ಪಾಂಡವಪುರ ಪಟ್ಟಣದ ರೈತಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ವಕೀಲ ತಾಹೇರ್ ಹುಸೇನ್ ಮೇಲುಕೋಟೆ ಕ್ಷೇತ್ರದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ತಮ್ಮ ಬೆಂಬಲ ಘೋಷಿಸಿದರು.
ಪಾಂಡವಪುರ : ಜಾತ್ಯತೀತ ತತ್ವಗಳ ಪರಿಪಾಲನೆ ಮತ್ತು ವಿಧಾನಸಭೆಯಲ್ಲಿ ರೈತಪರ ದನಿಯನ್ನು ಮೊಳಗಿಸಲು ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ನೀಡುತ್ತಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ವಕೀಲ ತಾಹೇರ್ ಹುಸೇನ್ ಹೇಳಿದರು.
ಪಟ್ಟಣದ ರೈತಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದ 224 ಕ್ಷೇತ್ರಗಳ ಪೈಕಿ ನಮ್ಮ ಪಕ್ಷದಿಂದ ಕೊರಟಗೆರೆ ಮತ್ತು ಚಿಕ್ಕನಾಯಕನಹಳ್ಳಿ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡುತ್ತಿದ್ದು, ಉಳಿದ ಕಡೆ ಜಾತ್ಯತೀತ ನಿಲುವು ಹೊಂದಿರುವ, ರೈತಪರ, ಚಳವಳಿಗಾರರು ಮತ್ತು ಹೋರಾಟಗಾರ ಅಭ್ಯರ್ಥಿಗಳಿಗೆ ನಮ್ಮ ಪಕ್ಷ ಬೆಂಬಲ ನೀಡುತ್ತಿದೆ. ನಾವು ಯಾವುದೇ ರಾಷ್ಟ್ರಮಟ್ಟದ ಅಥವಾ ಪ್ರಾದೇಶಿಕ ಪಕ್ಷಗಳಿಗೆ ಬೆಂಬಲ ನೀಡುತ್ತಿಲ್ಲ ಎಂದರು.
ರೈತ, ದಲಿತ, ಅಲ್ಪಸಂಖ್ಯಾತ, ಕೂಲಿ ಕಾರ್ಮಿಕ, ಮಹಿಳೆಯರ ಪರ ದನಿಯಾಗುವ ಅಭ್ಯರ್ಥಿಗಳು ವಿಧಾನಸಭೆಗೆ ಆರಿಸಿ ಬರಬೇಕು. ಈ ನಿಟ್ಟಿನಲ್ಲಿ ನಾವು ಅಂತಹ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದ್ದೇವೆ. ಜಾತ್ಯತೀತ ಮತಗಳು ಕ್ರೂಢೀಕರಣವಾದಲ್ಲಿ ದರ್ಶನ್ ಪುಟ್ಟಣ್ಣಯ್ಯ ಗೆಲುವು ಸುಲಭವಾಗುತ್ತದೆ. ಈಗಾಗಲೇ ಕ್ಷೇತ್ರದಲ್ಲಿ ಅವರಿಗೆ ಅಪಾರ ಬೆಂಬಲ ವ್ಯಕ್ತವಾಗಿದೆ ಎಂದರು.
ಮಂಡ್ಯ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮೊಹಮ್ಮದ್ ತಾಹೇರ್ ಮಾತನಾಡಿ, ಭಾರತೀಯ ಜನತಾ ಪಕ್ಷ ಮುಸ್ಲಿಂ ಸಮುದಾಯಕ್ಕೆ ಕಿರುಕುಳ ನೀಡಲೆಂದೇ ಯೋಜಿತ ಕೃತ್ಯಗಳಾದ ಹಿಜಾಬ್, ಹಲಾಲ್, ಸಿಎಎ, ಎನ್‍ಆರ್‍ಸಿ ಮುಂತಾದ ಮುಸ್ಲಿಂ ವಿರೋಧಿ ಧೋರಣೆಗಳನ್ನು ಸೃಷಿಸಿ ಧರ್ಮ ಮತ್ತು ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿದ್ದ ಸಂದರ್ಭದಲ್ಲಿ ರೈತಸಂಘ ಮುಸ್ಲಿಂ ಪರ ದನಿಯಾಗಿ ತನ್ನ ಜಾತ್ಯತೀತ ನಿಲುವು ಪ್ರದರ್ಶಿಸಿತ್ತು. ಈ ಕಾರಣದಿಂದ ಮುಸ್ಲಿಂ ಒಕ್ಕೂಟ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ಸೂಚಿಸಿದೆ ಎಂದರು.
ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ದೆಹಲಿ, ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳು ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ರೈತಪರ ಹೋರಾಟಗಾರರು ಮೇಲುಕೋಟೆ ಕ್ಷೇತ್ರಕ್ಕೆ ಬಂದು ದರ್ಶನ್ ಪುಟ್ಟಣ್ಣಯ್ಯ ಪರ ಪ್ರಚಾರ ನಡೆಸುತ್ತಿದ್ದಾರೆ. ವಿವಿಧ ಪಕ್ಷಗಳು ಮತ್ತು ಸಂಘಟನೆಗಳು ನಮಗೆ ಬೇಷರತ್ ಬೆಂಬಲ ನೀಡುತ್ತಿರುವುದು ಉತ್ತಮ ಬೆಳವಣಿಯಾಗಿದ್ದು, ಮೇಲುಕೋಟೆ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಪಿ.ನಾಗರಾಜು, ಮುಖಂಡರಾದ ಕಾಳೇಗೌಡ, ಧರ್ಮರತ್ನಾಕರ, ಬಳ್ಳಾರಿಯ ಎಂ.ಎಲ್.ಕೆ.ನಾಯ್ಡು ಮುಂತಾದವರು ಇದ್ದರು.
0 ಕಾಮೆಂಟ್‌ಗಳು