ಪ,ಮಲ್ಲೇಶ್ ವಿರುದ್ಧ ಮೈಸೂರಿನಲ್ಲಿ ಬ್ರಾಹ್ಮಣ ಸಮುದಾಯದ ಪ್ರತಿಭಟನೆ
ಮೈಸೂರು : ಮಲ್ಲೇಶ ಪ್ರೈಮರಿ ಸ್ಕೂಲಲ್ಲಿ ಬ್ರಾಹ್ಮಣರಿಂದ ಪಾಠ ಕಲಿತು ಚೆನ್ನಾಗೇ ಇದ್ದ ಆಮೇಲೆ ಕಾಲೇಜಿಗೆ ಬಂದಾಗ ಏರ್‍ಲೈನ್ಸ್ ಹೋಟೆಲ್‍ನಲ್ಲಿ ಇಡೀ ರಾತ್ರಿ ಇಸ್ಪೀಟ್ ಆಡಿಕೊಂಡು ಯಕ್ಕುಟ್ಟೋದ ಎಂದು ಶಾಸಕ ರಾಮದಾಸ್ ಹಿರಿಯ ಸಮಾಜವಾದಿ ಪ.ಮಲ್ಲೇಶ್ ವಿರುದ್ಧ ವ್ಯಂಗ್ಯವಾಡಿದರು.
ಮಲ್ಲೇಶ್ ಬ್ರಾಹ್ಮಣರ ವಿರುದ್ಧ ಮಾತನಾಡುವಾಗ ವೇದಿಕೆಯಲ್ಲಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬುದ್ಧಿ ಹೇಳಬೇಕಿತ್ತು. ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಹೊರಟಿರುವ ಸಿದ್ಧರಾಮಯ್ಯ ಪ.ಮಲ್ಲೇಶ ಮಾತುಗಳನ್ನು ವಿರೋಧಿಸದಿರುವುದು ಸರಿಯಲ್ಲ. ಬ್ರಾಹ್ಮಣ ಸಮುದಾಯಕ್ಕೆ ಅವಹೇಳನವಾದಾಗ ಮೈಸೂರು ಬ್ರಾಹ್ಮಣರು ಸಮರ್ಥವಾಗಿ ಉತ್ತರ ನೀಡುತ್ತಾರೆ. ಇದಕ್ಕೆ ಇಂದಿನ ದೊಡ್ಡ ಸಂಖ್ಯೆಯ ಜನರೇ ಸಾಕ್ಷಿ ಎಂದರು.
ಕತ್ತೆಗಳು, ನಾಯಿಗಳು ರಂಪ ಮಾಡಿದ್ರೆ ಅದನ್ನು ತಹಬದಿಗೆ ತರಲು ಬ್ರಾಹ್ಮಣರಿಗೆ ಗೊತ್ತು : ಪ.ಮಲ್ಲೇಶ್ ವಿರುದ್ಧ ವಾಗ್ದಾಳಿ ನಡೆಸಿದ ಎಚ್.ವಿ.ರಾಜೀವ್
ಮೂಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ಕತ್ತೆಗಳು, ನಾಯಿಗಳು ಬೀದಿಯಲ್ಲಿ ರಂಪ ಮಾಡಿದರೆ ಅದನ್ನು ತಹಬದಿಗೆ ತರಲು ಬ್ರಾಹ್ಮಣರಿಗೆ ಗೊತ್ತು. ಅದಕ್ಕಾಗಿ ನಾವು ಇಂದು ಬೀದಿಗಿಳಿದ್ದೇವೆ ಎಂದು ಮಲ್ಲೇಶ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬ್ರಾಹ್ಮಣ ಸಮುದಾಯದ ವಿರುದ್ಧ ಇಂತಹ ಮಾತುಗಳು ಕೊನೆಗೊಳ್ಳುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ಬೀದಿಯಲ್ಲಿ ಮಾತನಾಡುವವರು ಎಚ್ಚರಿಕೆಯಿಂದ ಮಾತನಾಡಬೇಕು. ಯಾವುದೇ ಸಮುದಾಯದ ವಿರುದ್ಧ ಅವಹೇಳನ ಮಾಡಬಾರದು. ನಿಮ್ಮ ಪುಂಡು ಮಾತಿಗೆ ಹೆದರಲ್ಲ, ನಿಮ್ಮಂತಹ ಸಾವಿರ ಸಾವಿರ ಜನರನ್ನು ಸಾವಿರ ವರ್ಷಗಳಿಂದ ಈ ಸಮುದಾಯ ನೋಡಿದೆ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಮಾತನಾಡಿ, ಕರ್ನಾಟಕದ 21 ವಿಧಾನ ಸಭಾ ಕ್ಷೇತ್ರದಲ್ಲಿ ಬ್ರಾಹ್ಮಣ ಮತದಾರರೇ ನಿರ್ಣಾಯಕ, ನಮ್ಮದು 42 ಲಕ್ಷ ಜನಸಂಖ್ಯೆ ಇದೆ. ಮಲ್ಲೇಶ್ ವಿರುದ್ಧ ರಾಜ್ಯಾದ್ಯಂತ 100ಕ್ಕೂ ಹೆಚ್ಚು ದೂರು ದಾಖಲಾಗಿದ್ದು, 84 ಕಡೆ ಎಫ್‍ಐಆರ್ ಆಗಿದೆ. ಇದು ಮಲ್ಲೇಶ್ ಮಾತುಗಳಲ್ಲ ಸಿದ್ದರಾಮಯ್ಯ ಅವರ ಅಂತರಂಗದ ಮಾತುಗಳು ಎಂದು ಕಿಡಿ ಕಾರಿದರು.
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಹಿರಿಯ ಸಮಾಜವಾದಿ ಚಿಂತಕ ಪ.ಮಲ್ಲೇಶ್ ಬ್ರಾಹ್ಮಣರ ವಿರುದ್ಧ ಅವಹೇಳನಾಕಾರಿಯಾಗಿ ಮಾ ತನಾಡಿದ್ದಾರೆಂದು ಆರೋಪಿಸಿ ಸೋಮವಾರ ಬ್ರಾಹ್ಮಣ ಸಂಘ ಸಂಸ್ಥೆಗಳ ಒಕ್ಕೂಟದಿಂದ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅವರು ಮಾತನಾಡಿದರು.
ಬ್ರಾಹ್ಮಣರು ಯಾವತ್ತೂ ಜಾತಿ ತಾರತಮ್ಯ ಮಾಡಲ್ಲ :
ಸಂಸದ ಪ್ರತಾಪ್ ಸಿಂಹ ಮಾತನಾಡಿ, `ಬ್ರಾಹ್ಮಣರು ಯಾವತ್ತೂ ಜಾತಿ ತಾರತಮ್ಯ ಮಾಡಿಲ್ಲ. ದೇಶಕ್ಕೆ ಒಳ್ಳೆಯದನ್ನೇ ಮಾಡುತ್ತಿದ್ದಾರೆ. ನನ್ನನ್ನೂ ಬ್ರಾಹ್ಮಣರೇ ಬೆಳೆಸಿದ್ದಾರೆ. ಬ್ರಾಹ್ಮಣರು ಇಲ್ಲದಿದ್ದರೆ ದೇವಾಲಯಗಳು ಪಾಳು ಬೀಳುತ್ತಿದ್ದವು, ಮದುವೆ, ಮುಂಜಿ, ತಿಥಿ, ಹೋಮ, ಹವನ ಎಲ್ಲದಕ್ಕೂ ಬ್ರಾಹ್ಮಣರೇ ಬೇಕು. ಬೈಯೋದಕ್ಕೂ ಬ್ರಾಹ್ಮಣರೇ ಬೇಕಾ? ಎಂದು ಸಂಸದ ಪ್ರತಾಪ್ ಸಿಂಹ ಪ.ಮಲ್ಲೇಶ್ ವಿರುದ್ಧ ಕಿಡಿಕಾರಿ ಇವತ್ತಿನಿಂದ ಯಾವ ಮಠಗಳೂ ಮಲ್ಲೇಶ್ ಅವರನ್ನು ಸೇರಿಸಬಾರದು ಎಂದು ಇಲ್ಲಿಂದಲೇ ಕರೆ ಕೊಡುತ್ತಿದ್ದೇನೆ. ಇಂತಹ ಯದ್ವಾತದ್ವಾ ಮಾತಾಡುವವರನ್ನು ಸಿದ್ದರಾಮಯ್ಯ ಜೊತೆಗಿಟ್ಟುಕೊಳ್ಳಬಾರದು ಎಂದರು.
ನಗರದ ಶಂಕರಮಠ ವಿದ್ಯಾಶಂಕರ ಕಲ್ಯಾಣ ಮಂಟಪದ ಮುಂಭಾಗದಿಂದ ಮೆರವಣಿಗೆ ಮೂಲಕ ಹೊರಟ ಪ್ರತಿಭಟನಾಕಾರರು, ದಾರಿಯುದ್ದಕ್ಕೂ ಪ,ಮಲ್ಲೇಶ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಕಚೇರಿಗಳ ಮುಂಭಾಗ ಸೇರಿ ಮಲ್ಲೇಶ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸ ಗೌಡ, ಉಪಮೇಯರ್ ಡಾ.ರೂಪಾ, ಪಾಲಿಕೆ ಸದಸ್ಯ ಮಾ.ವಿ.ರಾಮ್ ಪ್ರಸಾದ್, ಮೂಡ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಬಿಜೆಪಿ ನಗರಧ್ಯಕ್ಷ ಟಿ.ಎಸ್.ಶ್ರೀವತ್ಸ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಭಾನುಪ್ರಕಾಶ್ ಶರ್ಮ, ವಿಕ್ರಂ ಅಯ್ಯಂಗಾರ್, ಯೋಗ ನರಸಿಂಹ, ಅಜಯ್ ಶಾಸ್ತ್ರಿ, ರಾಕೇಶ್ ಭಟ್, ಎಂ.ಬಿ.ನಾಗೇಂದ್ರ ಬಾಬು, ಎಸ್.ಭಾಷ್ಯಂ, ಕಡಕೋಳ ಜಗದೀಶ್, ಜಯಸಿಂಹ, ರಂಗನಾಥ್, ಜಿ.ಆರ್.ನಾಗರಾಜ್, ನಟರಾಜ್ ಜೋಯ್ಸ್, ಶ್ರೀಕಾಂತ್ ಕುಮಾರ್, ಕೆ.ಆರ್. ಮೋಹನ್ ಕುಮಾರ್, ಟಿ.ಎಸ್.ರವಿಶಂಕರ್, ಎನ್.ಎಂ. ನವೀನ್ ಕುಮಾರ್, ಎಚ್.ಜಿ.ಗಿರಿಧರ್ ಇನ್ನಿತರರು ಇದ್ದರು.
0 ಕಾಮೆಂಟ್‌ಗಳು