ವರದಿ-ಅಬ್ದುಲ್ ಮುಯೀದ್, ವಿಜಯಪುರ
ದೇವನಹಳ್ಳಿ/ವಿಜಯಪುರ: ದೇವರ ಗುಜ್ಜಕೋಲು ಮುಟ್ಟಿದ್ದಕ್ಕೆ ಪರಿಶಿಷ್ಟ ಕುಟುಂಬಕ್ಕೆ ಸೇರಿದ ಬಾಲಕನನ್ನು ಥಳಿಸಿ, ಬಹಿಷ್ಕಾರ ಹಾಕಿ, ೬೦ ಸಾವಿರ ದಂಡ ಕಟ್ಟುವಂತೆ ಮಾನಸಿಕವಾಗಿ ಹಿಂಸೆ ನೀಡಿರುವ ಎಲ್ಲರ ಮೇಲೂ ಪರಿಶಿಷ್ಟ ದೌರ್ಜನ್ಯ ಪ್ರಕರಣ ದಾಖಲಿಸಬೇಕು ಎಂದು ಕರ್ನಾಟಕ ದಲಿತ ಸೇನೆ ರಾಜ್ಯ ಘಟಕದ ಅಧ್ಯಕ್ಷ ಟಿ.ಭರತ್ ಗೃಹಸಚಿವರಿಗೆ ಮನವಿಪತ್ರ ಸಲ್ಲಿಸಿ ಒತ್ತಾಯಿಸಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ‍್ಯ ಬಂದು ೭೫ ವರ್ಷಗಳು ಕಳೆದರೂ ಅಸ್ಪೃಶ್ಯತೆ ಇನ್ನೂ ಬಲಿಷ್ಟವಾಗಿ ಜೀವಂತವಾಗಿದೆ ಎನ್ನುವುದು ಸಾಬೀತಾಗಿದೆ. ಕೋಲಾರ ಲೋಕಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಗಿದ್ದು, ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಸರ್ಕಾರ ವಿಫಲವಾಗಿದೆ ಎನ್ನುವುದು ಈ ಘಟನೆಯಿಂದ ಅರ್ಥವಾಗುತ್ತಿದೆ.
ಸರ್ಕಾರ, ಎಷ್ಟೇ ದಲಿತರ ಕುಂದುಕೊರತೆಗಳ ಸಭೆಗಳನ್ನು ಪೊಲೀಸರ ಮೂಲಕ ನಡೆಸುತ್ತಿದ್ದರೂ ಪರಿಶಿಷ್ಟರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲಿಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವುದಕ್ಕೆ ಈ ಘಟನೆ ಉತ್ತಮ ನಿದರ್ಶನವಾಗಿ ಕಂಡು ಬರುತ್ತಿದೆ ಎಂದರು.
ಇಂತಹ ಪರಿಸ್ಥಿತಿ ಕೇವಲ ಕೋಲಾರ ಜಿಲ್ಲೆಯ ಉಳ್ಳೇರಹಳ್ಳಿಗೆ ಸೀಮಿತವಾಗಿಲ್ಲ. ರಾಜ್ಯದಲ್ಲಿನ ಬಹುತೇಕ ಹಳ್ಳಿಗಳಲ್ಲಿ ಪರಿಶಿಷ್ಟರ ವಿಚಾರವಾಗಿ ಇದೇ ರೀತಿ ದೌರ್ಜನ್ಯಗಳು, ನಡೆಯುತ್ತಿವೆ. ದೇವಾಲಯಗಳಿಗೆ ಪ್ರವೇಶ ನಿಷೇಧ, ಜಾತ್ರೆಗಳ ಸಮಯದಲ್ಲಿ ಪರಿಶಿಷ್ಟರ ದೀಪೋತ್ಸವಗಳನ್ನು ಪ್ರತ್ಯೇಕವಾಗಿ ಕಳುಹಿಸುವಂತಹ ಅನಿಷ್ಟ ಪದ್ಧತಿಗಳು, ನೀರು ಹಿಡಿಯುವ ಸ್ಥಳಗಳಲ್ಲಿ ನಿರಂತರವಾಗಿ ಮಹಿಳೆಯರು ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ. ಆದರೆ, ಸಾಕಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ. ಕೆಲವೊಮ್ಮೆ ಪೊಲೀಸರಿಗೆ ಗೊತ್ತಿದ್ದರೂ ಅವರು, ಸ್ವಯಂ ಪ್ರೇರಿತರಾಗಿ ದೂರುಗಳು ದಾಖಲಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಪರಿಶಿಷ್ಟ ಮುಖಂಡ ಡಿ.ಪ್ರಕಾಶ್ ಮಾತನಾಡಿ, ದೇವರ ಗುಜ್ಜಕೋಲು ಮುಟ್ಟಿದ ತಪ್ಪಿಗಾಗಿ ಬಾಲಕನನ್ನು ಥಳಿಸಿರುವ ಘಟನೆ ನಡೆದು, ಒಂದು ವಾರದ ನಂತರವೂ ಪ್ರಕರಣ ಬಯಲಿಗೆ ಬಂದಿಲ್ಲವೆಂದರೆ, ಅಲ್ಲಿನ ಗುಪ್ತಚರ ಪೊಲೀಸ್ ಅಧಿಕಾರಿಗಳು, ವಿಫಲರಾಗಿದ್ದರೆ? ಅಥವಾ ಯಾರ ಪ್ರಭಾವಕ್ಕಾದರೂ ಮಣಿದಿದ್ದರೆ, ಪೊಲೀಸರು ಯಾಕೆ ದೂರು ದಾಖಲು ಮಾಡಿರಲಿಲ್ಲ? ಗ್ರಾಮದಲ್ಲಿ ಪರಿಶಿಷ್ಟ ಕುಟುಂಬವನ್ನು ಪಂಚಾಯಿತಿಗೆ ಕರೆದು, ಅವರಿಗೆ ನ್ಯಾಯಕೊಡುವ ಬದಲಿಗೆ ಅವರನ್ನು ಮತ್ತಷ್ಟು ಭಯಭೀತರನ್ನಾಗಿ ಮಾಡಿದ ಅಲ್ಲಿನ ಪಂಚಾಯಿತಿದಾರರ ಮೇಲೂ ಅಟ್ರಾಸಿಟಿ ಪ್ರಕರಣ ದಾಖಲಿಸಬೇಕು, ಪ್ರಾಣ ಬೆದರಿಕೆ ಹಾಕಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು. ಮುಖಂಡ ವೆಂಕಟರಮಣಪ್ಪ, ಇದ್ದರು.
0 ಕಾಮೆಂಟ್‌ಗಳು