ಸಚಿವ ಎಸ್.ಟಿ.ಸೋಮಶೇಖರ್‌ರವರಿಂದ ಯುವ ದಸರಾ ಪೋಸ್ಟರ್ ಬಿಡುಗಡೆ
ಸೆಪ್ಟೆಂಬರ್ 27, 2022
ಮೈಸೂರು : ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು, ಯುವ ದಸರಾ ಕಾರ್ಯಕ್ರಮದ ಪೋಸ್ಟರ್ ಅನ್ನು ಮಂಗಳವಾರ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಸಚಿವರು, ಸೆ.೨೮ಕ್ಕೆ "ಅಪ್ಪು ನಮನ" ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಸರಾಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಯುವ ದಸರಾದಲ್ಲಿ ಗೋಲ್ಡ್ ಪಾಸ್ ಹೊರತುಪಡಿಸಿ ಯಾವುದೇ ಪಾಸ್ ಇರುವುದಿಲ್ಲ ಎಂದರು.
ಯುವ ಸಂಭ್ರಮ/ಯುವ ದಸರಾ ಉಪ ಸಮಿತಿಯು ನಾಳೆಯಿಂದ ಅ.೩ರವರೆಗೆ ಯುವ ದಸರಾ ಕಾರ್ಯಕ್ರಮವನ್ನು ಮಹಾರಾಜ ಕಾಲೇಜು ಮೈದಾನದಲ್ಲಿ ಸಂಜೆ ೬ ಗಂಟೆಯಿಂದ ರಾತ್ರಿ ೧೦ ಗಂಟೆಯವರೆಗೆ ಹಮ್ಮಿಕೊಂಡಿದೆ. ಯುವ ದಸರಾ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ನಟ ದಿ.ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಹಾಗೂ ನಟ ಶಿವರಾಜ್ ಕುಮಾರ್ ಆಗಮಿಸಲಿದ್ದಾರೆ. ಶಾಸಕ ಎಲ್.ನಾಗೇಂದ್ರ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ನಾಳೆ ಸಂಜೆ ೭ಗಂಟೆಯಿಂದ ಅಪ್ಪು ನಮನ ಕಾರ್ಯಕ್ರಮ ನಡೆಯಲಿದ್ದು ಖ್ಯಾತ ಹಿನ್ನೆಲೆ ಗಾಯಕರಾದ ಗುರುಕಿರಣ್, ವಿಜಯ ಪ್ರಕಾಶ್, ಕುನಾಲ್ ಗಾಂಜಾವಾಲ ಕಾರ್ಯಕ್ರಮ ನೀಡಲಿದ್ದಾರೆ.
ಸೆ.೨೯ರಂದು ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ, ಸ್ಥಳೀಯ ನೃತ್ಯ ತಂಡದಿಂದ ನೃತ್ಯ ಪ್ರದರ್ಶನ, ಪವನ್ ಡ್ಯಾನ್ಸರ್ ಹಾಗೂ ಇತರರಿಂದ ನೃತ್ಯ ರೂಪಕ, ಹಿನ್ನೆಲೆ ಗಾಯಕಿ ಕನ್ನಿಕಾ ಕಪೂರ್ ರವರಿಂದ ಸಂಗೀತ ರಸಸಂಜೆ ನಡೆಯಲಿದೆ.
ಸೆ.೩೦ರಂದು ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ, ಸ್ಥಳೀಯ ಕಲಾವಿದರಿಂದ ಕಾರ್ಯಕ್ರಮ, ಲೇಸರ್ ಆಕ್ಟ್ ಮತ್ತು ಸಿಗ್ನೇಚರ್ ಗ್ರೂಪ್ ನೃತ್ಯ ತಂಡದಿಂದ ನೃತ್ಯ ರೂಪಕ, ಸ್ಯಾಂಡಲ್ ವುಡ್ ನೈಟ್ ನಡೆಯಲಿದೆ.
ಅ.೧ರಂದು ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ, ಹಿನ್ನೆಲೆ ಗಾಯಕ ಸೋನು ನಿಗಮ್, ಗಾಯಕಿ ಡಾ.ಶಮಿತಾ ಮಲ್ನಾಡ್ ರಿಂದ ಸಂಗೀತ ರಸಮಂಜರಿ ಇರಲಿದೆ.
ಅ.೨ರಂದು ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ, ಖ್ಯಾತ ಚಿತ್ರತಾರೆಯರಾದ ಹರ್ಷಿಕಾ ಪೂಣಚ್ಚ, ವಿಜಯರಾಘವೇಂದ್ರ ಅವರಿಂದ ಕನ್ನಡ ಸಸ್ಟಾರ್ ನೈಟ್, ಗಾಯಕಿ ಮಂಗ್ಲಿ ಅವರಿಂದ ಸಂಗೀತ ರಸಮಂಜರಿ, ಗಾಯಕ ಅಮಿತ್ ತ್ರಿವೇದಿ ಅವರಿಂದ ಸಂಗೀತ ರಸಮಂಜರಿ ನಡೆಯಲಿದೆ.
ಅ.೩ರಂದು ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನ, ಸುಪ್ರಿಯಾ ರಾಮ್ ಮತ್ತು ಮಹಿಳಾ ಬ್ಯಾಂಡ್ ತಂಡದವರಿಂದ ಪ್ರದರ್ಶನ, ಫ್ಯಾಷನ್ ಶೋ, ಗಾಯಕಿ ಸುನಿಧಿ ಚೌಹಾಣ್‌ರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಯುವ ದಸರಾ ಉಪ ಸಮಿತಿ ವಿಶೇಷಾಧಿಕಾರಿ ಆರ್.ಚೇತನ್ ಇದೇ ವೇಳೆ ತಿಳಿಸಿದರು.
ಭಿತ್ರಿ ಪತ್ರ ಬಿಡುಗಡೆ ಸಮಾರಂಭದಲ್ಲಿ ಸಂಸದ ಪ್ರತಾಪ್ ಸಿಂಹ, ಮೇಯರ್ ಶಿವಕುಮಾರ್, ಸಮಿತಿಯ ಕಾರ್ಯಾಧ್ಯಕ್ಷ ವೆಂಕಟರಾಜು ಎನ್ ಸಿ, ಅಧ್ಯಕ್ಷ ಕಿರಣ್ ಗೌಡ, ಉಪಾಧ್ಯಕ್ಷರುಗಳಾದ ಎಂ.ಬದರೀಶ್, ಸಂತೋಷ್ ಕುಮಾರ್, ಎಂ.ಮಹೇಂದ್ರ, ಕಾರ್ಯದರ್ಶಿ ಆಶಾದ್ ರೆಹಮಾನ್ ಷರೀಫ್, ಡಾ.ನಿಂಗರಾಜು ಆರ್ ಮತ್ತಿತರರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು