ಸರ್ಕಾರದ ಅಭಿವೃದ್ಧಿಗೆ ರೈತಸಂಘ ಅಡ್ಡಿ ಪಡಿಸುವುದಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಬೆಂಬಲ ಸೂಚಿಸಿ ಮನವಿ ಪತ್ರ ನೀಡಿದ ಇಂಗಲಗುಪ್ಪೆ ಕೃಷ್ಣೇಗೌಡ

ರೈತರಿಗೆ ಒಳ್ಳೆಯದಾಗುವುದಾದರೆ ಕಾವೇರಿ ಆರತಿ, ಅಮ್ಯೂಸ್‌ಮೆಂಟ್ ಪಾರ್ಕ್ ಮಾಡಿ


ಮೈಸೂರು : ಬೆಲೆ ಕುಸಿತ, ನೆರೆ ಹಾವಳಿ, ಬರ ಮುಂತಾದ ನಿರಂತರ ಪ್ರಾಕೃತಿಕ ವಿಕೋಪಗಳು ಮತ್ತು ಮಾರುಕಟ್ಟೆ ಕುಸಿತಗಳಿಂದ ಕಂಗಾಲಾಗಿರುವ ರೈತರ ಬದುಕಿನಲ್ಲಿ ಆರ್ಥಿಕ ಚೇತನ ಮೂಡಿಸಲು ಸರ್ಕಾರ ದೂರ ದೃಷ್ಟಿಯಿಂದ ಕೈಗೊಳ್ಳುವ ಯಾವುದೇ ಕಾರ್ಯಕ್ರಮಗಳಿಗೆ ನಾವು ಅಡ್ಡಿ ಪಡಿಸುವುದಿಲ್ಲ, ಬದಲಿಗೆ ಸರ್ಕಾರದ ಬೆಂಗಾವಲಾಗಿ ನಿಂತು ಪ್ರೋತ್ಸಾಹ ನೀಡುತ್ತೇವೆ ಎಂದು ಕರ್ನಾಟಕ ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಹೇಳಿದರು.

ಕನ್ನಂಬಾಡಿ ಕಟ್ಟೆ ತುಂಬಿದ ಹಿನ್ನಲೆ ಬಾಗೀನ ಅರ್ಪಿಸಲು ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಗೌರವ ಸಲ್ಲಿಸಿ ಮನವಿ ಪತ್ರ ನೀಡಿ ಮಾತನಾಡಿದ ಅವರು, ಸಕಾರಣವಿಲ್ಲದೆ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಿಗೆ ಯಾವುದೇ ರೀತಿಯಲ್ಲಿ ಅಡ್ಡಿ ಪಡಿಸಿದೆ ಬೆಂಬಲ ನೀಡುವುದಾಗಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಅವರು ಭರವಸೆ ನೀಡಿದರು. 

ರಾಜ್ಯ ಸರ್ಕಾರ ಕೆಆರ್‌ಎಸ್ ಜಲಾಶಯದ ಬಳಿ ನಿರ್ಮಿಸಲು ಉದ್ದೇಶಿಸಿರುವ ಅಮ್ಯೂಸ್‌ಮೆಂಟ್ ಪಾರ್ಕ್ ಮತ್ತು ಕಾವೇರಿ ಆರತಿ ಯೋಜನೆಗೆ ನಮ್ಮ ಷರತ್ತು ಬದ್ಧ ಬೆಂಬಲ ನೀಡುತ್ತಿದ್ದೇವೆ. 

ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ನಡೆಸಲು ಮುಂದಾಗಿರುವ ಕಾವೇರಿ ಆರತಿಗೆ ನಮ್ಮ ಬೆಂಬಲವಿದೆ. ಜತೆಗೆ ಈ ಭಾಗದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಮಾಡುವುದರಿಂದ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಿ ಸ್ಥಳಿಯ ವ್ಯಾಪಾರಿಗಳು, ಉದ್ಯಮಿಗಳು, ಸಣ್ಣ ಪುಟ್ಟ ವ್ಯಾಪಾರಸ್ಥರು ಆರ್ಥಿಕವಾಗಿ ಸಬಲರಾಗುತ್ತಾರೆ. ಯಾವುದೇ ಹೊರಗಿನ ವ್ಯಕ್ತಿಗಳು ಇಲ್ಲಿ ವಹಿವಾಟು ನಡೆಸುತ್ತಿಲ್ಲ, ಎಲ್ಲರೂ ಸ್ಥಳೀಯ ರೈತಾಪಿ ಕುಟುಂಬಗಳ ನಿರುದ್ಯೋಗಿ ಯುವಕರೇ ಆಗಿರುವುದರಿಂದ ದೂರದೃಷ್ಟಿಯಿಂದಲೂ ಈ ಯೋಜನೆ ಈ ಭಾಗದ ರೈತರ, ಜನಸಾಮಾನ್ಯರ, ಕೂಲಿ ಕಾರ್ಮಿಕರ, ಉದ್ಯಮಿಗಳ, ವ್ಯಾಪಾರಸ್ಥರ ಆರ್ಥಿಕ ಪುನಶ್ಚೇನಕ್ಕೆ ಸಹಕಾರಿಯಾಗುತ್ತದೆ. ಇಲ್ಲಿ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಶೇ.೧೦೦ ರಷ್ಟು ಉದ್ಯೋಗಗಳು ಸ್ಥಳೀಯರಿಗೆ ನೀಡಬೇಕು ಎಂಬುದಷ್ಟೇ ನಮ್ಮ ಷರತ್ತು ಎಂದರು. ಇಂಗಲಗುಪ್ಪೆ ಕೃಷ್ಣೇಗೌಡರ ಬೇಡಿಕೆಗೆ ಸಮ್ಮತಿ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೃಷ್ಣೇಗೌಡರ ಬೆನ್ನು ತಟ್ಟಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ, ಶಾಸಕ ರಮೇಶ್‌ಬಾಬು ಬಂಡಿಸಿದ್ದೇಗೌಡ, ಕರ್ನಾಟಕ ರಾಜ್ಯ ರೈತಸಂಘ(ರೈತಬಣ)ದ ರಾಜ್ಯ ಸಂಚಾಲಕರಾದ ಕೆಆರ್‌ಎಸ್ ರಾಮೇಗೌಡ, ಹೊಸ ಉಂಡವಾಡಿ ಕೃಷ್ಣೇಗೌಡ, ಮೈಸೂರು ಜಿಲ್ಲಾ ಅಧ್ಯಕ್ಷರಾದ ಮಾಲಿಕ್ ಆವರ್ತಿ, ಕೆಂಪರಾಜು, ಪುಟ್ಟಸ್ವಾಮಿ ನಾಯಕ, ಎಂ.ಮಲ್ಲೇಶ್ ಮತ್ತಿತರರು ಇದ್ದರು.

ರೈತರ ಬಳಿ ಬಾರದ ಡಿಕೆಶಿ:

ಇದೇ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮನವಿ ಸ್ವೀಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಆಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಸಿಎಂ ರೈತಸಂಘಟನೆಗಳ ಮುಖಂಡರೊಂದಿಗೆ ಮಾತನಾಡು ಆಗಮಿಸಿದ ವೇಳೆ ಡಿ.ಕೆ.ಶಿವಕುಮಾರ್ ಮಾತ್ರ ಜತೆಗೆ ಬಾರದೆ ಹಿಂದೆಸರಿದರು. ಬಹುಶಃ ಮಂಡ್ಯದವರು ಛತ್ರಿಗಳು ಎಂಬ ತಮ್ಮ ಈ ಹಿಂದಿನ ಹೇಳಿಕೆ ಬಗ್ಗೆ ರೈತರು ಪ್ರಸ್ತಾಪಿಸಬಹುದು ಎಂಬ ಮುಜುಗರದಿಂದ ಹಿಂದೆ ಸರಿದಿದ್ದಾರೆ ಎಂದು ರೈತರು ಹೇಳಿದರು.


ನಮಗೆ ಯಾವುದೇ ವೈಯುಕ್ತಿಕ ಹಿತಾಸಕ್ತಿ ಇಲ್ಲ, ರೈತರ ಕಲ್ಯಾಣವೇ ನಮ್ಮ ಉದ್ದೇಶ. ಸುಖಾ ಸುಮ್ಮನೆ ಸರ್ಕಾರದ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುವುದು, ನಂತರ ಸಿಎಂ ಭೇಟಿ ಮಾಡಿ ವೈಯುಕ್ತಿಕ ಬೇಡಿಕೆ ಇಡುವುದು ನಮ್ಮ ಜಾಯಾಮಾನವಲ್ಲ ಎಂದು ಇಂಗಲಗುಪ್ಪೆ ಕೃಷ್ಣೇಗೌಡ ಅವರು ಪರೋಕ್ಷವಾಗಿ ಕೆಲವು ಸಂಘಟನೆಗಳ ವಿರುದ್ಧ ಕಿಡಿ ಕಾರಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು