ಬದಲಿ ಕಾರ್ಮಿಕರ ಸೇವಾ ಹಿರಿತನ ಕಡೆಗಣನೆ, ಕಿರುಕುಳ ಆರೋಪ : ಜೆಕೆ ಟೈರ‍್ಸ್ ಆಡಳಿತದ ವಿರುದ್ಧ ಸರ್ಕಾರದ ಗಮನ ಸೆಳೆಯಲು ಬದಲಿ ಕಾರ್ಮಿಕರಿಂದ ಪತ್ರ ಚಳವಳಿ


 ಮೈಸೂರು : ನಗರದ ಜೆಕೆ ಟೈರ್ಸ್ ಕಾರ್ಖಾನೆಯಲ್ಲಿ ಕಳೆದ 20 ವರ್ಷಗಳಿಂದ ದುಡಿಯುತ್ತಿರುವ ಬದಲಿ ಕಾರ್ಮಿಕರ ಸೇವಾ ಹಿರಿತನವನ್ನು ಕಾರ್ಖಾನೆ ಆಡಳಿತ ಕಡೆಗಣಿಸುತ್ತಿದ್ದು, ಇದನ್ನು ಪ್ರಶ್ನಿಸಿದವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಸರ್ಕಾರದ ಗಮನ ಸೆಳೆಯಲು ಸಾವಿರಾರು ಬದಲಿ ನೌಕರರು ಭಾನುವಾರ ನಗರದ ಕೇಂದ್ರ ಅಂಚೆ ಕಚೇರಿ ಎದುರು ಪತ್ರ ಚಳವಳಿ ನಡೆಸಿದರು.

ಭಾನುವಾರ ಬೆಳಗ್ಗೆ ಅಂಚೆ ಕಚೇರಿ ಎದುರು ಜಮಾಯಿಸಿದ ಸಾವಿರಾರು ಬದಲಿ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಮಿಕ ಸಚಿವರಿಗೆ ಬರೆದ ಪತ್ರವನ್ನು ಅಂಚೆ ಡಬ್ಬಿಗೆ ಹಾಕುವ ಮೂಲಕ ಗಮನಸೆಳೆದರು.

ಈ ಸಂದರ್ಭದಲ್ಲಿ ಜೆಕೆ ಟೈರ್ಸ್ ಲಿಮಿಟೆಡ್ ಬದಲಿ ಮತ್ತು ದಿನಗೂಲಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಎಸ್.ಚಂದ್ರು ಮಾತನಾಡಿ, 2020ನೇ ಸಾಲಿನಲ್ಲಿ ಜೆಕೆ ಟೈರ್ಸ್ ಆಡಳಿತ ಮಂಡಳಿ 20 ವರ್ಷದಿಂದ ಕೆಲಸ ಮಾಡುತ್ತಿದ್ದ ಬದಲಿ ಕಾರ್ಮಿಕರಿಗೆ ಖಾಯಮಾತಿ ನೀಡದೆ, ಅವರ ಸೇವಾ ಹಿರಿತನವನ್ನು ಕಡೆಗಣಿಸಿದ ಕಾರಣ 33 ಜನ ಬದಲಿ ಕಾರ್ಮಿಕರು ಡಿಎಲ್‍ಸಿ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದರು. ಈ  ಕಾರಣಕ್ಕೆ 33 ಬದಲಿ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಬದಲಿ ಕಾರ್ಮಿಕರ ರಕ್ಷಣೆಗಾಗಿ ನಾವು ಭಾರತೀಯ ಮದ್ದೂರ್ ಸಂಘಕ್ಕೆ ಸಂಯೋಜಿತಗೊಂಡು ಜೆ.ಕೆ.ಟೈರ್ಸ್ (ವಿಕ್ರಾಂತ್) ಬದಲಿ ಮತ್ತು ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘವನ್ನು ಸ್ಥಾಪಿಸಿದೆವು ಇದರಿಂದ ಕುಪಿತಗೊಂಡ ಆಡಳಿತ ಮಂಡಳಿಯವರು ಸಂಘದ 630 ಬದಲಿ ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ವಜಾ ಮಾಡಿದರು. 

ನಂತರ ಕಾರ್ಮಿಕರ ಅವಶ್ಯಕತೆ ಇದ್ದ ಕಾರಣಕ್ಕೆ ಅವರಿಗೆ ಅಂಡರ್ ಟೇಕಿಂಗ್ ಒತ್ತಾಯದಿಂದ ಸಹಿ ಪಡೆದು ಕೆಲಸ ನೀಡಿದ್ದರು. ಉಳಿದ 180 ಜನ ಬದಲಿ ಕಾರ್ಮಿಕರು ದಾವೆಯನ್ನು ಹೂಡಿದ್ದರು. 2024ನೇ ಸಾಲಿನಲ್ಲಿ ನ್ಯಾಯಾಲಯ ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳಬೇಕು, ಹಿರಿತನವನ್ನು ಕಾಪಾಡಬೇಕು, ಸಮಾಲೋಚನೆ ಮಾಡುವಂತಿಲ್ಲ ಮತ್ತು ಆಡಳಿತ

ವರ್ಗವು ಅನ್‍ಲೇಬರ್ ಪ್ರಾಕ್ಟಿಸ್ ಮಾಡಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು. ಆದರೂ ಕೂಡ ಮತ್ತೆ ಆಡಳಿತ ವರ್ಗವು ವಿನಾಕಾರಣ ಬದಲಿ ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ವಜಾ ಮಾಡುತ್ತಿದೆ ಎಂದು ಆರೋಪಿಸಿದರು.

ಕೂಡಲೇ ಜೆ.ಕೆ.ಟೈರ್ ಕಂಪನಿ ಕೋರ್ಟ್ ಆದೇಶವನನು ಪಾಲಿಸಬೇಕು. ಸಮಾಲೋಚನೆ ಮಾಡದೆ ಕೆಲಸ ನೀಡಬೇಕು, ಬಿಎಂಎಸ್ ಸಂಯೋಜಿತ ಜೆ.ಕೆ.ಟೈರ್ (ವಿಕ್ರಾಂತ್) ಬದಲಿ ಮತ್ತು ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ಮಾನ್ಯತೆ ನೀಡಿ ಸಮಸ್ಯೆಯನ್ನು ಬಗೆಹರಿಸಲು ಆಡಳಿತ ವರ್ಗ ಮಾತುಕತೆಗೆ ಆಹ್ವಾನಿಸಬೇಕು, ನ್ಯಾಯಾಲಯದ ಆದೇಶದಂತೆ ಖಾಯಮಾತಿ ಮತ್ತು ವೇತನದ ವ್ಯತ್ಯಾಸವನ್ನು ಸರಿಸಮನಾಗಿ ನೀಡಬೇಕು, ಬದಲಿ ಕಾರ್ಮಿಕರಿಗೆ ಅನಗತ್ಯವಾಗಿ ನೀಡಿದಂತಹ ಸಮಾಲೋಚನೆಯ ನೋಟಿಸ್ ಅನ್ನು ವಾಪಸ್ ಪಡೆಯಬೇಕು, ಬದಲಿ ಕಾರ್ಮಿಕರ ಶೋಷಣೆ, ದೌರ್ಜನ್ಯ ಮತ್ತು ಬೆದರಿಕೆಯನ್ನು ತಕ್ಷಣ ನಿಲ್ಲಿಸಬೇಕು. ಓಟಿ ಮಾಡಿದ್ದಲ್ಲಿ ಕಾನೂನಿನಂತೆ ದುಪ್ಪಟ್ಟು ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಭಾರತ್ ಮಜ್ದೂರ್ ಸಂಘದ ರಾಜ್ಯ ಉಪಾಧ್ಯಕ್ಷರಾದ ವಾಸುದೇವ ಶಾಂತಕುಮಾರ್, ಮೋಹನ್ ಕುಮಾರ್, ಸಿ.ಎಸ್.ಮಧು ಜಯೇಶ್, ಭಾನುಚಂದ್ರ, ಮಂಜಪ್ಪಗೌಡ, ವಿಜಯಕುಮಾರ್, ಶಿವಕುಮಾರ್, ಗುರುರಾಜ್, ನಂಜುಂಡೇಗೌಡ, ಬಿಜೆಪಿ ಮುಖಂಡರಾದ ಶ್ರೀಧರ್ ಮತ್ತಿತರರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು