ಯುವ ಜನಾಂಗವನ್ನು ಮೊಬೈಲ್ ಗೀಳಿನಿಂದ ದೂರವಿಡಲು ಕ್ರೀಡೆಗಳು ಸಹಕಾರಿ
ಅಕ್ಟೋಬರ್ 31, 2022
ಸರ್ದಾರ್ ಬಡಾವಣೆ ಉದ್ಯಾನವನಕ್ಕೆ ಅಪ್ಪು ಹೆಸರಿಡುವುದಾಗಿ ಜಿ.ಟಿ.ದೇವೇಗೌಡ ಭರವಸೆ
ಮೈಸೂರು : ಮೊಬೈಲ್ ಗೀಳಿನಿಂದ ಯುವ ಜನಾಂಗವನ್ನು ದೂರವಿಡಲು ಕ್ರೀಡೆಗಳು ಸಹಕಾರಿಯಾಗುತ್ತದೆ ಎಂದು ಯುವ ಮುಖಂಡ ಗಗನ್ ಹೇಳಿದರು. ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ಬಡಾವಣೆಯಲ್ಲಿ ಸಮಾನ ಮನಸ್ಕರ ವೇದಿಕೆ ಆಯೋಜಿಸಿದ್ದ 3ನೇ ವರ್ಷದ ಸರ್ದಾರ್ ಕಪ್ ಕ್ರಿಕೇಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಗರ ಪ್ರದೇಶದ ಯುವಕರಿಗೆ ಗ್ರಾಮೀಣ ಕ್ರೀಡೆಗಳ ಬಗ್ಗೆ ಸಾಕಷ್ಟು ತಿಳಿವಳಿಕೆ ಇಲ್ಲ. ಕೆಲವೊಂದು ಕ್ರೀಡೆಗಳಲ್ಲಿ ಮಾತ್ರ ಆಸಕ್ತಿ ಹೊಂದಿರುತ್ತಾರೆ. ಆದಾಗ್ಯೂ ಕ್ರೀಡಾಂಗಣದ ಅಲಭ್ಯತೆ, ಸಹ ಕ್ರೀಡಾಸಕ್ತರ ಕೊರತೆ, ಶಾಲಾ ಪಠ್ಯಗಳ ಕಲಿಕೆಯ ಒತ್ತಡ ಇನ್ನಿತರೆ ಕಾರಣದಿಂದ ದೇಹಕ್ಕೆ ವ್ಯಾಯಾಮ ಕೊಡುವ ಕ್ರೀಡೆಯಿಂದ ಯುವಕರು ದೂರವಿದ್ದು, ಮೊಬೈಲ್ ಗೇಮ್‍ಗಳ ಗೀಳು ಹೆಚ್ಚಿಸಿಕೊಂಡಿದ್ದಾರೆ. ಇದರಿಂದ ಯುವಕರ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಸಮುದಾಯದೊಂದಿಗೆ ಬೆರೆಯುವ ಕಲೆ ಕರಗತವಾಗುವುದಿಲ್ಲ. ಈ ಕಾರಣದಿಂದ ನಮ್ಮ ಬಡಾವಣೆಯಲ್ಲಿ ಪ್ರತಿ ವರ್ಷ ಕ್ರೀಡಾಕೂಟವನ್ನು ಆಯೋಜಿಸಿ ಯುವಕರನ್ನು ಕ್ರೀಡೆಗಳಲ್ಲಿ ಪ್ರೋತ್ಸಾಹ ನೀಡುತ್ತಿದ್ದೇವೆ. ನಮ್ಮ ಈ ಕಾರ್ಯಕ್ಕೆ ಶಾಸಕ ಜಿ.ಟಿ.ದೇವೇಗೌಡರು ಮತ್ತು ಅವರ ಪುತ್ರ ಜಿ.ಡಿ.ಹರೀಶ್ ಗೌಡ ಅವರು ನಿರಂತರವಾಗಿ ಸಹಕಾರ ನೀಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡರು ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಗೈದು ಟಾಸ್ ಹಾಕಿ ನಂತರ ತಾವೂ ಕೂಡ ಬ್ಯಾಟಿಂಗ್ ಮಾಡುವ ಮೂಲಕ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಯುವಕರು ಶಾಸಕ ಜಿ.ಟಿ.ದೇವೇಗೌಡರನ್ನು ಆತ್ಮೀಯವಾಗಿ ಗೌರವಿಸಿದರು. ಯುವ ಮುಖಂಡರಾದ ಹರ್ಷ, ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಥಾಮಸ್, ಜೈಪಾಲ್, ಶಿವಸ್ವಾಮಿ, ಮುರಳಿಧರ್ ಮಾನೆ, ಮನುಕುಮಾರ್, ಮೋಹನ್ ರಾವ್, ಶ್ರೀಲಕ್ಷ್ಮಿ, ರೇವಣ್ಣ, ಎಂ.ಸಿ.ಸಿದ್ದರಾಜು ಇನ್ನಿತರರು ಇದ್ದರು.
0 ಕಾಮೆಂಟ್‌ಗಳು