇವಲ ಒಂದು ಸ್ಥಳದಲ್ಲಿ ಮಾತ್ರ ನಡೆಸದೇ, ದೇಶದ ಅಭಿವೃದ್ಧಿಗೆ ವಿಶಿಷ್ಟ ಕೊಡುಗೆಗಳನ್ನು ನೀಡಿದ ಮಹಾ ಪುರುಷರ ಪ್ರತಿಮೆಗಳು ಹಾಗೂ ಸ್ಮಾರಕಗಳ ಮುಂಭಾಗದಲ್ಲಿ ಇನ್ನು ಮುಂದೆ ನಡೆಸಲಾಗುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು.

ಈ ಮೂಲಕ ಮಹಾ ಮಹಿಮರ ಆದರ್ಶಗಳು, ಉದಾತ್ತ ವಿಚಾರಗಳು, ಸಂದೇಶಗಳು, ಮಾನವೀಯ ಗುಣಗಳು, ತತ್ವಗಳು ರಾಮಕೃಷ್ಣ ಆಶ್ರಮದವರ ಮೇಲೆ ಪ್ರಭಾವ ಬೀರಿ, ಅವರು ತಮ್ಮ ಮಾತುಗಳಿಗೆ ಬದ್ಧರಾಗಿ ನಡೆದುಕೊಳ್ಳುವಂತಾಗಲಿ ಎಂದು ಒತ್ತಾಯಿಸಿದರು. 

ಪ್ರತಿಭಟನೆಯಲ್ಲಿ ಎನ್‌ಟಿಎಂ ಶಾಲೆ ಹೋರಾಟಗಾರರ ಸಂಚಾಲಕ ಎಂ.ಮೋಹನ್ ಕುಮಾರ್ ಗೌಡ, ಪಿ.ಮರಂಕಯ್ಯ, ಪುರುಷೋತ್ತಮ್, ಟಿ.ರವಿಗೌಡ, ಹೊಸಕೋಟೆ ಬಸವರಾಜು, ಜೆ.ಉಮೇಶ್, ಈಶ್ವರ್, ಎಲ್‌ಐಸಿ ಸಿದ್ದಪ್ಪ, ಗೋವಿಂದರಾಜ್ ಮತ್ತಿತರರು ಪಾಲ್ಗೊಂಡಿದ್ದರು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು