ವಿಶ್ವವಿಖ್ಯಾತ ಕೆಆರ್‌ಎಸ್‌ ಬೃಂದಾವನ ಗಾರ್ಡನ್‌ನಲ್ಲಿ ಚಿರತೆ ಸೆರೆ ಮತ್ತೆರಡು ಚಿರತೆ ಇರುವ ಶಂಕೆ ವ್ಯಕ್ತಪಡಿಸಿದ ಅರಣ್ಯಾಧಿಕಾರಿಗಳು

ಶ್ರೀರಂಗಪಟ್ಟಣ: ಕಳೆದ ಮೂರು ತಿಂಗಳಿನಿಂದ ವಿಶ್ವ ವಿಖ್ಯಾತ ಕೃಷ್ಣರಾಜಸಾಗರ ಜಲಾಶಯದ ಬೃಂದಾವನ ಗಾರ್ಡನ್‌ ಪೊದೆಗಳಲ್ಲಿ ಸೇರಿಕೊಂಡು ಅರಣ್ಯಾಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.
ಬೃಂದಾವನ ಗಾರ್ಡನ್ ಬಳಿಯ ಉತ್ತರದ ಗೇಟ್ ಬಳಿಯ ವಿಸಿ ನಾಲೆ ಹತ್ತಿರ ಕಳೆದ ಮೂರು ತಿಂಗಳ ಹಿಂದೆ ಇರಿಸಿದ್ದ ಬೋನ್ ನಲ್ಲಿ ಚಿರತೆ ಸೆರೆ ಸಿಕ್ಕಿದ್ದು, ಸುಮಾರು 5 ವರ್ಷದ ಹೆಣ್ಣು ಚಿರತೆ ಎಂದು ತಿಳಿದುಬಂದಿದೆ. ಇಂದು ಬೆಳಿಗ್ಗೆ ಸುಮಾರು ೫ ಗಂಟೆಗೆ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ವೃತ್ತ ನಿರೀಕ್ಷಕ ಸಂತೋಷ್ ಅವರು ಚಿರತೆ ಸೆರೆ ಸಿಕ್ಕಿರುವುದನ್ನು ಗಮನಿಸಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಕಳೆದ ಅಕ್ಟೋಬರ್‌ 21ರಿಂದ ನಾಲ್ಕು ಬಾರಿ ಚಿರತೆ ಕಾಣಿಸಿಕೊಂಡಿದ್ದು ಸುರಕ್ಷತೆಯ ಕಾರಣದಿಂದ ಕಾವೇರಿ ನೀರಾವರಿ ನಿಗಮ ಕಳೆದ ನವೆಂಬರ್‌ ೬ ರಿಂದ ಸುಮಾರು ಒಂದು ತಿಂಗಳ ಕಾಲ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ ಹೇರಿತ್ತು. ಅರಣ್ಯ ಇಲಾಖೆಯವರು ಚಿರತೆ ಸೆರೆಗೆ ಕಾರ್ಯಾಚರಣೆಗೆ ಮುಂದಾಗಿದ್ದರು. ಬೃಂದಾವನದಲ್ಲಿ ಚಿರತೆ ಕಾಣಿಸಿಕೊಂಡ ದಿನದಿಂದಲೂ ಅರಣ್ಯ ಇಲಾಖೆ ಬೃಂದಾವನದಲ್ಲಿ ಚಿರತೆ ಸೆರೆಗೆಕಾರ್ಯಾಚರಣೆ ನಡೆಸಿತ್ತು. 8 ಕಡೆ ಬೋನ್ ಇಟ್ಟಿದ್ದರೂ ಚಿರತೆ ಮಾತ್ರ ಬೋನಿಗೆ ಬೀಳುತ್ತಿರಲಿಲ್ಲ. ಚಿರತೆ ಪತ್ತೆಗೆ 60 ಕ್ಕೂ ಹೆಚ್ಚು ಕಡೆ ಟ್ರ್ಯಾಪ್ಕ್ಯಾಮರಾ ಅಳವಡಿಸಲಾಗಿತ್ತು. ಒಂದೆರಡು ಕಡೆ ಸಿಸಿಟಿವಿಯಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಇದರಿಂದ ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ 
 ಹೈರಾಣಾಗಿದ್ದರು. ಸ್ಥಳೀಯರ ಮಾಹಿತಿ ಪ್ರಕಾರ ಈ ಭಾಗದಲ್ಲಿ ಇನ್ನೂ ಎರಡು ಚಿರತೆಗಳಿವೆ ಎನ್ನಲಾಗಿದ್ದು, ಬೋನ್‌ಗಳನ್ನು ಮತ್ತೆ ಇಡಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು