ಕಾಮಸಮುದ್ರ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ೧೨ ಕೋಟಿ ವಹಿವಾಟು : ಎಂ ಗೋವಿಂದರಾಜು.
ಸೆಪ್ಟೆಂಬರ್ 24, 2022
ಕಾರ್ಯದರ್ಶಿ ವಿರುದ್ಧ ಭ್ರಷ್ಟಾಚಾರದ ಆರೋಪ, ಷೇರುದಾರರ ಗೈರು ಹಾಜರಿಯಲ್ಲಿ ನಡೆದ ಸಭೆ.
ವರದಿ-ಜ್ಞಾನೇಶ ಮೂರ್ತಿ, ಬಂಗಾರಪೇಟೆ
ಬಂಗಾರಪೇಟೆ : ಕಾಮಸಮುದ್ರ ವ್ಯವಸಾಯ ಸೇವಾ ಸಹಕಾರ ಸಂಘ ೪೦ ಲಕ್ಷದಲ್ಲಿ ಪ್ರಾರಂಭವಾಗಿ ಇಂದು ೧೨ ಕೋಟಿ ರೂಪಾಯಿಗಳ ವಹಿವಾಟು ಮಾಡುವಲ್ಲಿ ಸಮರ್ಥವಾಗಿದೆ, ನಮ್ಮ ಸಂಘವು ಮಹಿಳೆಯರಿಗೆ ಹೆಚ್ಚಿನ ಸಾಲ ಸೌಲಭ್ಯಗಳನ್ನು ನೀಡುವುದರೊಂದಿಗೆ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎಂ, ಗೋವಿಂದರಾಜು ತಿಳಿಸಿದರು.
ಕಾಮಸಮುದ್ರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ವ್ಯವಸಾಯ ಸೇವಾ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಹಕಾರಿ ಸಂಘವು ೧೮೦೦ ಷೇರುದಾರನ್ನು ಒಳಗೊಂಡಿದ್ದು ೧೨ ಕೋಟಿ ವಹಿವಾಟು ನಡೆಸುತ್ತಿದೆ. ಹಾಗೂ ಜಿಲ್ಲೆಯಲ್ಲಿ ೩ನೇ ಸ್ಥಾನವನ್ನು ಹೊಂದಿದ್ದು ತಾಲೂಕಿನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ಧೇವೆ. ಅಫೆಕ್ಸ್ ಬ್ಯಾಂಕಿನಿಂದ ೧೦ ಸಾವಿರ ರೂಪಾಯಿಗಳ ಬಹುಮಾನವನ್ನು ಪಡೆದುಕೊಂಡಿದೆ, ಹಾಗೂ ವ್ಯವಸಾಯ ಸೇವಾ ಸಂಘದ ಕಛೇರಿ ಶಿಥಿಲಾವ್ಯವಸ್ಥೆಯನ್ನು ಹೊಂದಿದ್ದು ಈ ವಿಷಯಕ್ಕೆ ಸಂಬಂಧಪಟ್ಟಂತ ದೇಣಿಗೆ ಸಂಗ್ರಹಿಸಲಾಗಿದೆ ಮೂರು ತಿಂಗಳ ಒಳಗಾಗಿ ಸುಸಜ್ಜಿತ ನೂತನ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಸರ್ಕಾರ ೧೧ ರೂ ಗಳ ಷೇರುಗಳನ್ನು ರದ್ದುಪಡಿಸಿದ್ದು, ಈ ಕೂಡಲೇ ಎಲ್ಲಾ ಶೇರುದಾರರು ೫೨೫ ರೂ ಗಳ ಷೇರುಗಳನ್ನು ಪಡೆಯಬೇಕು. ಇಲ್ಲದೆ ಹೋದಲ್ಲಿ ಸಂಘದ ಮತದಾನದ ಹಕ್ಕನ್ನು ಹಾಗೂ ಸಾಮಾನ್ಯ ಸಭೆಯ ಹಾಜರಾತಿ ಹಕ್ಕಿನಿಂದ ಹಿಂದೆ ಉಳಿಯಲಿದ್ದೀರಿ ಎಂದು ತಿಳಿಸಿದರು.
ಷೇರುದಾರರಿಂದ ಅರೋಪಗಳ ಮಹಾಪೂರ;
ತಿಪ್ಪಾರೆಡ್ಡಿ ಮಾತನಾಡಿ, ನಮ್ಮ ಸಂಘದಲ್ಲಿ ೧೮೦೦ ಜನ ಸದಸ್ಯರಿದ್ದು ಬಹಳಷ್ಟು ಶೇರುದಾರರಿಗೆ ವಾರ್ಷಿಕ ಸಭೆಯ ನೋಟಿಸ್ ಜಾರಿ ಆಗಲಿಲ್ಲ ಈ ಸಭೆಗೆ ೨೦೦ ಜನ ಸಹ ಬಂದಿಲ್ಲ ಕಾರ್ಯದರ್ಶಿಗಳು ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿದರು, ಬಾಲಕೃಷ್ಣಪ್ಪನವರು ಮಾತನಾಡಿ, ಕಾಮಸಮುದ್ರ ಸಹಕಾರಿ ಸಂಘದಿಂದ ಕೇತಗಾನಹಳ್ಳಿ ಪಂಚಾಯಿತಿಯನ್ನು ಬೇರ್ಪಡಿಸುವಂತೆ ಘನ ನ್ಯಾಯಾಲಯದಿಂದ ತೀರ್ಪು ಬಂದಿದ್ದರೂ ಸಹ ಮೀನಾ ಮೇಷ ಎನಿಸುತ್ತಿದ್ದಾರೆ, ಕೇವಲ ಎರಡು ವರ್ಷಗಳಿಂದ ವಾರ್ಷಿಕ ಸಭೆ ನಡೆಯುತ್ತಿದ್ದು ಕಳೆದ ವರ್ಷಗಳಲ್ಲಿ ವಾರ್ಷಿಕ ಸಭೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಕಾರ್ಯದರ್ಶಿ ಕೋದಂಡ ರಾಮಯ್ಯ ವಿರುದ್ಧ ಆರೋಪ ಮಾಡಿದರು.
ಕಾರ್ಯದರ್ಶಿ ಬದಲಾವಣೆಗೆ ಪಟ್ಟು ಹಿಡಿದ ಜೆಸಿಬಿ ನಾರಾಯಣಪ್ಪ :
ಸಂಘದ ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರಾದ ನಾರಾಯಣಪ್ಪ ಅವರು ಮಾತನಾಡಿ, ಕೋದಂಡ ರಾಮಯ್ಯನವರು ೩೦ ಚೆಕ್ಕುಗಳನ್ನು ಹಾಗೂ ಸರ್ವ ಸದಸ್ಯರ ಸಭೆಗೆ ವಿನಿಯೋಗಿಸಲ್ಪಡುವ ಹಣವನ್ನು ಲೂಟಿ ಮಾಡಿ ನಮ್ಮನ್ನು ಬಕ್ರ ಮಾಡಿದ್ದಾರೆ. ಈ ಕಾರ್ಯದರ್ಶಿಯನ್ನು ಕೂಡಲೇ ವಜಾ ಮಾಡಬೇಕು ಇಲ್ಲದೇ ಹೋದಲ್ಲಿ ಪ್ರತಿಭಟಸಿ ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಆರೋಪಗಳಿಗೆ ಪ್ರತ್ಯುತ್ತರ ನೀಡಿದ ಅಧ್ಯಕ್ಷ ಗೋವಿಂದರಾಜು :
ಕೋದಂಡ ರಾಮಯ್ಯನವರು ೩೦ ವರ್ಷಗಳಿಂದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ನಿವೃತಿಯ ಅಂಚಿನಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ವಜಾ ಮಾಡಿ ಹೊಟ್ಟೆಯ ಮೇಲೆ ಒಡೆಯುವುದು ಸೂಕ್ತವಲ್ಲ, ಸಮಗ್ರವಾಗಿ ಕಾನೂನಿನ ಅಡಿಯಲ್ಲಿ ಪರಿಶೀಲಿಸಿ ನಿರ್ಧರಿಸೋಣ. ಕಾಮಸಮುದ್ರ ಸಹಕಾರಿ ಸಂಘವು ತಾಲೂಕಿನಲ್ಲಿ ಒಂದನೇ ಸ್ಥಾನದಲ್ಲಿದೆ ಹಾಗೂ ಕೇತಗಾನಹಳ್ಳಿ ಗ್ರಾಮ ಪಂಚಾಯಿತಿಗೆ ೨.೫ ಕೋಟಿ ಸಾಲ ನೀಡಲಾಗಿದೆ, ಹಾಗೂ ಕಟ್ಟಡ ನಿರ್ಮಾಣದ ನಂತರ ಸಾಲ ವಸೂಲಿ ಮಾಡಿ ನಂತರ ಬೇರ್ಪಡಿಸಲು ನಿರ್ಧರಿಸುತ್ತೇವೆ, ನ್ಯಾಯಾಲಯದಲ್ಲಿ ಬಾಲಕೃಷ್ಣರವರು ಸಂಘವನ್ನು ಬೇರ್ಪಡಿಸುವಂತೆ ಮನವಿ ನೀಡಿದ್ದರು ಅವರ ಮನವಿಗೆ ಸ್ಪಂದಿಸಿದ ನ್ಯಾಯಾಲಯ ಸಹಕಾರಿ ಸಂಘದ ಆಡಳಿತ ಮಂಡಳಿಯ ಸದಸ್ಯರ ನಿರ್ಧಾರದಂತೆ ಬೇರ್ಪಡಿಸಲು ಆದೇಶ ನೀಡಿದೆ. ಜನರಿಂದ ಲೋನ್ ಹಿಂಪಡೆದುಲಿ, ಠೇವಣಿ ಸಂಗ್ರಹಿಸಿ, ಸೊಸೈಟಿ ಚಾಲ್ತಿಗೆ ಬರಲು ಎರಡು ವರ್ಷಗಳ ಕಾಲಾವಕಾಶ ಬೇಕು, ಒಂದು ವೇಳೆ ಬಾಲಕೃಷ್ಣಪ್ಪನವರು ನೇತೃತ್ವ ವಹಿಸಿಕೊಂಡು ಲೋನುಗಳ ಹಣವನ್ನು ಮರುಪಾವತಿಸಿದ್ದೆ ಆದಲ್ಲಿ ತಕ್ಷಣವೇ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿ ಸಹಕಾರಿ ಸಂಘ ಸ್ಥಾಪಿಸಲಾಗುವುದು, ಅನಗತ್ಯವಾಗಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದು ಸೂಕ್ತವಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಂಗನಾಥಚಾರಿ ನಿರ್ದೇಶಕರಾದ ಜಿ,ಎಂ,ಶ್ರೀನಿವಾಸ್, ವಿ,ಗಿರೀಶ್, ವಿ,ನಾರಾಯಣ ಸ್ವಾಮಿ, ವಿ,ವೆಂಕಟೇಶ್, ನಟರಾಜ್, ಬಾಲರಾಜು, ಭರತ್ತೇಶ್, ಗಜೇಂದ್ರ, ತಿಪ್ಪಾರೆಡ್ಡಿ ಆಧಿನಾರಾಯಣ ಕುಟ್ಟಿ, ಜೆ,ಸಿ,ಬಿ,ನಾರಾಯಣಪ್ಪ, ಕಾರ್ಯದರ್ಶಿ ಕೋದಂಡರಾಮಯ್ಯ, ದಿವ್ಯಭಾರತಿ ಇತರರು ಉಪಸ್ಥಿತರಿದ್ದರು.