ಪಿಎಫ್‍ಐ ಕಚೇರಿಗಳ ಮೇಲೆ ಎನ್‍ಐಎ ದಾಳಿ ಆರ್‍ಎಸ್‍ಎಸ್ ಪ್ರೇರಿತ


 ಕೇಂದ್ರ ಸರ್ಕಾರದಿಂದ ಸ್ವತಂತ್ರ ತನಿಖಾ ಸಂಸ್ಥೆಗಳ ದುರ್ಬಳಕೆ, ನ್ಯಾಯಾಂಗ ಹೋರಾಟಕ್ಕೆ ಎಸ್‍ಡಿಪಿಐ ಸಿದ್ಧತೆ : ಅಬ್ದುಲ್ ಮಜೀದ್

ಮೈಸೂರು : ಆರ್‍ಎಸ್‍ಎಸ್ ಕೈಗೊಂಬೆಯಾಗಿರುವ ಬಿಜೆಪಿ ಸರ್ಕಾರ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಪಿಎಫ್‍ಐ ಕಚೇರಿಗಳ ಮೇಲೆ ದಾಳಿ ನಡೆಸಿ ಭಯದ ವಾತಾವರಣ ಸೃಷ್ಟಿಸುತ್ತಿದೆ ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕಿಡಿಕಾರಿದರು.
ಮೈಸೂರಿನ ಎಸ್‍ಡಿಪಿಐ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆ ಎನ್‍ಐಎ ಏಕಕಾಲದಲ್ಲಿ ಪಿಎಫ್‍ಐ ಕಚೇರಿ ಮತ್ತು ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿದೆ. ಮತ್ತು ಹಲವಾರು ಜನರನ್ನು ವಿನಾಕಾರಣ ಬಂಧಿಸಿದೆ. ಇದೊಂದು ಅಕ್ಷಮ್ಯ ಅಪರಾಧವಾಗಿದ್ದು, ತನ್ನ ರಾಜಕೀಯ ವಿರೋಧಿಗಳನ್ನು ಸೈದ್ಧಾಂತಿಕವಾಗಿ ಎದುರಿಸಲಾಗದೆ. ಇಂತಹ ದಾಳಿಗಳನ್ನು ನಡೆಸಿ ಹೆದರಿಸುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ನಾವು ಹೆದರುವುದಿಲ್ಲ ಮತ್ತು ನಿಮ್ಮೊಂದಿಗೆ ರಾಜಿಯಾಗದೆ. ನಮ್ಮ ಜನಸೇವೆಯನ್ನು ಮುಂದುವರಿಸುತ್ತೇವೆ. ನಿಮ್ಮ ವಿರುದ್ಧ ಧ್ವನಿ ಎತ್ತುತ್ತೇವೆ ಎಂದು ಗುಡುಗಿದರು.
ಯಾವ ತಪ್ಪು ಮಾಡಿಲ್ಲ : ಸದಾ ಒಂದಲ್ಲೊಂದು ಜನಸೇವೆ ಮೂಲಕ ದೇಶದ ಜನರ ಮನೆ ಮಾತಾಗಿರುವ ಪಿಎಫ್‍ಐ ಮತ್ತು ಎಸ್‍ಡಿಪಿಐ ದಾಳಿ ನಡೆಸುವಂತಹ ಯಾವ ತಪ್ಪೂ ಮಾಡಿಲ್ಲ. ದಿನೇ ದಿನೇ ನಮ್ಮ ರಾಜಕೀಯ ಶಕ್ತಿ ಬಲಗೊಳ್ಳುತ್ತಿರುವ ಕಾರಣ ನಮ್ಮನ್ನು ಹೆದರಿಸಲು ಮತ್ತು ನಮ್ಮ ಪಕ್ಷಕ್ಕೆ ಸೇರುತ್ತಿರುವ ಜನರನ್ನು ಬೆದರಿಸಲು ಈ ದಾಳಿ ನಡೆಯುತ್ತಿದೆ. ಮಂಗಳೂರು ಕಚೇರಿಯ ಬಾಗಿಲು ಒಡೆಯಲಾಗಿದೆ. ನಮ್ಮ ಕಚೇರಿ ಎಲ್ಲರಿಗೂ ಮುಕ್ತವಾಗಿದೆ. ಅಲ್ಲಿನ ಜಿಲ್ಲಾಧಿಕಾರಿಗಳಿಗೂ ಕಚೇರಿ ವಿಳಾಸ ಗೊತ್ತು. ಕನಿಷ್ಠ ನಮಗೆ ಫೋನ್ ಮಾಡಿದ್ದರೆ ನಾವೇ ಬೀಗ ತೆಗೆಯುತ್ತಿದ್ದೆವು. ಅಲ್ಲಿನ ಕಂಪ್ಯೂಟರ್, ಹಾರ್ಡ್ ಡಿಸ್ಕ್ ವಶಕ್ಕೆ ಪಡೆಯಲಾಗಿದೆ. ಯಾವುದೇ ದೂರಿಲ್ಲದಿದ್ದರೂ ಮುಖಂಡರನ್ನು ಬಂಧಿಸಲಾಗಿದೆ. ಇದೆಲ್ಲಾ ಯಾವ ನ್ಯಾಯ? ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿ ಹತ್ಯೆ ಆರೋಪಿಗಳ ಮನೆಗಳಿಗೂ ಹೀಗೆ ನುಗ್ಗಿದ್ದೀರಾ? ಬಾಂಬ್ ದಾಳಿ ನಡೆಸಿ ಈಗ ಸಂಸತ್ ಪ್ರವೇಶಿಸಿರುವ ನಿಮ್ಮದೇ ಪಕ್ಷದ ಸಂಸದರ ಮನೆಗಳ ಮೇಲೂ ಈ ರೀತಿ ದಾಳಿ ಮಾಡಿದ್ದೀರಾ? ಎಂದು ಪ್ರಶ್ನಿಸಿದ ಅವರು, ದೇಶದ ಸೌಹಾರ್ಧಯುತ ವಾತವರಣಕ್ಕೆ ಧಕ್ಕೆ ತರುವುದೇ ಆರ್‍ಎಸ್‍ಎಸ್ ಕೆಲಸವಾಗಿದ್ದು, ಸರ್ಕಾರ ಅದು ಹೇಳಿದಂತೆ ಕೇಳುತ್ತಿದೆ. ನಿಮ್ಮ ಯಾವುದೇ ಗೊಡ್ಡು ಬೆದರಿಕೆಗೂ ನಾವು ಹೆದರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದೆಲ್ಲೆಡೆ ಭಾರತೀಯ ಜನತಾ ಪಕ್ಷ ಸ್ಥಳೀಯ ಸರ್ಕಾರಗಳನ್ನು ಬೀಳಿಸಲು ಅಲ್ಲಿನ ಶಾಸಕರನ್ನು ಕೊಟ್ಯಾಂತರ ರೂಗಳಿಗೆ ಖರೀದಿ ಮಾಡುತ್ತಿದ್ದರೂ ಬಿಜೆಪಿ ಕಚೇರಿ ಅಥವಾ ಮುಖಂಡರ ಮನೆಗಳ ಮೇಲೆ ಎನ್‍ಐಎ, ಈಡಿ, ಸಿಬಿಐ ದಾಳಿ ನಡೆಸಿಲ್ಲ. ಎಲ್ಲವೂ ಮಲಗಿದ್ದವು. ದೇಶದಲ್ಲಿ ಭಿನ್ನ ಧ್ವನಿಗಳು ಹತ್ತಿಕ್ಕುವ ಕೆಲಸ ಬಿಜೆಪಿ ಮಾಡುತ್ತಿದ್ದು, ನಮ್ಮ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ನಾವು ಬಿಕರಿಯಾಗುವುದಿಲ್ಲ. ಈ ಬಗ್ಗೆ ನ್ಯಾಯಾಂಗ ಹೋರಾಟ ನಡೆಸುತ್ತೇವೆ. ವಿರೋಧ ಪಕ್ಷಗಳು, ಸಂಘಟನೆಗಳು ಒಗ್ಗಟ್ಟಾಗಿ ಬಿಜೆಪಿ ವಿರುದ್ಧ ಹೋರಾಟ ನಡೆಸಬೇಕಿದೆ ಎಂದರು.
ಎನ್‍ಐಎ ಘನತೆಗೆ ಕುಂದು : ಸಾಮಾನ್ಯ ಪೊಲೀಸ್ ಠಾಣೆಗಳು ಮಾಡಬೇಕಾದ ಕೆಲಸಗಳನ್ನು ಕೇಂದ್ರ ಸರ್ಕಾರ ಎನ್‍ಐಎ ಮೂಲಕ ಮಾಡಿಸಿ ಅದರ ಬಗ್ಗೆ ದೇಶದಲ್ಲಿ ಭಯವೇ ಇಲ್ಲದಂತೆ ಮಾಡುತ್ತಿದೆ. ಒಂದು ಕೊಲೆ ಕೇಸನ್ನು ಮತ್ತೊಂದು 307 ಕೇಸನ್ನು ಎನ್‍ಐಎ ಗೆ ವಹಿಸುವುದು ಹಾಸ್ಯಾಸ್ಪದ. ಅದನ್ನು ನಮ್ಮ ಪೋಲೀಸರು ಮಾಡುವುದಿಲ್ಲವೇ? ಎಂದು ಅಬ್ದುಲ್ ಮಜೀದ್ ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ರಫತ್‍ಯುಲ್ಲಾ ಖಾನ್, ನಗರಸಭೆ ಮಾಜಿ ಸದಸ್ಯ ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಸಫಿಉಲ್ಲಾ ಇನ್ನಿತರರು ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು