ನದಿಗೆ ಹಾರಿ ಇಬ್ಬರು ವಿವಾಹಿತರ ಆತ್ಮಹತ್ಯೆ: ಅಕ್ರಮ ಸಂಬಂಧ ಶಂಕೆ
ಜನವರಿ 08, 2023
ತಿ.ನರಸೀಪುರ: ಪ್ರತ್ಯೇಕವಾಗಿ ವಿವಾಹವಾಗಿದ್ದ ಪುರುಷ ಮತ್ತು ಮಹಿಳೆಯೊಬ್ಬರು ಒಟ್ಟಿಗೆ ಕಪಿಲ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿ.ನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಲಕ್ಕೂರು ಗ್ರಾಮದ ರಾಚಯ್ಯ ಎಂಬವರ ಪುತ್ರ ಮಣಿಕಂಠ (28) ಮತ್ತು ಹಾಲಹಳ್ಳಿ ಗ್ರಾಮದ ವಸಂತ (29) ಎಂಬ ಇಬ್ಬರು ಒಟ್ಟಿಗೆ ಸೇರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಇಬ್ಬರು ಪ್ರತ್ಯೇಕ ಮದುವೆಯಾಗಿದ್ದರೂ ಒಟ್ಟಿಗೆ ಸೇರಿ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆದಾಗ್ಯೂ ಇಬ್ಬರ ಆತ್ಮಹತ್ಯೆಗೆ ನಿಖರ ಕಾರಣಗಳು ತಿಳಿದು ಬಂದಿಲ್ಲ. ಮೈಸೂರಿನಲ್ಲಿ ಅಮೆಜಾನ್ ಕಂಪೆನಿಯ ಆಫೀಸ್ ಬಾಯ್ ಆಗಿದ್ದ ಮಣಿಕಂಠ ಹೊನ್ನೂರಿನ ಜ್ಯೋತಿ ಎಂಬುವವರನ್ನು ಮದುವೆಯಾಗಿ ಮೈಸೂರಿನ ಜಯದೇವ ನಗರದಲ್ಲಿ ನೆಲೆಸಿದ್ದರು. ಮಣಿಕಂಠ ಅವರ ಸಂಬಂಧಿಯಾದ ವಸಂತ ಮೈಸೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರುವ ಉದ್ದೇಶದಿಂದ ಸಂದರ್ಶನ ನೀಡಲು ಬಂದು ಮಣಿಕಂಠನ ಮನೆಯಲ್ಲೇ ತಂಗಿದ್ದರು. ಶುಕ್ರವಾರ ಬೆಳಿಗ್ಗೆ 9 ಘಂಟೆಯಲ್ಲಿ ಮಣಿಕಂಠ ವಸಂತಳನ್ನು ಸಂದರ್ಶನಕ್ಕಾಗಿ ಜೊತೆಯಲ್ಲೇ ಕರೆದೊಯಿದ್ದಾನೆ. ಮದ್ಯಾಹ್ನ 3.30ಕ್ಕೆ ಪತ್ನಿ ಜ್ಯೋತಿ ಮೊಬೈಲ್ ಗೆ ಮಣಿಕಂಠ ಮತ್ತು ವಸಂತ ಬಲಮುರಿಗೆ ಬಂದಿರುವ ಫೋಟೋ ತಲುಪಿದೆ. ನಂತರ ಅಪರಿಚಿತ ಧ್ವನಿಯಲ್ಲಿ ಹಣ ನೀಡದಿದ್ದರೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವ ಬೆದರಿಕೆ ಕರೆ ಸ್ವತಃ ಮಣಿಕಂಠನ ಮೊಬೈಲ್ ನಿಂದಲೇ ಬಂದಿತ್ತೆಂದು ಅವನ ಪತ್ನಿ ದೂರಿನಲ್ಲಿ ತಿಳಿಸಿದ್ದಾಳೆ. ನಂತರ ಮಣಿಕಂಠನ ಮೊಬೈಲ್‍ಗೆ ಹೆಂಡತಿ ಕರೆ ಮಾಡಿ ವಿಚಾರಿಸಿದಾಗ ಅರ್ಧಗಂಟೆಯಲ್ಲಿ ಮನೆಗೆ ಬರುವುದಾಗಿ ತಿಳಿಸಿದ್ದಾನೆ. ತಕ್ಷಣ ಹೆಂಡತಿ ಮೊಬೈಲ್ ಗೆ ಮಣಿಕಂಠನೇ ಕರೆ ಮಾಡಿ 'ನಾನು ತಪ್ಪು ಮಾಡಿದ್ದೇನೆ ,ಮನೆಗೆ ಬರುವುದಿಲ್ಲ'ಎಂದು ಹೇಳಿ ಕರೆ ಕಡಿತಗೊಳಿಸಿದ್ದಾನೆ. ಪತಿ ಮನೆಗೆ ಬಾರದೆ ಇರುವುದರಿಂದ ಭಯಭೀತಗೊಂಡ ಪತ್ನಿ ರಾತ್ರಿ 12 ಗಂಟೆ ಸಮಯದಲ್ಲಿ ತನ್ನ ಪತಿಯ ಮೊಬೈಲ್‍ಗೆ ಕರೆ ಮಾಡಲಾಗಿ ನರಸೀಪುರ ಪೊಲೀಸರು ಕರೆ ಸ್ವೀಕರಿಸಿ ಮಣಿಕಂಠ ಮತ್ತು ವಸಂತ ಇಬ್ಬರು ಒಟ್ಟಿಗೆ ಸೇರಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದು ದೂರು ದಾಖಲಿಸಿದ್ದಾರೆ. ಈ ಬಗ್ಗೆ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.