ಮೈಸೂರು : ಮಂಡ್ಯ ಜಿಲ್ಲೆಯ ಜೀವನಾಡಿ, ಅನ್ನದಾತರ ಆರಾಧ್ಯ ದೈವ, ರಾಜ್ಯದ ಪ್ರತಿಷ್ಠಿತ ಕೆಆರ್‍ಎಸ್ ಜಲಾಶಯಕ್ಕೆ ಮತ್ತೆ ಅಪಾಯ ಒದಗುವ ಮುನ್ಸೂಚನೆ ಇದ್ದು, ಕೆಆರ್‍ಎಸ್ ವ್ಯಾಪ್ತಿಯಲ್ಲಿ ಕ್ರಷರ್ ನಡೆಸಲು ಸಂಸ್ಥೆಯೊಂದು ಮಂಡ್ಯ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದೆ. ಇದರಿಂದ ರೈತಸಂಘ ಕೆಂಡಾಮಂಡಲವಾಗಿದೆ.
ಕೆಆರ್‍ಎಸ್ ಜಲಾಶಯದ ವ್ಯಾಪ್ತಿಯಲ್ಲಿ ಈ ಹಿಂದೆ ಸುಮಾರು 50ಕ್ಕೂ ಹೆಚ್ಚು ಕ್ರಷರ್‍ಗಳು ಕಾರ್ಯ ನಿರ್ವಹಿಸುತ್ತಿದ್ದವು. ಕಲ್ಲು ತೆಗೆಯಲು ಪೈಪೋಟಿ ನಡೆದು ಭಾರಿ ಪ್ರಮಾಣದ ಸ್ಪೋಟಕ ಬಳಸಲಾಗುತ್ತಿತ್ತು, ಇದರಿಂದ ಕೆಆರ್‍ಎಸ್ ಜಲಾಶಯಕ್ಕೆ ಅಪಾಯ ಇದೆ ಎಂದರಿತ ನ್ಯಾಯಾಲಯ ಜಲಾಶಯದ 20 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಆದೇಶಿಸಿತ್ತು.
ಆದರೇ, ಇಲ್ಲಿ ಮತ್ತೆ ಕ್ರಷರ್ ಪ್ರಾರಂಭಿಸಲು ಸಂಸ್ಥೆಯೊಂದು ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಭೂ ವಿಜ್ಞಾನಿಗಳಿಗೆ ಅರ್ಜಿ ಸಲ್ಲಿಸಿದ್ದು, ಒಂದು ವೇಳೆ ಇಲ್ಲಿ ಕ್ರಷರ್ ಪ್ರಾರಂಭಿಸಲು ಜಿಲ್ಲಾಡಳಿತ ಅನುಮತಿ ನೀಡಿದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತಸಂಘ(ರೈತಬಣ)ದ ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಕೆ.ಎಸ್.ನಾರಾಯಣ ಎಂಬವರ ಮಾಲೀಕತ್ವದ ಮೆ.ಪ್ರಭಾವತಿ ಸ್ಟೋನ್ ಕ್ರಷರ್ & ಎಂ.ಸ್ಯಾಂಡ್, ಸರ್ವೆ ನಂ. 116/2 ಮತ್ತು 117/2, ಅಲ್ಪಹಳ್ಳಿ ಗ್ರಾಮ, ಚಿನಕುರುಳಿ ಹೋಬಳಿ, ಪಾಂಡವಪುರ ತಾಲೂಕು, ಮಂಡ್ಯ ಜಿಲ್ಲೆ ಇವರು, ಕರ್ನಾಟಕ ಉಚ್ಛ ನ್ಯಾಯಾಲಯದ ರಿಟ್ ಪಿಟಿಷನ್ ಸಂಖ್ಯೆ. 9037/2022 ರ ಆದೇಶ ದಿನಾಂಕ 28-05-2025 ರೀತ್ಯಾ
ಕ್ರಷರ್‍ನ್ನು ನಡೆಸಲು ಐ.ಎಲ್.ಎಂ.ಎಸ್ ಒಪನ್ ಮಾಡಿಕೊಡುವಂತೆ ಮಂಡ್ಯ ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಭೂ ವಿಜ್ಞಾನಿಗಳಿಗೆ ಪತ್ರ ಬರೆದಿದ್ದಾರೆ. ಆದರೇ, ಮಂಡ್ಯ ಜಿಲ್ಲೆಯ ಲಕ್ಷಾಂತರ ಎಕರೆ ಜಮೀನುಗಳಿಗೆ ನೀರುಣಿಸುವ ಕೆಆರ್‍ಎಸ್ ಜಲಾಶಯಕ್ಕೆ ಗಣಿಗಾರಿಕೆಯಿಂದ ಅಪಾಯ ಇದೆ ಎನ್ನುವ ಕಾರಣಕ್ಕಾಗಿ ಸಾವಿರಾರು ಜನರು ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಅಲ್ಲದೇ ಬೃಹತ್ ಪ್ರಮಾಣದ ಸ್ಪೋಟಕಗಳಿಂದ ಜಲಾಶಯಕ್ಕೆ ಅಪಾಯ ಇದೆ ಎಂದು ಅನೇಕ ಸರ್ಕಾರಿ ಸಂಸ್ಥೆಗಳು ವರದಿಯನ್ನು ನೀಡಿವೆ. ಹೀಗಿದ್ದರೂ ಕೆಆರ್‍ಎಸ್ ವ್ಯಾಪ್ತಿಯಲ್ಲಿ ಮತ್ತೆ ಕಲ್ಲು ಗಣಿಗಾರಿಕೆ ನಡೆಸಲು ಒಬ್ಬರಿಗೆ ಅನುಮತಿ ನೀಡಿದರೆ, ಇದೇ ಆದೇಶದ ರೀತ್ಯಾ ಉಳಿದವರೂ ಅನುಮತಿಗಾಗಿ ಅರ್ಜಿ ಸಲ್ಲಿಸಿ ಎಲ್ಲರೂ ಮತ್ತೆ ಗಣಿಗಾರಿಗೆ ಪ್ರಾರಂಭಿಸಿದರೆ ಕೆಆರ್‍ಎಸ್ ಜಲಾಶಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಒಂದು ವೇಳೆ ಕ್ರಷರ್ ಪ್ರಾರಂಭಕ್ಕೆ ಸರ್ಕಾರ ಅನುಮತಿ ನೀಡಿದ್ದೇ ಆದಲ್ಲಿ ಈ ಭಾಗದ ಜನರು ಪಕ್ಷಬೇಧ ಮರೆತು ಲಕ್ಷಾಂತರ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗುವುದರಿಂದ ಕಾನೂನು ಸುವ್ಯವಸ್ಥೆಗೂ ಧಕ್ಕೆಯಾಗಬಹುದು. ಈ ಕಾರಣದಿಂದ ಜಿಲ್ಲಾಡಳಿತ ಮತ್ತು ಗಣಿ ಅಧಿಕಾರಿಗಳು ಕ್ರಷರ್ ಪ್ರಾರಂಭಿಸಿದರೆ ಮುಂದಾಗುವ ಅಪಾಯವನ್ನು ಸರ್ಕಾರಕ್ಕೆ ಮತ್ತು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟು ಈ ಭಾಗದಲ್ಲಿ ಕಲ್ಲು ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಬೇಕೆಂದು ಇಂಗಲಗುಪ್ಪೆ ಕೃಷ್ಣೇಗೌಡ ಒತ್ತಾಯಿಸಿದರು.
ಕೆಆರ್‍ಎಸ್ ಜಲಾಶಯವನ್ನು ಮಂಡ್ಯ ಜಿಲ್ಲೆಯ ರೈತರು ಮತ್ತು ತಮಿಳುನಾಡಿನ ರೈತರು ಅವಲಂಬಿಸಿದ್ದಾರೆ. ಬೆಂಗಳೂರು, ಮೈಸೂರಿನ ಜನರೂ ಕುಡಿಯಲು ಇದೇ ನೀರನ್ನು ಬಳಸುತ್ತಾರೆ. ಕ್ರಷರ್‍ಗಳಿಂದ ಜಲಾಶಯಕ್ಕೆ ಅಪಾಯ ಇದೆ ಎಂದು ನ್ಯಾಯಾಲಯವೇ ಗಣಿಗಾರಿಕೆ ನಿಷೇಧಿಸಿದೆ. ಹೀಗಿದ್ದಾಗ ಮತ್ತೆ ಇಲ್ಲಿ ಕ್ರಷರ್ ಪ್ರಾರಂಭಿಸುವುದು ಸರಿಯಲ್ಲ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ಯಾವುದೇ ಕಾರಣಕ್ಕೂ ಕ್ರಷರ್ ಪ್ರಾರಂಭಕ್ಕೆ ಅನುಮತಿ ಕೊಡಿಸಬಾರದು.
• ಇಂಗಲಗುಪ್ಪೆ ಕೃಷ್ಣೇಗೌಡ, ಅಧ್ಯಕ್ಷರು
0 ಕಾಮೆಂಟ್‌ಗಳು