ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಪ್ರಕರಣ ವೈದ್ಯರ ಆತಂಕ : ನಿಯಮಿತ ತಪಾಸಣೆಯಿಂದ ಯಶಸ್ವಿ ಚಿಕಿತ್ಸೆ ಸಾಧ್ಯ : ಡಾ.ವೈ.ಎಸ್.ಮಾಧವಿ
ಅಕ್ಟೋಬರ್ 31, 2022
ಮೈಸೂರು : ದೇಶದೆಲ್ಲೆಡೆ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿದ್ದು, ಶೀಘ್ರ ಹಾಗೂ ನಿಯಮಿತ ತಪಾಸಣೆಯಿಂದ ಚಿಕಿತ್ಸೆ ಯಶಸ್ವಿಯಾಗಿಸಲು ಸಾಧ್ಯ ಎಂದು ಭಾರತ್ ಆಸ್ಪತ್ರೆ ಮತ್ತು ಆಂಕೊಲಾಜಿ ಸಂಸ್ಥೆಯ ಹಿರಿಯ ವಿಕಿರಣ ಆಂಕೊಲಾಜಿಸ್ಟ್ ಮತ್ತು ವೈದ್ಯಕೀಯ ಅಧೀಕ್ಷಕಿ ಡಾ.ವೈ.ಎಸ್.ಮಾಧವಿ ಹೇಳಿದರು. ಸೋಮವಾರ ನಗರದ ಆಸ್ಪತ್ರೆ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ 50 ವರ್ಷ ವಯಸ್ಸು ಮೀರಿದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಂಡುಬರುತ್ತಿತ್ತು. ಈಗ 30 ರಿಂದ 40 ವರ್ಷದೊಳಗಿನ ಮಹಿಳೆಯರಲ್ಲೂ ಹೆಚ್ಚಾಗಿ ಕಂಡುಬರುತ್ತಿದೆ. ಅಲ್ಲದೇ ಯಾವುದೇ ತಾರತಮ್ಯವಿಲ್ಲದೇ ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರಲ್ಲಿಯೂ ಈ ರೋಗ ಹೆಚ್ಚಾಗಿ ಕಂಡುಬರುತ್ತಿದೆ.
ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರಲು ಯಾವುದೇ ವಯಸ್ಸಿನ ಮಿತಿ ಇಲ್ಲ. ಅಥವಾ ವಿವಾಹಿತರು, ಅವಿವಾಹಿತರು ಎಂಬ ಬೇಧವೂ ಇಲ್ಲ. ಪ್ರಾರಂಭದಲ್ಲಿಯೇ ತಪಾಸಣೆ ಮತ್ತು ಚಿಕಿತ್ಸೆ ಪಡೆಯುವುದು ಸೂಕ್ತ ಶಸ್ತಚಿಕಿತ್ಸೆಗೆ ಒಳಗಾದ ಮಹಿಳೆಯರಿಗೆ ಸ್ತನಸೌಂದರ್ಯದ ಬಗ್ಗೆ ಭಯವೂ ಬೇಡ ಪ್ಲಾಸ್ಟಿಕ್ ಸರ್ಜರಿ ಮೂಲಕ ಮೊದಲ ಸೌಂದರ್ಯವನ್ನೂ ಪಡೆಯಬಹುದು ಎಂದರು. ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ವರ್ಷಕ್ಕೆ ನೂರಾರು ಆಂಕೊಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸಲಾಗುತ್ತಿದೆ. ಜತೆಗೆ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ ಎಂದರು. ಕನ್ಸಲ್ಟೆಂಟ್ ಸರ್ಜಿಕಲ್ ಆಂಕೊಲಾಜಿಸ್ಟ್ ಡಾ. ರಕ್ಷಿತ್ ಶೃಂಗೇರಿ ಮಾತನಾಡಿ, ಭಾರತದಲ್ಲಿ ಸ್ತನ ಕ್ಯಾನ್ಸರ್ ವ್ಯಾಪಕವಾಗಿ ಹೆಚ್ಚುತ್ತಿದೆ. ಪ್ರಸ್ತುತ ಮಹಿಳೆಯರಲ್ಲಿ ಇದು ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿದೆ. ವರದಿ ಮಾಡಲಾದ ಪ್ರಕರಣಗಳಲ್ಲಿ ಕನಿಷ್ಠ 14% ರಷ್ಟು ಕ್ಯಾನ್ಸರ್ ರೋಗ ತಡವಾಗಿ ಪತ್ತ್ತೆಯಾಗುತ್ತಿದೆ ಇದರಿಂದ ಇವುಗಳ ಪೈಕಿ ಸುಮಾರು 50% ರೋಗಿಗಳಲ್ಲಿ ಸ್ತನ ಛೇದನ ಅಥವಾ ಸ್ತನ ತೆಗೆಯುವಿಕೆಯನ್ನು ನಡೆಸಲಾಗುತ್ತದೆ ಎಂದರು. ಡಾ.ರಕ್ಷಿತ್ ಮಾತನಾಡಿ, ಜನವರಿ 2021 ಮತ್ತು ಆಗಸ್ಟ್ 2022 ರ ನಡುವೆ, ನಮ್ಮ ಕೇಂದ್ರದಲ್ಲಿ 400 ಕ್ಕೂ ಹೆಚ್ಚು ರೋಗಿಗಳು ಸ್ತನ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಎಲ್ಲಾ ಆರಂಭಿಕ ಸ್ತನ ಕ್ಯಾನ್ಸರ್ ಬಿಸಿಎಸ್ ಚಿಕಿತ್ಸೆ ನೀಡಲಾಗಿ, ದೊಡ್ಡ ಆಪರೇಬಲ್ ಸ್ತನ ಕ್ಯಾನ್ಸರ್ ರೋಗಕ್ಕೆ ಸುಧಾರಿತ ಸ್ತನ ಕ್ಯಾನ್ಸರ್ ನಿಯೋಡ್ಜುವಂಟ್ ಕಿಮೊಥೆರಪಿ ನಂತರ ಬಿಸಿಎಸ್ ಅನ್ನು ತಮ್ಮ ಸ್ತನವನ್ನು ಸಂರಕ್ಷಿಸಲು ಬಯಸುವ ಈ ರೋಗಿಗಳಿಗೆ ನೀಡಲಾಗಿದೆ ಎಂದರು. ಭಾರತ್ ಆಸ್ಪತ್ರೆಯ ಕನ್ಸಲ್ಟೆಂಟ್ ಸರ್ಜಿಕಲ್ ಆಂಕೊಲಾಜಿಸ್ಟ್ ಡಾ.ಎಂ. ವಿಜಯ್ ಕುಮಾರ್ ಮಾತನಾಡಿ, ಈ ಶಸ್ತ್ರಚಿಕಿತ್ಸೆಯಿಂದ ಮಹಿಳೆಯರು ತಮ್ಮ ಸೌಂದರ್ಯ ಮತ್ತು ಸುರಕ್ಷತೆಯ ಬಗ್ಗೆ ಚಿಂತಿತರಾಗಬೇಕಿಲ್ಲ. ಖಿನ್ನತೆಯ ಪ್ರಮಾಣವೂ ಕಡಿಮೆಯಾಗಿದೆ. ಚಿಕಿತ್ಸೆಯ ನಂತರ ರೋಗಿಗಳು ತಮ್ಮ ಸ್ತನಗಳ ಸೌಂದರ್ಯದ ಬಗ್ಗೆ ಆತಂಕ ಪಡಬೇಕಿಲ್ಲ. ಜತೆಗೆ ಕಡಿಮೆ ಅವಧಿಯಲ್ಲಿ ಚಿಕಿತ್ಸೆ ಮಾಡಲಾಗುತ್ತದೆ ಎಂದರು. ಸ್ತನ ಕ್ಯಾನ್ಸರ್ ಬಂದಿದೆ ಎಂದೊಡನೆ ಸ್ತನವನ್ನು ತೆಗೆದುಹಾಕಲಾಗುತ್ತದೆ ಎಂಬ ಕಲ್ಪನೆ ಈಗ ಬದಲಾಗಿದೆ. ನಿಖರವಾದ ರೇಡಿಯೊಥೆರಪಿಯೊಂದಿಗೆ ಸುಧಾರಿತ ಶಸ್ತ್ರಚಿಕಿತ್ಸಾ ವಿಧಾನಗಳು ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಲಭ್ಯವಿದ್ದು, ಸ್ತನ ಶಸ್ತ್ರಚಿಕಿತ್ಸೆಯು ಸಮಂಜಸ ಮತ್ತು ಪ್ರಮಾಣಿತ ಆಯ್ಕೆಯಾಗಿದೆ. ಮೈಸೂರಿನ ಭಾರತ್ ಆಸ್ಪತ್ರೆ ಮತ್ತು ಆಂಕೊಲಾಜಿ ಸಂಸ್ಥೆಯಲ್ಲಿ ಸ್ತನ ಕ್ಯಾನ್ಸರ್ ಕ್ಲಿನಿಕ್ ಈಗ ಪ್ರತಿದಿನ ಲಭ್ಯವಿದೆ ಎಂದರು. ಡಾ.ಕವಿತಾ, ಡಾ.ಅಭಿಲಾಷ್ ಇನ್ನಿತರರು ಇದ್ದರು.
ನವೆಂಬರ್ ಅಂತ್ಯದವರೆಗೆ ಉಚಿತ ತಪಾಸಣೆ : 50 ಪರ್ಸೆಂಟ್ ರಿಯಾಯಿತಿ
ತಿಂಗಳ ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದ ಭಾಗವಾಗಿ, ಭಾರತ್ ಆಸ್ಪತ್ರೆ ಮತ್ತು ಆಂಕೊಲಾಜಿ ಸಂಸ್ಥೆಯು ನಗರದಾದ್ಯಂತದ ಪ್ರಮುಖ ಉದ್ಯಾನವನಗಳಲ್ಲಿ ಶಿಬಿರ, ಉಚಿತ ಸ್ಕ್ರೀನಿಂಗ್ ಪರೀಕ್ಷೆ ಮತ್ತು ಶೇಕಡಾ 50 ರಷ್ಟು ರಿಯಾಯಿತಿ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ. ಮ್ಯಾಮೊಗ್ರಫಿ ಪರೀಕ್ಷೆಯಲ್ಲದೇ ಡಿಎಫ್‍ಆರ್‍ಎಲ್, ಸೆಂಟ್ರಲ್ ಪ್ರಿಸನ್ ಮೈಸೂರು ಮತ್ತು ಮೈಮುಲ್‍ನಲ್ಲಿ ಸ್ತನ ಕ್ಯಾನ್ಸರ್ ಕುರಿತು ಚರ್ಚೆಯನ್ನು ಆಯೋಜಿಸಲಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಪ್ರತಿ ಶನಿವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಸಲಾಗುವ ಉಚಿತ ತಪಾಸಣಾ ಶಿಬಿರ ಮತ್ತು ಮಮೊಗ್ರಫಿ ಸ್ಕ್ರೀನಿಂಗ್ ಪರೀಕ್ಷೆಯ ಮೇಲೆ ಶೇಕಡಾ 50 ರಷ್ಟು ರಿಯಾಯಿತಿಯನ್ನು ನವೆಂಬರ್ ವರೆಗೆ ವಿಸ್ತರಿಸಲಾಗಿದೆ. ನೋಂದಣಿಗಾಗಿ ಮತ್ತು ಹೆಚ್ಚಿನ ವಿವರಗಳಿಗಾಗಿ ಮೊ: 9945433300 ಅನ್ನು ಸಂಪರ್ಕಿಸಬಹುದು.
0 ಕಾಮೆಂಟ್‌ಗಳು