ಕಲಾವಿದರನ್ನು ಪ್ರೋತ್ಸಾಹಿಸಿದರೆ ಕಲೆ ಬೆಳೆಯುತ್ತದೆ : ಶಾಸಕ ಎಲ್.ನಾಗೇಂದ್ರ
ಸೆಪ್ಟೆಂಬರ್ 23, 2022
ಮೈಸೂರು: ಬೆಂಗಳೂರಿನ ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ಸಂಯುಕ್ತಾಶ್ರಯದದಲ್ಲಿ ಕಲಾಮಂದಿರದ ಆವರಣದಲ್ಲಿ ಏರ್ಪಡಿಸಿದ್ದ ಚಿತ್ರಕಲಾ ಶಿಬಿರಕ್ಕೆ ಶಾಸಕ ಎಲ್.ನಾಗೇಂದ್ರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಚಿತ್ರಕಲೆ, ಶಿಲ್ಪಕಲೆ ಸೇರಿದಂತೆ ಅನೇಕ ಕಲೆಗಳಿಗೆ ಮಹಾರಾಜರು ಪ್ರೋತ್ಸಾಹ ನೀಡುತ್ತಿದ್ದರು. ಆದರೀಗ ಸರಕಾರಗಳು ಪ್ರೋತ್ಸಾಹ ನೀಡಿ, ಕಲೆಗಳನ್ನು ಉಳಿಸುತ್ತಿದೆ. ಸಂಸ್ಕೃತಿ ಹಾಗೂ ಕಲೆ ನಮ್ಮ ಪರಂಪರೆಯನ್ನು ಸಾರುತ್ತದೆ ಎಂದರು.
ಸೆ.೧೬ರಿಂದ ಆರಂಭವಾದ ಶಿಲ್ಪಕಲಾ ಶಿಬಿರದಲ್ಲಿ ಹತ್ತಾರು ಕಲಾಕೃತಿಗಳು ಅರಳಿವೆ. ಇದೀಗ ಚಿತ್ರಕಲಾ ಶಿಬಿರದಿಂದ ಉತ್ತಮ ಚಿತ್ರಗಳು ಮೂಡಿಬರಲಿವೆ. ಪಾರಂಪರಿಕ ಕಲೆಗಳನ್ನು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಲು ಶಿಬಿರ ಸಹಕಾರಿಯಾಗಿದೆ. ಕಲಾವಿದರನ್ನು ಪ್ರೋತ್ಸಾಹಿಸಿದರೆ ಕಲೆ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ದಸರಾ ದೀಪಾಲಂಕಾರ, ಯುವ ಸಂಭ್ರಮ, ಯುವ ದಸರಾ ಸೇರಿದಂತೆ ದಸರಾ ಕಾರ್ಯಕ್ರಮಗಳಿಗೆ ಭೇಟಿ ನೀಡುವಂತೆಯೇ ಇಂತಹ ಶಿಬಿರಕ್ಕೆ ಬಂದು, ಕಲಾವಿದರ ಪ್ರತಿಭೆಯನ್ನು ನೋಡಬೇಕು ಎಂದರು.
ನಶಿಸಿ ಹೋಗುತ್ತಿರುವ ಕಲೆಗಳನ್ನು ಸಂರಕ್ಷಿಸಿ,ಪ್ರೋತ್ಸಾಹಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು, ಹಸ್ತಿಶಿಲ್ಪಿ ವಿಕಾಸ್ ಯೋಜನಾ, ಮೆಗಾ ಕ್ಲಸ್ಟರ್ ಯೋಜನೆಗಳನ್ನು ಜಾರಿಗೊಳಿಸಿದೆ. ರಾಜ್ಯ ಸರಕಾರವೂ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದೆ. ಸರಕಾರ ನೀಡುವ ಯೋಜನೆಗಳನ್ನು ಕೂಡ ಕಲಾವಿದರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಲಲಿತಕಲೆ ಮತ್ತು ಕರಕುಶಲ ಉಪಸಮಿತಿಯ ಕಾರ್ಯಾಧ್ಯಕ್ಷ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಈ ಶಿಬಿರದಲ್ಲಿ ರಚನೆಯಾದ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟವೂ ನಡೆಯಲಿದ್ದು, ಕಲಾವಿದರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲಲಿತ ಕಲಾ ಅಕಾಡೆಮಿ ಸದಸ್ಯ ವಿನೋದ್ ಕುಮಾರ್, ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಉಪಸಮಿತಿಯ ಉಪವಿಶೇಷಾಧಿಕಾರಿ ವಿಜಯಕುಮಾರ್ ಮತ್ತಿತರರು ಹಾಜರಿದ್ದರು.
0 ಕಾಮೆಂಟ್‌ಗಳು