ಮೈಸೂರು : ನಂಜನಗೂಡು ತಾಲ್ಲೂಕಿನ ಹೆಡಿಯಾಲ ಗ್ರಾಮದಲ್ಲಿ ನಂದಿನಿ ಹಾಲಿನ ಏಜೆನ್ಸಿ ನಡೆಸುತ್ತಿರುವ ಸಂಜಯ್ ಕುಮಾರ್ ಅವರ ಅಂಗಡಿ ಮಳಿಗೆಯಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಸಂಪೂರ್ಣ ಸುಳ್ಳಾಗಿದ್ದು, ಕೂಡಲೇ ಮನ್ಮುಲ್ ವ್ಯವಸ್ಥಾಪಕರು ಹಾಲಿನ ಬೂತ್ ತೆರೆಯಲು ಅನುಮತಿ ನೀಡಬೇಕು ಎಂದು ಹೆಡಿಯಾಲ ಗ್ರಾಪಂ ಅಧ್ಯಕ್ಷರಾದ ನಾಗೇಶ್ ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಗ್ರಾಪಂ ಕಚೇರಿ ಎದುರಿನಲ್ಲಿರುವ ಸಂಜಯ್ ಕುಮಾರ್ ಅವರ ಅಂಗಡಿ ಮಳಿಗೆಯಲ್ಲಿ 2012 ರಿಂದಲೂ ನಂದಿನಿ ಹಾಲು ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ನಮಗೆ ಯಾವುದೇ ದೂರು ಬಂದಿಲ್ಲ, ಅಥವಾ ನಾವು ಪ್ರತ್ಯಕ್ಷವಾಗಿಯೂ ಇದನ್ನು ನೋಡಿಲ್ಲ, ವೃತ್ತಿ ವೈಷಮ್ಯದಿಂದ ಕೆಲವರು ಗ್ರಾಹಕರಿಗೆ ಜ್ಯೂಸ್ ಪ್ಯಾಕೆಟ್ ಕೊಡುತ್ತಿರುವ ದೃಶ್ಯವನ್ನು ಮೊಬೈಲ್ ಮೂಲಕ ಸೆರೆ ಹಿಡಿದು ಒಂದು ತಿಂಗಳ ಬಳಿಕ ಅದನ್ನು ಮಾಧ್ಯಮಗಳಿಗೆ ನೀಡಿರುವುದು ಅನುಮಾನಾಸ್ಪದವಾಗಿದೆ. ಈ ಬಗ್ಗೆ ಸಂಜಯ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ದೃಶ್ಯ ಮಾಧ್ಯಮಗಳಲ್ಲಿ ನಮ್ಮ ಗ್ರಾಮದ ಹೆಸರು ಪ್ರಸ್ತಾಪವಾಗಿರುವ ಕಾರಣ ನಾವು ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸಿದ್ದೇವೆ. ಸಂಜಯ್ ಕುಮಾರ್ ಅವರ ಅಂಗಡಿಯಲ್ಲಿ ಯಾವುದೇ ಮದ್ಯ ಮಾರಾಟ ಕಂಡುಬಂದಿಲ್ಲ. ಗ್ರಾಮದ ಹೆಸರಿಗೆ ಕಳಂಕ ಬರುವುದು ಬೇಡ ಎಂದು ನಾವೂ ಕೂಡ ಘಟನೆಯ ಬಗ್ಗೆ ಸ್ಪಷ್ಟೀಕರಣ ನೀಡುತ್ತಿದ್ದೇವೆ. ಅಲ್ಲದೇ ನಮ್ಮ
ಗ್ರಾಮದಲ್ಲಿ ಈಗಾಗಲೇ ಎರಡು ಬಾರ್ಗಳಿವೆ ಇದರಿಂದ ಮದ್ಯ ಬೇಕಿರುವವರು ಅಲ್ಲಿಗೆ ಹೋಗಿ ಕೊಂಡುಕೊಳ್ಳುತ್ತಾರೆ.
ಹಾಲಿನ ಅಂಗಡಿಯಲ್ಲಿ ಮದ್ಯ ಮಾರಾಟ ಎನ್ನುವುದು ಹಾಸ್ಯಾಸ್ಪದ. ಇದೆಲ್ಲಾ ವೈಯುಕ್ತಿಕ ತೇಜೋವಧೆಗೆ ಹಣೆದಿರುವ ಬಲೆ ಎಂದು ಹೇಳಿದರು.
ಹಾಲಿನ ಏಜೆನ್ಸಿ ಮಾಲೀಕರಾದ ಕೆಲವರು ಸುಳ್ಳು ಸುದ್ದಿ ಹಬ್ಬಿಸಿ ನನ್ನ ಹಾಲಿನ ಏಜೆನ್ಸಿ ರದ್ದು ಮಾಡಿಸಲು ಪ್ರಯತ್ನಿಸಿದ್ದು, ನನ್ನ ವಿರುದ್ಧ ಮಾಡಲಾದ ಆರೋಪಗಳು ಸಂಪೂರ್ಣ ಸುಳ್ಳು ಇವರ ವಿರುದ್ಧ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದರು.
ಹೆಡಿಯಾಲ ಗ್ರಾಮದ ಮಾರ್ಗಸಂಖ್ಯೆ 16ರ ನಂದಿನಿ ಕೋಡ್ ಎಸ್-507ರ ಎಜೆನ್ಸಿಯನ್ನು 2012ರಿಂದ ನಾನು ಅಧಿಕೃತ ಅನುಮತಿ ಮೇರೆಗೆ ನಡೆಸುತ್ತಿದ್ದೇನೆ. ಇಷ್ಟು ವರ್ಷದ ಅವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದ ರೀತಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದೇನೆ. ಕೆಲವರು ನನ್ನ ಹಾಲಿನ ಏಜೆನ್ಸಿಯನ್ನು ಬಂದ್ ಮಾಡಿಸಲು ಹುನ್ನಾರ ನಡೆಸುತ್ತಿದ್ದಾರೆ. ಮೇ.30ರಂದು ನಾನು ಅಂಗಡಿಯಲ್ಲಿ ಗ್ರಾಹಕರೊಬ್ಬರಿಗೆ ಜ್ಯೂಸ್ ಪ್ಯಾಕೆಟ್ ಕೊಟ್ಟಿದ್ದನ್ನು ವೀಡಿಯೋ ಮಾಡಿಕೊಂಡು ಅದನ್ನು ಮದ್ಯದ ಪ್ಯಾಕೆಟ್ ಎಂದು ಸುಳ್ಳು ಹಬ್ಬಿಸಿದರು. ಈ ವಿಚಾರ ನನಗೆ ಗೊತ್ತಿರಲಿಲ್ಲ, ಕಳೆದ ಮೂರು ದಿನಗಳ ಹಿಂದೆ ಈ ವೀಡಿಯೋ ಅನ್ನು ಕೆಲವು ದೃಶ್ಯ ಮಾಧ್ಯಮಗಳ ಮೂಲಕ ಬಿತ್ತರಿಸಿ ನನ್ನ ತೇಜೋವಧೆ ಮಾಡಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಾನು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಅಲ್ಲದೇ ಸುದ್ದಿ ಬಿತ್ತರವಾದ ನಂತರ ಅಬಕಾರಿ ಇಲಾಖೆಯವರು ಮತ್ತು ಮನ್ಮುಲ್ ಅಧಿಕಾರಿಗಳು ನನ್ನ ಹಾಲಿನ ಏಜೆನ್ಸಿ ಅಂಗಡಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ತಪಾಸಣೆ ವೇಳೆ ಯಾವುದೇ ಮದ್ಯದ ಪ್ಯಾಕೆಟ್ಗಳು ಕಂಡಿಬಂದಿಲ್ಲ, ಘಟನೆಯ ಬಳಿಕ ನನ್ನ ಅಂಗಡಿಗೆ ನಂದಿನಿ ಹಾಲು ಸರಬರಾಜು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಈ ಬಗ್ಗೆ ಗ್ರಾಪ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳೂ ಸಹ ನನ್ನ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸದ್ದಾರೆ. ಯಾವುದೇ ಮದ್ಯದ ಪ್ಯಾಕೆಟ್ಗಳಾಗಲಿ ಕಂಡು ಬಂದಿಲ್ಲದ ಕಾರಣ, ನನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಜಯ್ ಕುಮಾರ್ ಒತ್ತಾಯಿಸಿದರಲ್ಲದೇ, ನನ್ನ ಅಂಗಡಿಗೆ ನಂದಿನಿ ಹಾಲಿನ ಸರಬರಾಜು ಮುಂದುವರಿಸಬೇಕೆಂದು ಅವರು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಹೆಡಿಯಾಲ ಗ್ರಾಪಂ ಸದಸ್ಯರಾದ ಗೋವಿಂದರಾಜು, ಹೆಡಿಯಾಲ ಗ್ರಾಮದ ಯಜಮಾನರಾದ ಪಟೇಲ್ ಮಹದೇವಪ್ಪ, ಸುಬ್ರಹ್ಮಣ್ಯ, ಮಾದೇಗೌಡ ಇದ್ದರು.
0 ಕಾಮೆಂಟ್ಗಳು