ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಲಾಮಂದಿರದಲ್ಲಿಯೇ ಆಚರಿಸಲು ಒತ್ತಾಯ
ಸೆಪ್ಟೆಂಬರ್ 22, 2022
ಮೈಸೂರು : ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯನ್ನು ಜಿಲ್ಲಾಡಳಿತ ಪ್ರತ್ಯೇಕವಾಗಿ ಕಲಾಮಂದಿರದಲ್ಲಿಯೇ ಆಚರಿಸಬೇಕು. ಬದಲಾಗಿ ದಸರಾ ವೇಳೆ ಅರಮನೆ ವೇದಿಕೆಯಲ್ಲಿ ಕಾಟಾಚಾರಕ್ಕೆ ಆಚರಿಸಿದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣಾ ಸಮಿತಿ ಎಚ್ಚರಿಸಿದೆ.
ಈ ಕುರಿತು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್ ಪುರುμÉೂೀತ್ತಮ್, ಈ ಹಿಂದೆಯೇ ಆಚರಿಸಲು ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿತ್ತು. ಬಳಿಕ ದಿನಾಂಕವನ್ನೇ ನಿಗದಿ ಪಡಿಸಲಿಲ್ಲ. ಈಗ ದಸರಾ ಕಾರ್ಯಕ್ರಮ ವೇಳೆ ಅರಮನೆ ವೇದಿಕೆಯಲ್ಲಿ ಆಚರಿಸುವುದಾಗಿ ತಿಳಿಸಿರುವುದಕ್ಕೆ ತಮ್ಮ ವಿರೋಧವಿದೆ ಎಂದರು.
ಅಂದಿನ ರಾಜ ಸಂಸ್ಥಾನಗಳಲ್ಲಿ ಪ್ರಜಾಪ್ರಭುತ್ವಕ್ಕೆ ಗೌರವ ನೀಡಿದವರು ನಾಲ್ವಡಿ ಅವರಾಗಿದ್ದಾರೆ. ಅವರ ಇತಿಹಾಸವನ್ನು ಮಕ್ಕಳಿಗೆ ತಿಳಿಸಬೇಕಾದ ಅಗತ್ಯವಿದೆ. ಆದರೆ ದಸರಾ ವೇಳೆ ಅರಮನೆ ವೇದಿಕೆಯಲ್ಲಿನ ಕಾರ್ಯಕ್ರಮದ ಸಂದರ್ಭದಲ್ಲಿ ಇದಕ್ಕೆ ಅವಕಾಶವಿರುವುದಿಲ್ಲ. ಹೀಗಾಗಿ ನಿರ್ದಿಷ್ಟ ದಿನಾಂಕದಂದು ಕಲಾಮಂದಿರದಲ್ಲಿಯೇ ಆಚರಿಸಬೇಕೆಂದು ಅವರು ಒತ್ತಾಯಿಸಿದರು.
ಬಳಿಕ ಇತಿಹಾಸ ತಜ್ಞರಾದ ಪ್ರೊ. ನಂಜರಾಜ ಅರಸ್ ಮಾತನಾಡಿ, ಪಕ್ಷಾಂತರ ಮಾಡಿ ನೈತಿಕತೆ ಇಲ್ಲದೇ ಸಚಿವರಾದವರಿಗೆ ನಾಲ್ವಡಿ ಅವರ ಬಗ್ಗೆ ಏನೇನೂ ತಿಳಿದಿಲ್ಲ. ಆದ್ದರಿಂದ ಅರಮನೆ ವೇದಿಕೆಯಲ್ಲಿಯೇ ದಸರಾ ವೇಳೆ ಆಚರಿಸುವುದಾಗಿ ಪಟ್ಟು ಹಿಡಿದಿದ್ದಾರೆ. ಅವರಷ್ಟು ಉಡಾಫೆ, ದುರಹಂಕಾರದ ವ್ಯಕ್ತಿಯನ್ನು ತಾವು ನೋಡಿಲ್ಲ ಎಂದರು.
ಸಿದ್ದರಾಜು ಸೋಸಲೆ, ಯಮುನಾ, ಅರವಿಂದ್ ಶರ್ಮ, ಮೋಹನ್‍ಕುಮಾರ್‍ಗೌಡ ಇದ್ದರು.
0 ಕಾಮೆಂಟ್‌ಗಳು