ವರದಿ-ವಿಶ್ವನಾಥ್, ಪಾಂಡವಪುರ
ಪಾಂಡವಪುರ : ತಾಲ್ಲೂಕಿನ ಕೆನ್ನಾಳು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಪಕ್ಕದ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಲಕ್ಷಾಂತರ ಲೀಟರ್ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದ್ದ ಬಗ್ಗೆ ಮೈಸೂರು ಮೇಲ್.ಕಾಂ ಪ್ರಕಟಿಸಿದ್ದ ವರದಿಗೆ ಪಂಚಾಯ್ತಿ ಅಭಿವೃದ್ಧಿ ಶ್ರೀನಿವಾಸ್ ಶೀಘ್ರವಾಗಿ ಸ್ಪಂದಿಸಿ ನಲ್ಲಿ ಪೈಪ್ ದುರಸ್ತಿಗೆ ಮುಂದಾಗಿದ್ದು, ಗ್ರಾಮಸ್ಥರ ಪ್ರಶಂಸೆಗೆ ಪಾತ್ರವಾಯಿತು.
ಬುಧವಾರ ಬೆಳಿಗ್ಗೆ ಪೈಪ್ ಒಡೆದು ನೀರು ರಸ್ತೆಯಲ್ಲಿ ಹರಿಯುತ್ತಿರುವ ಕಾರಣ ಗುಂಡಿಬಿದ್ದು ರಸ್ತೆಯಲ್ಲಾ ಕೆಸರುಮಯವಾಗಿ ಶಾಲೆಗೆ ಬರುವ ವಿದ್ಯಾರ್ಥಿಗಳು ಮತ್ತು ರಸ್ತೆಯಲ್ಲಿ ತಿರುಗಾಡುವ ಸಾರ್ವಜನಿಕರಿಗೆ ಅನಾನುಕೂಲವಾಗಿತ್ತು. ಮೈಸೂರು ಮೇಲ್.ಕಾಂ ಈ ಬಗ್ಗೆ ವರದಿ ಪ್ರಕಟಿಸಿ ಪಿಡಿಓ ಶ್ರೀನಿವಾಸ್ ಅವರ ಗಮನ ಸೆಳೆದಿತ್ತು.
ನೀರು ನಿಂತಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಮಿಕ ರೋಗ ಹರಡುವ ಭೀತಿ ಇರುವ ಕಾರಣ ಕೂಡಲೇ ನೀರು ನಿಲ್ಲಿಸಿ ಇಲ್ಲವೇ ಪೈಪ್ ದುರಸ್ತಿ ಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದರ ಮೇರೆಗೆ ಬುಧವಾರ ಮದ್ಯಾಹ್ನವೇ ಪೈಪ್ ರಿಪೇರಿ ಮಾಡಲಾಯಿತು.
