ನರಸಿಂಹರಾಜ ಕ್ಷೇತ್ರದಲ್ಲಿ ೨೫ ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ : ತನ್ವೀರ್ ಸೇಠ್

೨೫ ಲಕ್ಷ ವೆಚ್ಚದಲ್ಲಿ ಉದಯಗಿರಿ ಬಡಾವಣೆಯಲ್ಲಿ ರಸ್ತೆ ಡಾಂಬರೀಕರಣಕ್ಕೆ ಚಾಲನೆ

ಮೈಸೂರು : ಎನ್‌ಆರ್ ಕ್ಷೇತ್ರದಲ್ಲಿ ೨೫ ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ೧೦೦ ಕೋಟಿ ಬೇಡಿಕೆಯ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.

ಉದಯಗಿರಿ ಬಡಾವಣೆಯ ಮೊದಲನೇ ಹಂತದ ಎರಡನೇ ಕ್ರಾಸ್‌ನಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ವಿಶೇಷ ಅನುದಾನ ೨೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿನ ರಸ್ತೆ ಅಭಿವೃದ್ಧಿಗಳಿಗೆ ೧೦೦ ಕೋಟಿ ಅಗತ್ಯವಿದ್ದು, ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳಿಗೆ ಕೋರಿದ್ದೇನೆ. ಈಗಾಗಲೇ ೨೫ ಕೋಟಿ ರೂ, ಬಿಡುಗಡೆ ಮಾಡಿದ್ದಾರೆ. ಮಹಾತ್ಮಾಗಾಂಧಿ ನಗಾಭಿವೃದ್ಧಿ ಪ್ರಾಧಿಕಾರದಿಂದ ಮೈಸೂರು ನಗರಕ್ಕೆ ೩೬೭ ಕೋಟಿ ಮಂಜೂರಾಗಿದೆ. ಇದರಲ್ಲಿ ಎನ್‌ಆರ್ ಕ್ಷೇತ್ರಕ್ಕೆ ೬೬ ಕೋಟಿ ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಇದರೊಂದಿಗೆ ತಾವು ಸಚಿವರಾಗಿದ್ದ ವೇಳೆ ಅಲ್ಪಸಂಖ್ಯಾತರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಮಂಜೂರಾಗಿದ್ದ ೨೩ ಕೋಟಿ ಅನುದಾನದಲ್ಲಿ ೩.೫ ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸುತ್ತಿದ್ದೇವೆ. ಸಂಸದರ ಅನುದಾನ ೩ ಕೋಟಿ ಬರಬೇಕಿದ್ದು, ಇನ್ನೂ ಬಿಡುಗಡೆಯಾಗಿಲ್ಲ ಎಂದರು.

ಮೈಸೂರಿನಲ್ಲಿ ೨೦೦೨ರ ತನಕ ಚಾಮರಾಜ ಜೋಡಿ ರಸ್ತೆ ಒಂದೇ ಇತ್ತು. ಈಗ ವಿಶ್ವಮಾನವ, ಅಜೀಜ್ ಸೇಠ್, ಡಾ.ರಾಜಕುಮಾರ್, ಎನ್‌ಆರ್ ಮೊಹಲ್ಲಾ ಜೋಡಿ ರಸ್ತೆಗಳು ಸೇರಿದಂತೆ ನಮ್ಮ ಕ್ಷೇತ್ರದಲ್ಲಿ ಹಲವಾರು ಜೋಡಿ ರಸ್ತೆಗಳು ಇವೆ ಎಂದರು.

ನಮ್ಮ ಕ್ಷೇತದಲ್ಲಿ ಯಾವುದೇ ಮಳೆ ಅನಾಹುತ ಸಂಭವಿಸಿಲ್ಲ. ಕೆಲವೊಂದು ರಸ್ತೆಗಳು ಹಾಳಾಗಿದ್ದನ್ನು ಬಿಟ್ಟರೆ ಮನೆಗಳಿಗೆ ನೀರು ನುಗ್ಗಿದ ಪ್ರಕರಣ ಸಂಭವಿಸಿಲ್ಲ ಎಂದರು.

ಮೊಹಮ್ಮದ್ ಎಕ್ಬಾಲ್, ಷಹೀನ್ ಷಾ, ಮೊಹಮ್ಮದ್ ಜಮೀಲ್, ಷಫಿವುಲ್ಲಾ, ಕೆಆರ್‌ಐಡಿಎಲ್ ಎಇಇ ತಿಪ್ಪಾರೆಡ್ಡಿ ಮುಂತಾದವರು ಇದ್ದರು.  


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು