ಮೈಸೂರು : ಕಳೆದ 12 ವರ್ಷಗಳ ಕೇಂದ್ರದ ಬಿಜೆಪಿ ಆಡಳಿತದಿಂದ ದೇಶದ 140 ಕೋಟಿ ಜನರು ಬೇಸತ್ತಿದ್ದಾರೆ. ನೋಟು ಅಮಾನ್ಯೀಕರಣದಿಂದ ಜನರ ಜೇಬಿಗೆ ಕನ್ನ, ಜಿಎಸ್‍ಟಿಯಿಂದ ಉದ್ಯೋಗಕ್ಕೂ ಕನ್ನ, ಇದೀಗ ಮತಗಳ್ಳತನದಿಂದ ಜನರ ಹಕ್ಕಿಗೂ ಕನ್ನ ಹಾಕಲಾಗಿದೆ. ದೇಶದ ಜನರು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಮೈಸೂರು ಡಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ರೇಹಾನ್ ಬೇಗ್ ಹೇಳಿದ್ದಾರೆ.
ಶನಿವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, 12 ವರ್ಷಗಳ ಹಿಂದೆ ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮುನ್ನ ದೇಶದ ಜನರಿಗೆ ನೀಡಿದ್ದ ಆಶ್ವಾಸನೆಗಳೆಲ್ಲವೂ ಸುಳ್ಳಾಗಿದೆ. ಯಾವುದೂ ಈಡೇರಿಲ್ಲ, ವಿದೇಶದಿಂದ ಕಪ್ಪು ಹಣ ತರುವುದಾಗಿ ಹೇಳಿದ್ದ ವಿಶ್ವಗುರು ಪ್ರಧಾನಿಗಳು ಅದನ್ನು ಇಲ್ಲಿಯ ತನಕವೂ ಈಡೇರಿಸಿಲ್ಲ, ಮೋದಿ ಅವರು ವಿದೇಶಗಳಲ್ಲಿ ನಡೆಯುವ ಯುದ್ಧಗಳನ್ನು ಕ್ಷಣಮಾತ್ರದಲ್ಲಿ ನಿಲ್ಲಿಸುತ್ತಾರೆ. ಅವರ ಮಾತನ್ನು ಅಮೆರಿಕಾ, ಚೀನಾ ಅಧ್ಯಕ್ಷರು ಸೇರಿದಂತೆ ಪ್ರಪಂಚದ ಎಲ್ಲ ನಾಯಕರೂ ಕೇಳುತ್ತಾರೆ. ಆದರೇ ಇಲ್ಲಿಯ ತನಕವೂ ಕಪ್ಪುಹಣ ತಾರದೆ ಇರುವುದು ಏಕೆ, ಕಪ್ಪು ಹಣ ತಂದು ದೇಶದ ಪ್ರತಿಯೊಬ್ಬರಿಗೂ ತಲಾ 15 ಲಕ್ಷ ಹಂಚುವುದಾಗಿ ಹೇಳಿದ್ದ ಮೋದಿ ಅವರು ಇನ್ನೂ ವಿದೇಶದಿಂದ ಕಪ್ಪುಹಣ ತಂದಿಲ್ಲ ಏಕೆ, ಈಗಲೂ ಕಾಲ ಮಿಂಚಿಲ್ಲ ಪ್ರಧಾನಿಗಳೇ ದಯಮಾಡಿ ಕಪ್ಪುಹಣ ತನ್ನಿ ಈಗ 15 ಲಕ್ಷ ಅಲ್ಲ ತಲಾ 20 ಲಕ್ಷ ಹಂಚಬಹುದು ಎಂದು ರೇಹಾನ್ ಬೇಗ್ ವ್ಯಂಗ್ಯವಾಡಿದ್ದಾರೆ.
ಸ್ವಾತಂತ್ರ್ಯಪೂರ್ವದಿಂದಲೂ ಈ ದೇಶವನ್ನು ಸಮರ್ಥವಾಗಿ ಕಟ್ಟಿದ ಟಾಟಾ ಕಂಪನಿ, ಬಿರ್ಲಾ ಸಂಸ್ಥೆ, ಲಕ್ಷ್ಮಿಪತಿ ಮಿತ್ತಲ್, ಅಝೀಂ ಪ್ರೇಮ್‍ಜಿ ಅವರು ಇಂದಿಗೂ ಅದೇ ಸ್ಥಾನದಲ್ಲಿದ್ದರೆ, ಡಿಢೀರನೇ ಬಂದ ಅದಾನಿ, ಅಂಬಾನಿ, ಮೆಹುಲ್ ಚೋಕ್ಸಿ ಅವರು ವಿಶ್ವದಲ್ಲಿ ಗುರುತಿಸುವಂತಹ ಶ್ರೀಮಂತರಾಗಿದ್ದಾರೆ, ಇದು ಹೇಗೆ, ಅನೇಕರು ಬ್ಯಾಂಕುಗಳಲ್ಲಿ ಸಾಲ ಪಡೆದು ಮರುಪಾವತಿ ಮಾಡದೆ, ವೇಆಫ್ ಮಾಡಿಸಿಕೊಂಡು ಶ್ರೀಮಂತರಾದರು, ಬಡವರಿಂದ ರಕ್ತ ಹೀರುವ ಬ್ಯಾಂಕುಗಳು ಶ್ರೀಮಂತರ ಕೊಟ್ಯಾಂತರ ರೂ ಸಾಲವನ್ನು ಮನ್ನಾ ಮಾಡಿವೆ, ಇನ್ನು ಮೋದಿಜಿ ನಿಮಗೆ 75 ವರ್ಷ ತುಂಬಿದೆ, ಅಧಿಕಾರದಿಂದ ಯಾವ ಕ್ಷಣದಲ್ಲಾದರೂ ಇಳಿಯಬಹುದು ಎಂದುಕೊಂಡಿದ್ದೇವೆ, ಆದರೇ ನಿಮ್ಮ ಜುಮ್ಲಾಗಳು ನಿಮ್ಮನ್ನು ಖಂಡಿತಾ ಕಾಪಾಡುತ್ತವೆ. ಜತೆಗೆ ನೀವು ಬಯಾಲಾಜಿಕಲ್ ಅಲ್ಲ ಎಂದು ನೀವೆ ಹೇಳಿದ್ದೀರಿ, ಡಬಲ್ ಸಾಫ್ಟ್‍ವೇರ್ ಕೂಡ ನಿಮ್ಮಲ್ಲಿದೆ, ಆದಾಗ್ಯೂ ನೀವು ಅಧಿಕಾರದಿಂದ ಇಳಿಯಲೇ ಬೇಕಿದೆ. ಇಳಿಯುವ ಮುನ್ನ ದಯಮಾಡಿ ಕಪ್ಪು ಹಣ ತರುವಿರಾ.. ಎಂದು ರೇಹಾನ್ ಬೇಗ್ ಕೋರಿದ್ದಾರೆ.
