ಜಲ ಮೂಲಗಳನ್ನು ಮುಚ್ಚಿದ್ದರಿಂದ ಕೆರೆ ಕಟ್ಟೆಗಳು ಬತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ : ಕೆರೆಗಳ ಒತ್ತುವರಿ ತೆರವುಗೊಳಿಸಲು ರೈತರಿಗೆ ಸಲಹೆ

ವರದಿ : ನಿಷ್ಕಲ ಎಸ್.ಗೌಡ, ಜೆ.ಮಲ್ಲೇನಹಳ್ಳಿ

ಪಾಂಡವಪುರ : ನಮ್ಮ ಮೂರ್ವಿಕರು ನಿರ್ಮಿಸಿದ್ದ ಕೆರೆ ಕಟ್ಟೆಗಳು, ವೈಜ್ಞಾನಿಕವಾಗಿದ್ದವು. ಅವುಗಳಿಗೆ ನೈರ್ಗಿಕವಾಗಿ ನೀರು ಸರಾಗವಾಗಿ ಹರಿದುಬರುತ್ತಿತ್ತು. ಆದರೇ, ಇಂದು ಕೆರೆ ಕಟ್ಟೆಗಳಿಗೆ ಹರಿದು ಬರುವ ನೀರಿನ ಮೂಲಗಳನ್ನೆ ಮುಚ್ಚಿದ್ದರಿಂದ ಕೆರೆ ಕಟ್ಟೆಗಳು ಬತ್ತಿವೆ ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಏತ ನೀರಾವರಿ ಯೋಜನೆ ಮೂಲಕ ಪಾಂಡವಪುರ ತಾಲ್ಲೂಕಿನ ಸುಂಕಾತೊಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಬೃಹತ್ ಯೋಜನೆ ಸೇರಿದಂತೆ ಒಟ್ಟು 8.5 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

8.5 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ

ಏತ ನೀರಾವರಿ ಯೋಜನೆಯಲ್ಲಿ ಕೆಲವು ಕೆರೆ ಕಟ್ಟೆಗಳು ಬಿಟ್ಟು ಹೋಗಿದ್ದವು, ಅಂತಹವುಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಈ ಹಿಂದೆ ನಮ್ಮ ಪೂರ್ವಿಕರು ನಿರ್ಮಿಸಿದ್ದ ಕೆರೆ ಕಟ್ಟೆಗಳು ವೈಜ್ಞಾನಿಕವಾಗಿದ್ದವು, ಅವುಗಳಿಗೆ ನಾವು ಕೃತಕವಾಗಿ ನೀರು ತುಂಬಿಸಬೇಕಿರಲಿಲ್ಲ, ನೈಸರ್ಗಿಕವಾಗಿ ಮಳೆ ಬಂದಾಗ ಕೆರೆ ಕಟ್ಟೆಗಳು ತುಂಬಿಕೊಳ್ಳುತ್ತಿದ್ದವು. ಇಂದು ಸಾಕಷ್ಟು ರೈತರು ಕೆರೆ ಕಟ್ಟೆಗಳನ್ನು ಒತ್ತುವರಿ ಮಾಡಿಕೊಂಡು ಜಲ ಮೂಲಗಳನ್ನು ಮುಚ್ಚಿದ್ದಾರೆ. ಕೆರೆಗಳಿಗೆ ನೈಸರ್ಗಿಕವಾಗಿ ಹರಿದು ಬರುವ ನೀರಿನ ಮಾರ್ಗಗಳನ್ನು ಮುಚ್ಚಲಾಗಿದೆ. ಇದು ತಪ್ಪಬೇಕು, ಈ ಕೆರೆ ಕಟ್ಟೆಗಳು ನಿಮ್ಮದಾಗಿವೆ, ಇದನ್ನು ನೀವೇ ಉಳಿಸಿಕೊಳ್ಳಬೇಕು, ಮುಚ್ಚಿರುವ ಜಲ ಮೂಲಗಳನ್ನು ತೆಗೆದು ಕೆರೆಗಳಿಗೆ ನೀರು ಸರಾಗವಾಗಿ ಹರಿದುಬರುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಹತ್ತಾರು ಕೆರೆಗಳಿಗೆ ಹರಿದು ಬರಲಿದೆ ನೀರು

ಇಂದು ಭೂಮಿಪೂಜೆ ನಡೆದಿರುವ ಏತ ನೀರಾವರಿ ಯೋಜನೆ ಕಾಮಗಾರಿಯಿಂದ ಕುರಹಟ್ಟಿ, ಅತ್ತಿಗಾನಹಳ್ಳಿ, ಮೇನಾಗರ, ಮೂಡಲಕೊಪ್ಪಲು, ಸುಂಕಾತೊಣ್ಣುರು, ಚಿಕ್ಕನಹಳ್ಳಿ, ನರಹಳ್ಳಿ, ಬೋಳೇನಹಳ್ಳಿ ಗ್ರಾಮದ ಕೆರೆಗಳು ತುಂಬಲಿವೆ ಎಂದರು.

ಇಷ್ಟೇ ಅಲ್ಲದೇ, 65 ಲಕ್ಷ ರೂ. ವೆಚ್ಚದಲ್ಲಿ ಸುಂಕಾತೊಣ್ಣೂರು ಗ್ರಾಮದ ಅಂಬರೀಶ್ ಬಡಾವಣೆಯಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, 30 ಲಕ್ಷ ರೂ. ವೆಚ್ಚದಲ್ಲಿ ಇದೇ ಗ್ರಾಮದ ರಸ್ತೆ ಅಭಿವೃದ್ಧಿ, ಅತ್ತಿಗಾನಹಳ್ಳಿಯಲ್ಲಿ 20 ಲಕ್ಷ ರೂ, ಎಸ್.ಕೊಡಗಳ್ಳಿ ಗ್ರಾಮದಲ್ಲಿ 10 ಲಕ್ಷ ರೂ, ಕಾಳೇನಹಳ್ಳಿಯಲ್ಲಿ 36 ಲಕ್ಷ ರೂ, ಈರೇಗೌಡನಕೊಪ್ಪಲು ಗ್ರಾಮದಲ್ಲಿ 20 ಲಕ್ಷ ರೂ, ಮತ್ತು ಮಾಡರಹಳ್ಳಿ ಗ್ರಾಮದಲ್ಲಿ 1.5 ಕೋಟಿ ರೂ. ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಭೂಮಿಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಾಂಡವಪುರ ತಾಲ್ಲೂಕು ರೈತಸಂಘದ ಅಧ್ಯಕ್ಷರಾದ ವೈ.ಪಿ.ಮಂಜುನಾಥ್, ರೂಪ, ಸುಂಕಾತೊಣ್ಣುರು ಗ್ರಾಮದ ಮುಖಂಡರಾದ ಎಸ್.ಡಿ.ನಟರಾಜು, ಎಸ್.ಆರ್.ಜ್ಞಾನೇಶ್, ಎಸ್.ಡಿ.ಕುಮಾರ್, ವಿಶ್ವ, ಶ್ರೀನಿವಾಸ್, ಎಸ್.ವಿ.ಹೇಮಾದ್ರಿ, ಚಂದ್ರಶೇಖರ್, ಅತ್ತಿಗಾನಹಳ್ಳಿ ಗ್ರಾಮದ ನಾಗರಾಜು, ಸಿದ್ದೇಗೌಡ, ಬಸವರಾಜು, ಮಹೇಶ್, ಎಸ್.ಕೊಡಗಳ್ಳಿ ಗ್ರಾಮದ ಕುಮಾರ್, ರಾಮೇಗೌಡ, ಶಿವಲಿಂಗೇಗೌಡ, ಸ್ವಾಮೀಗೌಡ, ಕಾಳೇನಹಳ್ಳಿ ಗ್ರಾಮದ ಆನಂದ್, ಪುಟ್ಟಸ್ವಾಮಿಗೌಡ, ಪಂಚಲಿAಗೇಗೌಡ, ಪುಟ್ಟರಾಜು, ಸುರೇಶ್ ಮತ್ತಿತರರು ಇದ್ದರು.