ಮೈಸೂರು : ಕಾರ್ಮಿಕ ದಿನಾಚರಣೆಯ ಅಂಗವಾಗಿ ನಗರದ ವೈಭವಿ ಸಿಲ್ಕ್ ಅಂಡ್ ಸ್ಯಾರಿಸ್ ವತಿಯಿಂದ ಸುಮಾರು 75 ಮಹಿಳಾ ಆಟೋ ಚಾಲಕರಿಗೆ ಆಹಾರ ಕಿಟ್ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮತ್ತು ಸಾಮಾಜಿಕ ಕಾಳಜಿಯ ಸಂದೇಶ ಸಾರಲಾಯಿತು.
ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಟೋ ಚಾಲಕರಿಗೆ ಅಕ್ಕಿ, ವಿವಿಧ ಧಾನ್ಯಗಳು, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ದಿನಸಿ ಸಾಮಗ್ರಿಗಳಿರುವ ಆಹಾರ ಕಿಟ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳಾ ಆಟೊ ಚಾಲಕರು ಸಂಸ್ಥೆಯ ಈ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಿಟ್ ವಿತರಿಸಿ ಮಾತನಾಡಿದ ವಿಜಯ್ ಸೂರ್ಯ ಅವರ ಪುತ್ರಿ ಅಂಜಲಿ ಅವರು, ದಿನದಿಂದ ದಿನಕ್ಕೆ ಆಟೋ ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮಹಿಳಾ ಆಟೋ ಚಾಲಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ಕಾರ್ಮಿಕ ದಿನಾಚರಣೆಯ ಅಂಗವಾಗಿ ಈ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಜಯ್ ಸೂರ್ಯ ಮಾತನಾಡಿ, `ನಾನು ಹಿಂದೆ ಆಟೋ ಓಡಿಸಿ ನನ್ನ ಜೀವನ ನಡೆಸುತ್ತಿದ್ದೆ, ಆಟೋ ಚಾಲಕರ ಕಷ್ಟ ಹಾಗೂ ಶ್ರಮ ಏನೆಂಬುದು ನನಗೆ ಚೆನ್ನಾಗಿ ತಿಳಿದಿದೆ. ಅವರ ದೈನಂದಿನ ಬದುಕಿಗೆ ಒಂದಷ್ಟು ಸಹಾಯವಾಗಲಿ ಎಂಬ ಆಶಯದಿಂದ ಈ ಸೇವಾ ಕಾರ್ಯ ನಡೆಸುತ್ತಿದ್ದೇನೆ' ಎಂದು ಹೇಳಿದರು.
ಸಮಾಜದ ಎಲ್ಲ ವರ್ಗಗಳಿಗೂ ನೆರವಾಗುವ ಉದ್ದೇಶದಿಂದ ಮುಂದೆಯೂ ಇಂತಹ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮುಂದುವರಿಸಲಾಗುವುದು ಎಂದು ಸಂಸ್ಥೆಯವರು ತಿಳಿಸಿದರು. ಕಾರ್ಯಕ್ರಮದಲ್ಲಿ ಆಟೋ ಚಾಲಕರು, ಸಂಸ್ಥೆಯ ಸಿಬ್ಬಂದಿ ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು