ವರದಿ : ನಿಷ್ಕಲ ಎಸ್.ಗೌಡ, ಜೆ.ಮಲ್ಲೇನಹಳ್ಳಿ

ಪಾಂಡವಪುರ : ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿದ್ದು, ಈ ಅವಧಿಯಲ್ಲಿ ರಾಜ್ಯದಲ್ಲಿ 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಸಾಧನೆಯೇ? ಎಂದು ಯುವ ಜನತಾದಳ (ಜಾತ್ಯತೀತ) ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವ್ಯಂಗ್ಯವಾಡಿದರು. 

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪಾಂಡವಪುರದಲ್ಲಿ ಗುರುವಾರ ನಡೆದ ‘ಜನರೊಂದಿಗೆ ಜನತಾದಳ’ ಮತ್ತು ಪಕ್ಷದ 25ನೇ ವರ್ಷದ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, "2019ರ ಲೋಕಸಭಾ ಚುನಾವಣೆಯ ಸೋಲು ನನಗೆ ರಾಜಕೀಯ ಪಕ್ವತೆಗೆ ದಾರಿ ಮಾಡಿಕೊಟ್ಟಿದೆ. ಅವತ್ತಿನ ನಿಖಿಲ್‌ಗೂ ಇವತ್ತಿನ ನಿಖಿಲ್‌ಗೂ ಸಾಕಷ್ಟು ಬದಲಾವಣೆಯಾಗಿದ್ದೇನೆ ಎಂದರು.

ರೈತರ ವಿರೋಧಿ ಕಾಂಗ್ರೆಸ್ ಸರ್ಕಾರ:  

"ರೈತರ ಬದುಕು ಹಸನಾಗಿಸುತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದ ಸರ್ಕಾರದ ಆಡಳಿತದಲ್ಲಿ ಇಂದು ಅನ್ನದಾತನ ಬದುಕೇ ನರಕವಾಗುತ್ತಿದೆ. ಸಾಲದ ಸುಳಿಗೆ ಸಿಲುಕಿ, ಬೆಂಬಲ ಬೆಲೆಯಿಲ್ಲದೆ, ನೆಮ್ಮದಿಯಿಂದ ಬದುಕಲೂ ಆಗದ ಸ್ಥಿತಿಗೆ ರೈತ ತಲುಪಿದ್ದಾನೆ. ಕಾಂಗ್ರೆಸ್ ಆಡಳಿತದಲ್ಲಿ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 3 ಸಾವಿರ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಡ್ಯ ಜಿಲ್ಲೆಯೊಂದರಲ್ಲೇ 97 ರೈತರು ಬಲಿಯಾಗಿದ್ದಾರೆ. ಇದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ" ಎಂದು ಆರೋಪಿಸಿದರು.

"ನನ್ನ ರಾಜಕೀಯ ಪ್ರವೇಶ ಮಂಡ್ಯ ಜಿಲ್ಲೆಯಿಂದಲೇ ಆಗಿದೆ. ನಾವು ಮಂಡ್ಯದಲ್ಲಿ ಹುಟ್ಟದಿದ್ದರೂ ಈ ಜಿಲ್ಲೆಯ ಋಣ ನಮ್ಮ ಮೇಲಿದೆ. ಯಾವುದೇ ಊರಿಗೆ ಹೋದರೂ ಜನ ತೋರಿಸುವ ಪ್ರೀತಿ ಮರೆಯಲಾಗದು" ಎಂದು ನಿಖಿಲ್ ಕುಮಾರಸ್ವಾಮಿ ಭಾವುಕರಾದರು.

ಜೆಡಿಎಸ್ ಕನ್ನಡ ನಾಡಿನ ಅಸ್ಮಿತೆ:  

"ದೇವೇಗೌಡರ ಹೋರಾಟದ ಫಲವೇ ಜನತಾದಳ ಪಕ್ಷ. 25 ವರ್ಷಗಳ ರಜತ ಮಹೋತ್ಸವ ಆಚರಿಸುತ್ತಿರುವ ನಮ್ಮ ಜೆಡಿಎಸ್ ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಗಾಗಿ ಹೋರಾಡಿದ ಪಕ್ಷ. ಎಷ್ಟೋ ಪ್ರಾದೇಶಿಕ ಪಕ್ಷಗಳು ಹುಟ್ಟಿ ಮುಳುಗಿದರೂ, ಗಟ್ಟಿಯಾಗಿ ಉಳಿದು ರಾಜ್ಯದಲ್ಲಿ ಸುಭದ್ರವಾಗಿರುವುದು ಜೆಡಿಎಸ್ ಮಾತ್ರ" ಎಂದು ಪ್ರತಿಪಾದಿಸಿದರು.

"93ನೇ ವಯಸ್ಸಿನಲ್ಲೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೋರಾಟದ ಕಿಚ್ಚು ಕಡಿಮೆಯಾಗಿಲ್ಲ. ರಾಜ್ಯಸಭೆಯಲ್ಲಿ ಕನ್ನಡ ನಾಡಿನ ರೈತರು, ನೀರಾವರಿ ಪರವಾಗಿ ಅವರು ಧ್ವನಿ ಎತ್ತುತ್ತಿದ್ದಾರೆ. ಅವರ ಹೋರಾಟದ ಮನೋಭಾವ ನಮಗೆಲ್ಲರಿಗೂ ಸ್ಪೂರ್ತಿ" ಎಂದು ಬಣ್ಣಿಸಿದರು.

"2028ರ ವಿಧಾನಸಭಾ ಚುನಾವಣೆ ಬಹಳ ದೂರವಿಲ್ಲ. ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣಕ್ಕೆ ಮರಳಬೇಕು ಎಂಬುದು ಕಾರ್ಯಕರ್ತರ ಅಭಿಪ್ರಾಯ. 2028ಕ್ಕೆ ಎನ್‌ಡಿಎ  ಮೈತ್ರಿಕೂಟದ ಸರ್ಕಾರ ಆಡಳಿತಕ್ಕೆ ಬರುವುದು ಶತಸಿದ್ಧ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಾಂಡವಪುರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಅದ್ದೂರಿ ಸ್ವಾಗತ:  

ಸಕ್ಕರೆನಾಡು ಮಂಡ್ಯ ಜಿಲ್ಲೆಯ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪಾಂಡವಪುರದಲ್ಲಿ ‘ಜನರೊಂದಿಗೆ ಜನತಾದಳ’ ಹಾಗೂ ಪಕ್ಷದ 25 ವರ್ಷದ ರಜತ ಮಹೋತ್ಸವ ಸಮಾರಂಭದ ನಿಮಿತ್ತ ಆಗಮಿಸಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಮಂಡ್ಯ ಸರ್ಕಲ್‌ನಲ್ಲಿ ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಹಾಕಿ ಭವ್ಯ ಸ್ವಾಗತ ಕೋರಲಾಯಿತು.

ಬಳಿಕ ಸಹಸ್ರಾರು ಯುವಕರು, ಕಾರ್ಯಕರ್ತರು ಹಾಗೂ ತಾಯಂದಿರ ಸಮ್ಮುಖದಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಪಟ್ಟಣಕ್ಕೆ ಆಗಮಿಸಿದ ಯುವ ನಾಯಕರಿಗೆ ದಾರಿಯುದ್ದಕ್ಕೂ ಸಾರ್ವಜನಿಕರು ಪಟಾಕಿ ಸಿಡಿಸಿ, ಹೂಮಳೆಗರೆದು ಅದ್ದೂರಿಯಾಗಿ ಸ್ವಾಗತಿಸಿದರು.

ತಾಲ್ಲೂಕಿನ ಮಹಾಜನತೆ ಬೃಹತ್ ಹೂವಿನ ಹಾರ, ಮೂಸಂಬಿ ಹಾರ ಹಾಗೂ ಬೆಲ್ಲದ ಹಾರ ಹಾಕಿ ಬೃಹತ್ ವೇದಿಕೆಗೆ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ಡಿ.ಸಿ. ತಮ್ಮಣ್ಣ, ಜಿ.ಬಿ. ಶಿವಕುಮಾರ್, ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ. ಕೃಷ್ಣಾರೆಡ್ಡಿ, ಜಿಲ್ಲಾಧ್ಯಕ್ಷ ಡಿ. ರಮೇಶ್, ಡಾ. ಕೆ. ಅನ್ನದಾನಿ, ವಿಧಾನಪರಿಷತ್ ಸದಸ್ಯ ಮಂಜೇಗೌಡ, ರಾಮಚಂದ್ರು, ಕಂಸಾಗರ ರವಿ, ರಾಮೇಗೌಡ, ಜಿಪಂ ಮಾಜಿ ಸದಸ್ಯರಾದ ಅಶೋಕ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇಶ್ ಸೇರಿದಂತೆ ನೂರಾರು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.