’ಕರ್ನಾಟಕ ಸರ್ಕಾರಿ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಕೊಟ್ಯಾಂತರ ರೂ. ಅವ್ಯವಹಾರ’ : ಸಮಾಜ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಕೆ.ಹೆಚ್.ಹನುಮಂತರಾಜು ಆರೋಪ : ಲೋಕಾಯುಕ್ತ, ಇಡಿ’ಗೆ ದೂರು

ಮಾಜಿ ಅಧ್ಯಕ್ಷ ಮಹೇಶ್ ಆಸ್ತಿ 500 ಕೋಟಿ, ಕಾರ್ಯದರ್ಶಿ ವಿಶಾಲಾಕ್ಷಿ ಆಸ್ತಿ 200 ಕೋಟಿ ಹನುಮಂತರಾಜು ಆರೋಪ
ಮೈಸೂರು : ನಗರದ ಕರ್ನಾಟಕ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಸಂಘದಲ್ಲಿ ಕಳೆದ 20 ವರ್ಷಗಳಿಂದ ಅಧ್ಯಕ್ಷರಾಗಿದ್ದು, ಇದೀಗ ಸದಸ್ಯರಾಗಿರುವ ಮಹೇಶ್ ಮತ್ತು ಕಾರ್ಯದರ್ಶಿ ವಿಶಾಲಾಕ್ಷಿ ಅವರೇ ಭ್ರಷ್ಟಾಚಾರಕ್ಕೆ ನೇರ ಕಾರಣ ಎಂದು ಸಮಾಜ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಕೆ.ಎಚ್.ಹನುಮಂತರಾಜು ಆರೋಪಿಸಿದ್ದು, ಇಬ್ಬರ ವಿರುದ್ಧವೂ ಇಡಿ ಮತ್ತು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.

ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮಹೇಶ್ ಸಹಕಾರ ಸಂಘದ ಬೈಲಾ ನಿಯಮಗಳನ್ನು ಉಲ್ಲಂಘಿಸಿ ತಮ್ಮ ಪತ್ನಿ, ಪುತ್ರ ಮತ್ತು ಕುಟುಂಬದ ಇತರೆ ಸದಸ್ಯರ ಹೆಸರಿನಲ್ಲಿ ಅಕ್ರಮವಾಗಿ ನಿವೇಶನಗಳನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ. ಇದರಿಂದ ಸಿನಿಯಾರಿಟಿ ಪ್ರಕಾರ ನಿವೇಶನಗಳನ್ನು ಪಡೆಯಬೇಕಿದ್ದ ಷೇರುದಾರರಿಗೆ ವಂಚನೆ ಮಾಡಲಾಗಿದೆ. ನಿವೇಶನಕ್ಕಾಗಿ ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಹಣ ಕಟ್ಟಿದ ಷೇರುದಾರರು ಒಂದು ಕಡೆ ಅಲೆದಾಡುತ್ತಿದ್ದರೆ, ಮತ್ತೊಂದು ಕಡೆ ಯಾರು ತಮಗೆ ಹೆಚ್ಚು ಹಣ ಕೊಡುತ್ತಾರೋ ಅವರಿಗೆ ಮಾತ್ರ ನಿವೇಶನ ನೀಡಲಾಗುತ್ತಿದೆ ಎಂದು ಹನುಮಂತರಾಜು ಹೇಳಿದರು.

ಮಹೇಶ್ ಅವರು ಅಕ್ರಮವಾಗಿ ಸಂಪಾದಿಸಿದ ಹಣದಲ್ಲಿ ವರುಣಾ ಹೋಬಳಿಯ ಮೊಸಂಬಾಯನಹಳ್ಳಿಯಲ್ಲಿ ಕ್ರಮವಾಗಿ 1 ಎಕರೆ 12 ಕುಂಟೆ, 3 ಎಕರೆ 20 ಕುಂಟೆ, 3 ಎಕರೆ 13 ಕುಂಟೆ, 4 ಎಕರೆ 35 ಕುಂಟೆ, ವರಕೋಡು ಗ್ರಾಮದಲ್ಲಿ 34 ಕುಂಟೆ, ವರುಣದಲ್ಲಿ 16 ಕುಂಟೆ, 16 ಕುಂಟೆ, 16 ಕುಂಟೆ, ಜಯಪುರ ಹೋಬಳಿ ಯಡಹಳ್ಳಿಯಲ್ಲಿ 3 ಎಕರೆ, ಅದೇ ಗ್ರಾಮದಲ್ಲಿ ಮತ್ತೆ 3 ಎಕರೆ, ಸಾತಗಳ್ಳಿ, ಭುಗತಹಳ್ಳಿ, ವರಕೋಡು, ವರುಣಾದಲ್ಲಿ ಭಾರಿ ನಿವೇಶನಗಳು ಸೇರಿದಂತೆ ಒಟ್ಟಾರೆ ಸುಮಾರು 500 ಕೋಟಿ ರೂ.ನಷ್ಟು ಅಕ್ರಮ ಆಸ್ತಿ ಹೊಂದಿದ್ದು, ಇವರ ವಿರುದ್ಧ ತನಿಖೆ ನಡೆಸುವಂತೆ ಇಡಿ, ಲೋಕಾಯುಕ್ತ ಮತ್ತು ಸಹಕಾರ ಇಲಾಖೆಗೆ ದೂರು ನೀಡಿದ್ದೇನೆ ಎಂದರು.

ಅದೇ ರೀತಿ ಇದೇ ಸಹಕಾರ ಸಂಘದಲ್ಲಿ 25 ವರ್ಷಗಳಿಂದ ಕಾರ್ಯದರ್ಶಿ ಆಗಿದ್ದ ವಿಶಾಲಾಕ್ಷಿ ಎಂಬವರೂ ಸಹ ಮೈಸೂರು, ತುಮಕೂರು ಜಿಲ್ಲೆ ವಳಗೆರೆಪುರ ಸುಮಾರು 200 ಕೋಟಿ ಗೂ ಅಧಿಕ ಆಸ್ತಿಪಾಸ್ತಿಗಳನ್ನು ಹೊಂದಿದ್ದಾರೆ. ಇವರ ವಿರುದ್ಧವೂ ತನಿಖೆ ನಡೆಸುವಂತೆ ಇಡಿ, ಲೋಕಾಯುಕ್ತ ಮತ್ತು ಸಹಕಾರ ಇಲಾಖೆಗೆ ದೂರು ನೀಡಿದ್ದೇನೆ ಎಂದರು.

ಇಷ್ಟೇ ಅಲ್ಲದೇ, ಕರ್ನಾಟಕ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಬ್ಯಾಂಕ್ ಖಾತೆಯಿಂದ ಬೇರೆ, ಬೇರೆಯವರ ಹೆಸರಲ್ಲಿ ಸುಮಾರು 5 ಕೋಟಿಗೂ ಅಧಿಕ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಇದೂ ಸಹ ಭಾರಿ ಅನುಮಾನಕ್ಕೆ ಕಾರಣವಾಗಿದೆ ಎಂದು ಹನುಮಂತರಾಜು ದೂರಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಗೌರವಾಧ್ಯಕ್ಷರಾದ ಹೊಸಹುಂಡಿ ನಾಗರಾಜು, ರಾಜ್ಯ ಕಾರ್ಯದರ್ಶಿ ಎಂ.ಸಿ.ಅನಿತಾ, ರಾಜ್ಯ ಸಂಘಟನಾ ಕಾರ್ಯದರ್ಶಿ, ಜವರೇಗೌಡ, ರಾಜ್ಯ ಯುವ ಘಟಕದ ಅಧ್ಯಕ್ಷರಾದ ಪ್ರವೀಣ್, ಮೈಸೂರು ನಗರದ ಯುವ ಘಟಕದ ಅಧ್ಯಕ್ಷರಾದ ಮಂಜುನಾಥ್ ಇದ್ದರು.

ರೆಸಾರ್ಟ್, ಸಿಎಲ್-7 ಬಾರ್, ಐಶಾರಾಮಿ ಕಾರುಗಳು

ಕರ್ನಾಟಕ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಮಾಜಿ ಅಧ್ಯಕ್ಷ ಮಹೇಶ್ ಅವರು ಕೊಟ್ಯಾಂತರ ರೂ. ಮೌಲ್ಯದ ರೆಸಾರ್ಟ್ ಹೊಂದಿದ್ದಾರೆ. ಕಾರ್ಯದರ್ಶಿ ವಿಶಾಲಾಕ್ಷಿ ಅವರ ಬಳಿ ಐಷಾರಾಮಿ ಥಾರ್, ಇನ್ನೋವಾ, ಸ್ವಿಫ್ಟ್ ಕಾರುಗಳನ್ನು ಹೊಂದಿದ್ದಾರೆ. ಮೈಸೂರಿನ ದಟ್ಟಗಳ್ಳಿಯಲ್ಲಿ 60*40 ಐಶಾರಾಮಿ ಮನೆ ಇದೆ, ಜತೆಗೆ ತಮ್ಮ ದತ್ತುಪುತ್ರ ಸುಹಾಸ್ ಎಂಬವರ ಹೆಸರಲ್ಲಿ ದೇವೇಗೌಡ ವೃತ್ತದ ಸಮೀಪವಿರುವ ಬಸವಮಾರ್ಗದಲ್ಲಿ ಸಿಎಲ್-7 ಬಾರ್ ಹೊಂದಿದ್ದಾರೆ. ಇವರಿಬ್ಬರಿಗೂ ಇಷ್ಟೆಲ್ಲಾ ಹಣ ಎಲ್ಲಿಂದ ಬಂತು ಎನ್ನುವುದು ತನಿಖೆಯಿಂದ ಬಯಲಾಗಬೇಕು ಎಂದು ಹನುಮಂತರಾಜು ಒತ್ತಾಯಿಸಿದರು.