ಜಾತಿ ಗಣತಿಯಲ್ಲಿ ’ಮಡಿವಾಳ’ ಎಂದೇ ಬರೆಸಿ: ಮೈಸೂರು ಜಿಲ್ಲಾ ಮಡಿವಾಳರ ಮಹಾಸಂಘದ ಅಧ್ಯಕ್ಷರಾದ ಚನ್ನಕೇಶವ ಸಲಹೆ

 
 ವರದಿ: ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು: ಸೆ.22 ರಿಂದ ರಾಜ್ಯ ಸರ್ಕಾರ ನಡೆಸುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ(ಜಾತಿ ಗಣತಿ) ಯಲ್ಲಿ ಮಡಿವಾಳ ಸಮುದಾಯದವರು ಕೇವಲ ‘ಮಡಿವಾಳ’ ಎಂದಷ್ಟೇ ಬರೆಸಬೇಕು ಎಂದು ಮೈಸೂರು ಜಿಲ್ಲಾ ಮಡಿವಾಳರ ಮಹಾಸಂಘದ ಅಧ್ಯಕ್ಷರಾದ ಚನ್ನಕೇಶವ ಹೇಳಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮಡಿವಾಳ ಸಮುದಾಯದವರು ಯಾವುದೇ ಉಪ ಜಾತಿಗಳನ್ನು ಬರೆಸಬಾರದು, ಕಳೆದ ಸಮೀಕ್ಷೆಗಳಲ್ಲಿ ನಮ್ಮ ಸಮುದಾಯದ ಜನರು ಉಪ ಜಾತಿಗಳನ್ನು ಬರೆಸಿದ್ದ ಕಾರಣ ಮಡಿವಾಳ ಸಮುದಾಯದ ಜನಸಂಖ್ಯೆ ಕಡಿಮೆ ತೋರಿಸಲಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರವೊಂದರಲ್ಲೇ ಮಡಿವಾಳ ಸಮುದಾಯದ ಮತದಾರರು 1.18 ಲಕ್ಷ ಸಂಖ್ಯೆಯಲ್ಲಿ ಇದ್ದಾರೆ. ಸೊರಬಾ ವಿಧಾನಸಭಾ ಕ್ಷೇತ್ರದಲ್ಲಿ

ಮಡಿವಾಳರ ಜನಸಂಖ್ಯೆ 48 ಸಾವಿರ ಇದೆ, ಇವೆಲ್ಲವೂ ಅಧಿಕೃತ ಮಾಹಿತಿಯಾಗಿದೆ. ರಾಜ್ಯದ 31 ಜಿಲ್ಲೆಗಳಲ್ಲಿ ನಾವು ಒಂದು ಜಿಲ್ಲೆಯಲ್ಲಿ ಸರಾಸರಿ 55 ಸಾವಿರ ಸಂಖ್ಯೆಯಲ್ಲಿ ಇದ್ದೇವೆ. ನಮ್ಮ ಸಮುದಾಯದ ಜನ ಸಂಖ್ಯೆಯನ್ನು ಕಡಿಮೆ ತೋರಿಸುವ ಹುನ್ನಾರವೂ ನಡೆದಿದೆ. ಈ ಕಾರಣದಿಂದ ಮಡಿವಾಳರು ಸಮೀಕ್ಷೆಯಲ್ಲಿ ಜಾಗೃತಿಯಿಂದ ಜಾತಿ ನಮೂದಿಸುವಾಗ ಮಡಿವಾಳ ಎಂದು ಬರೆಸಬೇಕು. ಆಗ ನಮ್ಮ ಸಮುದಾಯದ ನಿಖರ ಸಂಖ್ಯೆ ಗೊತ್ತಾಗಿ ಸರ್ಕಾರದಿಂದ ನಾವು ಅಗತ್ಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದರು.

ಪರಿಶಿಷ್ಟ ಜಾತಿಗೆ ಸೇರಿಸಿ: 

ಮಡಿವಾಳ ಸಮುದಾಯವನ್ನು ಪಕ್ಕದ ಆಂದ್ರ, ಕೇರಳ ಮತ್ತು ತಮಿಳುನಾಡಿನಲ್ಲಿ ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಆದರೇ ಕರ್ನಾಟಕದಲ್ಲಿ ಕಳೆದ 30 ವರ್ಷಗಳಿಂದ ಈ ಬಗ್ಗೆ ಹೋರಾಟ ನಡೆಯುತ್ತಿದ್ದರೂ ಯಾರೂ ಗಮನ ಹರಿಸುತ್ತಿಲ್ಲ, ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರಾಗಿದ್ದು, ಅವರು ಈ ಬಾರಿ ನಮ್ಮ ಸಮುದಾಯವನ್ನು ಪರಿಶಿಷ್ಟಜಾತಿಗೆ ಸೇರಿಸುವ ಮೂಲಕ ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ದುದ್ದಗೆರೆ ಶಿವಣ್ಣ, ಆಲನಹಳ್ಳಿ ಸಿದ್ದಪ್ಪಾಜಿ, ದುದ್ದಗೆರೆ ಜಯರಾಮು, ಪ್ರಶಾಂತ್ ಎಸ್.ಜೆ., ರಂಗಸ್ವಾಮಿ, ಶಂಕರ್, ಮಧುರಾಜು, ಶಿವಶಂಕರ್, ರವಿಚಂದ್ರ, ರಾಜೇಶ್ ಇದ್ದರು.