ಸಾಲಗಾರರ ಕಾಟ ತಾಳಲಾಗದೆ ರೈತ ಆತ್ಮಹತ್ಯೆ

ಮೈಸೂರು: ಜಮೀನಿನಲ್ಲಿ ಬೆಳೆ ಬೆಳೆಯಲು ಖಾಸಗಿ ವ್ಯಕ್ತಿಗಳಿಂದ ಮಾಡಿದ್ದ ಸಾಲ ತೀರಿಸಲಾಗದೆ ಸಾಲಗಾರರ ಕಿರುಕುಳದಿಂದ ಬೇಸತ್ತು, ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕೆಂಪಿಸಿದ್ಧನ ಹುಂಡಿ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾಗಿರುವ ರೈತ ಸಣ್ಣಪ್ಪ(50) ಎಂದು ತಿಳಿದು ಬಂದಿದ್ದು, 20 ಗುಂಟೆ ಜಮೀನಿನಲ್ಲಿ ಬೆಳೆ ಬೆಳೆಯಲು ಸಾಲ ಮಾಡಿದ್ದರು ಎನ್ನಲಾಗಿದೆ. ಬೆಳೆ ಸರಿಯಾಗಿ ಬಾರದ ಕಾರಣ ಸಾಲ ತೀರಿಸಲಾಗದೆ ಮನನೊಂದು ಗ್ರಾಮದ ಸಮೀಪ ಇರುವ ಮರದ ಕೊಂಬೆಗೆ ತನ್ನ ಅಂಗಿಯಿಂದಲೇ ಕುತ್ತಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ರೈತ ಸಣ್ಣಪ್ಪ ಕುಟುಂಬಕ್ಕೆ ಆಧಾರವಾಗಿದ್ದು, ಅವರ ಸಾವಿನಿಂದ ಸಂಸಾರ ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ ಅವರು ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ನಂಜಯ್ಯ ಹಾಗೂ ಶೃತಿ ಬೀರಯ್ಯ ಒತ್ತಾಯಿಸಿದ್ದಾರೆ.
ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ರಾಮು ಅವರು  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು