ಮೈಸೂರು : ಬುಧವಾರ ಮಧ್ಯರಾತ್ರಿ ನಗರದ ಅಲ್ ಅನ್ಸಾರ್ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ದಿ ಕರ್ನಾಟಕ ಪ್ರೊಹಿಬಿಷನ್ ಆಫ್ ವಾಯಿಲೆನ್ಸ್ ಅಗೆನಸ್ಟ್ ಮೆಡಿಕೇರ್ ಸರ್ವಿಸ್ ಪರ್ಸನಲ್ ಅಂಡ್ ಡ್ಯಾಮೇಜ್ ಟು ಪ್ರಾಪರ್ಟಿ ಇನ್ ಮೆಡಿಕೇರ್ ಸರ್ವೀಸ್ ಇನ್ಸ್‍ಟಿಟ್ಯೂಷನ್ ಆಕ್ಟ್-2009 ಪ್ರಕಾರ ಮತ್ತು ಬಿಎನ್‍ಸಿ-2023 ಕಲಂ 115(2), 126(2), 351 (2), 352 ಪ್ರಕಾರ ಕೇಸು ದಾಖಲಿಸಲಾಗಿದೆ.
ಒಟ್ಟು ಮೂವರು ದುಷ್ಕರ್ಮಿಗಳು ವೈದ್ಯರ ಮೇಲೆ ಹಲ್ಲೆ ನಡೆಸಿರುವುದು ಸಿಸಿ ಟಿವಿ ದೃಶ್ಯದಲ್ಲಿ ಕಂಡುಬಂದಿದೆ. ಅಲ್ ಅನ್ಸಾರ್ ಆಸ್ಪತ್ರೆ ಆಡಳಿತ ಮಂಡಳಿ ಸಹ ಆರೋಪಿಗಳ ವಿರುದ್ಧ ಪ್ರತ್ಯೇಕ ದೂರು ನೀಡಿದೆ ಎನ್ನಲಾಗಿದೆ. ಅಲ್ಲದೇ ಹಲ್ಲೆ ನಡೆದ ಸಂಪೂರ್ಣ ಘಟನಾವಳಿಯು ಆಸ್ಪತ್ರೆಯ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಅದನ್ನು ಆಸ್ಪತ್ರೆ ಬಿಡುಗಡೆ ಮಾಡಿದೆ.
ಘಟನೆ ವಿವರ:
ಬುಧವಾರ ಮಧ್ಯರಾತ್ರಿ ಸುಮಾರು 12 ಗಂಟೆಗೆ ಕೈ ಬೆರಳಿಗೆ ಪೆಟ್ಟು ಮಾಡಿಕೊಂಡಿದ್ದ 7 ವರ್ಷದ ಬಾಲಕಿಯೊಬ್ಬಳನ್ನು ಮೂವರು ಪುರುಷರು ಮತ್ತು ನಾಲ್ವರು ಮಹಿಳೆಯರು ಅಲ್ ಅನ್ಸಾರ್ ಆಸ್ಪತ್ರೆಗೆ ಕರೆತಂದರು. ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಡಾ.ರೇಹಾನ್ ಅಹಮದ್ ಕೂಡಲೇ ಬಾಲಕಿಗೆ ಪ್ರಥಮ ಚಿಕಿತ್ಸೆ ನೀಡಿ, ಎಕ್ಸ್‍ರೇ ತೆಗೆಸಲು ಹೇಳಿದರು. ಎಕ್ಸ್‍ರೇ ವರದಿಯಲ್ಲಿ ಯಾವುದೇ ಮೂಳೆ ಮುರಿತದಂತಹ ಗಂಭೀರ ಗಾಯ ಇಲ್ಲದ ಕಾರಣ ಬೆರಳಿನ ಗಾಯಕ್ಕೆ ಚಿಕಿತ್ಸೆ ನೀಡುತ್ತಿದ್ದ ವೇಳೆ ಏಕಾಏಕಿ ಮೂವರು ದುಷ್ಕರ್ಮಿಗಳು ಎಮರ್ಜೆನ್ಸಿ ವಾರ್ಡಿಗೆ ನುಗ್ಗಿ ವೈದ್ಯರಿಗೆ ಮುಷ್ಠಿಯಿಂದ ಥಳಿಸಿ ಹಲ್ಲೆ ನಡೆಸಿ, ಪರಾರಿಯಾದರು ಎನ್ನಲಾಗಿದೆ. ಘಟನೆಯಿಂದ ವೈದ್ಯರು ಮತ್ತು ನರ್ಸ್‍ಗಳು ಗಾಭರಿಗೊಂಡಿದ್ದರು.
ಬಳಿಕ ಹಲ್ಲೆಗೊಳಗಾದ ವೈದ್ಯರು, ಆಸ್ಪತ್ರೆಗೆ ಮಾಹಿತಿ ನೀಡಿ, ತಮ್ಮ ಪೋಷಕರನ್ನು ಕರೆಸಿ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಲಷ್ಕರ್ ಪೊಲೀಸ್ ಠಾಣೆಯಲ್ಲಿ ಘಟನೆ ಬಗ್ಗೆ ದೂರು ನೀಡಿ ಹಲ್ಲೆಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
