ತೊಣ್ಣೂರು ಕೆರೆ ಏರಿ ಒಡೆಯಲು ಡಾ.ಇಂದ್ರೇಶ್ ವಿರೋಧ

ನೀರು ಖಾಲಿಗೆ ಸೂಕ್ತ ವೈಜ್ಞಾನಿಕ ಕ್ರಮಕ್ಕೆ ಒತ್ತಾಯ

 ವರದಿ-ನಜೀರ್ ಅಹಮದ್

ಪಾಂಡವಪುರ : ಭಾರಿ ಮಳೆಯಿಂದ ಭರ್ತಿಯಾಗಿ ಕೋಡಿ ಬಿದ್ದಿರುವ ಐತಿಹಾಸಿಕ ತೊಣ್ಣೂರು ಕೆರೆಯ ನೀರು ಖಾಲಿ ಮಾಡಲು ಅಧಿಕಾರಿಗಳು ಕೆರೆಯ ಏರಿ ಒಡೆಯುವ ಪ್ರಯತ್ನ ನಿಲ್ಲಿಸಬೇಕು ಇದಕ್ಕೆ ತಮ್ಮ ವಿರೋಧವಿದೆ ಎಂದು ಬಿಜೆಪಿ ಮುಖಂಡ ಡಾ.ಎನ್.ಎಸ್.ಇಂದ್ರೇಶ್ ಹೇಳಿದರು.
ಸೋಮವಾರ ತೊಣ್ಣೂರು ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಇದೊಂದು ಸಾವಿರಾರು ವರ್ಷದ ಇತಿಹಾಸವಿರುವ ಪ್ರಸಿದ್ಧ ಕೆರೆಯಾಗಿದೆ. ಇದಕ್ಕೆ ಈ ಭಾಗದ ಜನರು ಪೂಜನೀಯ ರೂಪದಲ್ಲಿ ನೋಡುತ್ತಾರೆ. ಭಾರಿ ಮಳೆಯಿಂದ ಕೆರೆಯಲ್ಲಿ ನೀರು ತುಂಬಿ ಕೋಡಿ ಬಿದ್ದಿರುವುದು ನಿಜ. ಆದರೆ, ನೀರು ಖಾಲಿ ಮಾಡಲು ಏರಿ ಒಡೆಯುವುದು ಅವೈಜ್ಞಾನಿಕ. 

ಯಾರೋ ಪುಣ್ಯಾತ್ಮರು ಸಾವಿರಾರು ವರ್ಷದ ಹಿಂದೆ ಕಟ್ಟಿದಂತಹ ಇಂತಹ ಗಟ್ಟಿಮುಟ್ಟಾದ ಕೆರೆಯ ಏರಿಯನ್ನು ಒಡೆದರೇ ಇನ್ನೂ ಹೆಚ್ಚಿನ ಅನಾಹುತ ಆಗಬಹುದು. ಈ ಬಗ್ಗೆ ಗ್ರಾಮಸ್ಥರೂ ಸಹ ವಿರೋಧ ಮಾಡಿದ್ದಾರೆ. ತಾವು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಮತ್ತು ಸಚಿವ ಕೆ.ಸಿ.ನಾರಾಯಣಗೌಡರ ಜತೆ ಮಾತನಾಡಿ, ಸೂಕ್ತ ವೈಜ್ಞಾನಿಕ ಕ್ರಮ ಜರುಗಿಸುವಂತೆ ಒತ್ತಾಯಿಸುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಅವರು, ಸ್ಥಳದಲ್ಲಿದ್ದ ರೈತರೊಂದಿಗೆ ತೊಣ್ಣೂರು ಕೆರೆ ಕೋಡಿ ಬಿದ್ದು ನಷ್ಟವಾಗಿರುವ ರೈತರ ಜಮೀನುಗಳ ವಿವರಗಳನ್ನು ಮತ್ತು ಗ್ರಾಮದಲ್ಲಿ ಮಳೆಹಾನಿಯಿಂದ ಉಂಟಾದ ಅನಾಹುತದ ಬಗ್ಗೆ ಮಾಹಿತಿ ಪಡೆದರು.

ಮುಖಂಡರಾದ ಕೆರೆತೊಣ್ಣೂರು ಪ್ರಕಾಶ್, ಚಿಕ್ಕಮರಳಿ ನವೀನ್, ಪಾಂಡವಪುರ ಗುರು, ಹಿರೇಮರಳಿ ಮಲ್ಲಿಕ್, ಬಳಘಟ್ಟ ಅಶೋಕ್, ವಿನಯ್, ಹಿರೇಮರಳಿ ವಿಶ್ವನಾಥ್ ಸೇರಿದಂತೆ ಅನೇಕರಿದ್ದರು.