ಮೇಲುಕೋಟೆ ಕ್ಷೇತ್ರದ ಮತದಾರರಿಗೆ ಅವಮಾನ ಮಾಡುತ್ತಿರುವ ದೇವನೂರು ಮಹಾದೇವ : ದಸಂಸ ಮುಖಂಡರ ಆರೋಪ

ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕುರುಡು ಕಾಂಚಾಣ ಹರಿದಾಡುತ್ತಿದೆ ಎಂದು ಹೇಳುವ ಮೂಲಕ ಸಾಹಿತಿ ದೇವನೂರು ಮಹದೇವ ಅವರ ಮೇಲುಕೋಟೆ ಕ್ಷೇತ್ರದ ಮತದಾರರಿಗೆ ಅವಮಾನ ಮಾಡಿದ್ದಾರೆ ಎಂದು ದಸಂಸ ಮುಖಂಡ ಎಂ.ವಿ.ಕೃಷ್ಣ ಆರೋಪಿಸಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಹಿತಿ ದೇವನೂರು ಮಹದೇವ ಅವರ ಬಗ್ಗೆ ನಮಗೆ ಗೌರವವಿದೆ. ಅವರೊಬ್ಬ ಸಾಹಿತಿಗಳಾಗಿ ಸಮಾಜಕ್ಕೆ ಮಾದರಿಯಾಗಿರಬೇಕು. ಅದನ್ನು ಬಿಟ್ಟು ಪದೇ ಪದೇ ಮೇಲುಕೋಟೆ ಕ್ಷೇತ್ರಕ್ಕೆ ಬಂದು ಜೆಡಿಎಸ್ ಅಭ್ಯರ್ಥಿಯನ್ನು ಟಾರ್ಗೆಟ್ ಮಾಡಿಕೊಂಡು ಕುರುಡು ಕಾಂಚಾಣ ಹರಿದಾಡುತ್ತಿದೆ ಎಂದು ಹೇಳುವ ಮೂಲಕ ಕ್ಷೇತ್ರದ ಮತದಾರರಿಗೆ ಅವಮಾನ ಮಾಡಬೇಡಿ ಎಂದು ಕಿಡಿಕಾರಿದರು.
ನಿಮ್ಮ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಕಳೆದ ಚುನಾವಣೆಯಲ್ಲಿ ನಾನು ಕ್ಷೇತ್ರದಲ್ಲಿಯೇ ಇದ್ದು ಜನರ ಸೇವೆ ಮಾಡುತ್ತೇನೆ ಎಂದು ಹೇಳಿ ಕ್ಷೇತ್ರದ ಮತದಾರರಿಂದ 70 ಸಾವಿರಕ್ಕೂ ಅಧಿಕ ಮತ ಪಡೆದು, ಸೋತ ಬಳಿಕ ಅಮೇರಿಕಕ್ಕೆ ಹೋಗಿ ಸೇರಿಕೊಂಡು ನಾಲ್ಕುವರೆ ವರ್ಷ ಕ್ಷೇತ್ರದ ಕಡೆ ತಲೆಹಾಕಲಿಲ್ಲ. ಜನರ ಕಷ್ಟ ಸುಖ ಕೇಳಲಿಲ್ಲ. ಯಾವ ನೈತಿಕತೆ ಇಟ್ಟುಕೊಂಡು ಜನರ ಬಳಿ ಮತ ಕೇಳುತ್ತೀರಿ. ಸೋಲಿನ ಭೀತಿಯಿಂದ ಕ್ಷೇತ್ರಕ್ಕೆ ಬಂದು ಅಪ ಪ್ರಚಾರ ಮಾಡಬೇಡಿ ಎಂದು ಆಕ್ರೋಶ ಹೊರಹಾಕಿದರು.
ಮುಖಂಡ ಬೊಮ್ಮರಾಜು ಮಾತನಾಡಿ, ಕ್ಷೇತ್ರದಲ್ಲಿ ಜೆಡಿಎಸ್‍ನಲ್ಲಿ ಮಾತ್ರ ಕುರುಡು ಕಾಂಚಾಣ ಹರಿದಾಡುತ್ತಿದೆಯೋ.? ರೈತ ಸಂಘದವರಿಂದ ಕುರುಡು ಕಾಂಚಾಣ ಹರಿದಾಡುತ್ತಿಲ್ವಾ.? ದರ್ಶನ್‍ಪುಟ್ಟಣ್ಣಯ್ಯ ನಾಮಪತ್ರ ಸಲ್ಲಿಸುವ ಕಾರ್ಯಕ್ರಮಕ್ಕೆ ಬರುವ ಜನರಿಗೆ 200, 300 ರೂ. ಹಣವನ್ನು ರೈತಸಂಘದವರು ಹಂಚಿಕೆ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವುದು ನಿಮಗೆ ಗೊತ್ತಿಲ್ಲವೇ.? ದರ್ಶನ್‍ಪುಟ್ಟಣ್ಣಯ್ಯ ಅವರು ಸಹ ಮಹಿಳೆಯರಿಗೆ ಸೀರೆ ಹಂಚಿಕೆ ಮಾಡಲು ಈಗಾಗಲೇ  ಗ್ರಾಮಗಳಿಗೆ ಸೀರೆಗಳನ್ನು ನೀಡಿದ್ದಾರೆ ಎನ್ನುವ ಮಾತುಗಳು ನಮಗೂ ಸಹ ಅಂಗಡಿ ಮುಂಗಟ್ಟಿನ ಬಳಿ ಕೇಳಿ ಬರುತ್ತಿವೆ ಎಂದು ಆರೋಪಿಸಿದರು.
ದೇವನೂರು ಮಹದೇವ ಅವರಿಗೆ ಕ್ಷೇತ್ರದ ಬಗ್ಗೆ ಹೆಚ್ಚಿನ ಅರಿವು ಇಲ್ಲ. ಕ್ಷೇತ್ರದ ಕೆಲವು ಸ್ವಯಂ ಘೋಷಿತ ಚಿಂತಕರು ಅವರನ್ನು ಕರೆತಂದು ಅವರಿಂದ ಹೇಳಿಕೆ ಕೊಡಿಸಿ ಗೊಂದಲ ಸೃಷ್ಠಿಸುತ್ತಿದ್ದಾರೆ. ನಿಮ್ಮ ಅಭ್ಯರ್ಥಿಯ ಸಾಧನೆಗಳನ್ನು ಮುಂದಿಟ್ಟುಕೊಂಡು ಮತ ಕೇಳಿ ಅದನ್ನು ಬಿಟ್ಟು ಅಪಪ್ರಚಾರ ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ ಎಂದು ಹರಿಹಾಯ್ದರು.
ವಕೀಲ ಕಣಿವೆ ಯೋಗೇಶ್ ಮಾತನಾಡಿ, ಕಾಂಗ್ರೆಸ್ ಒಂದು ಸುಡುವ ಮನೆ ಅಲ್ಲಿಗೆ ದಲಿತರು ಹೋದರೆ ಸುಟ್ಟುಹೋಗುತ್ತಾರೆ ಎಂದು ಅಂಬೇಡ್ಕರ್ ಹೇಳಿದ್ದಾರೆ. ಈ ಬಗ್ಗೆ ದೇವನೂರು ಅವರು ಈ ಹಿಂದೆಯೇ ಕಾಂಗ್ರೆಸ್-ಬಿಜೆಪಿ ಕಿತ್ತೊಗೆದು ಜಾತ್ಯತೀತ ಶಕ್ತಿಕಟ್ಟಿ ಎಂದು ಹೇಳಿದವರು ಈಗ ಕಾಂಗ್ರೆಸ್ ಬೆಂಬಲಿಸುತ್ತಿರುವುದು ಯಾವ ನ್ಯಾಯ? ಮೇಲುಕೋಟೆ ಕ್ಷೇತ್ರದಲ್ಲಿ ಅಂಬೇಡ್ಕರ್ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡು ದಲಿತರಿಗೆ ಹಕ್ಕು ಅಧಿಕಾರಗಳನ್ನು ಶಾಸಕರಾದ ಸಿ.ಎಸ್.ಪುಟ್ಟರಾಜು ನೀಡಿದ್ದಾರೆ. ಪುಟ್ಟಣ್ಣಯ್ಯ ಅವರು ಶಾಸಕರಾಗಿದ್ದಾಗ ದಲಿತರ, ಶೋಷಣೆ, ದಬ್ಬಾಳಿಕೆ ನಡೆದಿವೆ. ಸಿ.ಎಸ್.ಪುಟ್ಟರಾಜು ಅವರು ಶಾಸಕರಾದ ಬಳಿಕ ಕ್ಷೇತ್ರದಲ್ಲಿ ಒಂದೇ ಒಂದು ಅಟ್ರಾಸಿಟಿ ಕೇಸು ದಾಖಲಾಗಿಲ್ಲ. ನೀವು ಕೂಡ ನಿಮ್ಮ ಸಮಾವೇಶಗಳಿಗೆ ಜನರನ್ನು ದುಡ್ಡು ಕೊಟ್ಟು  ಕರೆ ತಂದಿದ್ದೀರಿ ಎಂದು ಕ್ಷೇತ್ರದ ಜನರಿಗೆ ಗೊತ್ತಿದೆ. ಮತದಾರರು ನಿಮ್ಮ ಅಭ್ಯರ್ಥಿಗೆ ಚುನಾವಣೆಯಂದು ತಕ್ಕ ಉತ್ತರ ನೀಡಲಿದ್ದಾರೆ ಎಂದು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡರಾದ ಅಲ್ಪಳ್ಳಿ ಗೋವಿಂದಯ್ಯ, ಟೌನ್‍ಚಂದ್ರ, ಶಿವಶಂಕರ್, ಧರ್ಮಾತ್ಮ, ಎಂ.ಎ.ಮಂಜು, ಬನ್ನಂಗಾಡಿ ಯೋಗೇಶ್, ಪ್ರಮೋದ, ಗಣೇಶ್, ಮೋಹನ್‍ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು