ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ಸುನಿಲ್
ಬೋಸ್ ಅವರಿಗೆ ತಿ.ನರಸೀಪುರದಿಂದ ಕಣಕ್ಕಿಳಿಸಿ ತಾವು ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ಕಸರತ್ತು
ನಡೆಸಿದ್ದ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರ ಆಸೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್
ತಣ್ಣೀರು ಸುರಿದು ತಣ್ಣಗಾಗಿಸಿದ್ದಾರೆ. ನಂಜನಗೂಡಿನಲ್ಲಿ ಸೋಮವಾರ ರಾತ್ರಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ
ಡಾ.ಹೆಚ್.ಸಿ.ಮಹದೇವಪ್ಪ ಅವರಿಗೆ ಡಿಕೆಶಿ ಅವರಿಗಿಂತ ಮುಂಚೆ ಮಾತನಾಡಲು ಅವಕಾಶ ಸಿಗಲಿಲ್ಲ. ಕೊನೆಗೆ
ಸಿಕ್ಕ ಒಂದು ನಿಮಿಷದಲ್ಲಿ ಮಹದೇವಪ್ಪ ಏನೂ ಮಾತನಾಡಲು ಆಗಲೂ ಇಲ್ಲ. ಇದಕ್ಕೂ ಮುನ್ನ ಡಿಕೆಶಿ ಮಾತನಾಡಿ ಡಾ.ಹೆಚ್.ಸಿ.ಮಹದೇವಪ್ಪ ಅವರ ಕ್ಷೇತ್ರ
ತಿ.ನರಸೀಪುರದಲ್ಲಿ ೪ ಗಂಟೆ ಕಳೆದಿದ್ದೇನೆ. ಅದ್ಧೂರಿಯಾಗಿ ಜನ ಬೆಂಬಲ ವ್ಯಕ್ತವಾಗಿದೆ ಎಂದು ಹೇಳುವ
ಮೂಲಕ ಪರೋಕ್ಷವಾಗಿ ಮಹದೇವಪ್ಪರಿಗೆ ನರಸೀಪುರ ಫಿಕ್ಸ್ ಎಂಬ ಸೂಚನೆ ನೀಡಿದರು. ನಂಜನಗೂಡಿನಲ್ಲಿ ಪ್ರಜಾಧ್ವನಿ ಯಾತ್ರೆಯುದ್ದಕ್ಕೂ ಅಭಿಮಾನಿಗಳು ಧ್ರುವ
ನಾರಾಯಣ ಪರವಾಗಿ ಭಾರಿ ಘೋಷಣೆ ಕೂಗಿದ್ದೂ ಸಹ ಡಾ.ಹೆಚ್.ಸಿ.ಮಹದೇವಪ್ಪ ಅವರನ್ನು ಮಂಕು ಮಾಡಿತ್ತು.
ಈ ವೇಳೆ ಡಿ.ಕೆ.ಶಿವಕುಮಾರ್ ಮಾತನಾಡಿ ಧ್ರುವ ನಾರಾಯಣ ನಮ್ಮ ಪಕ್ಷದ ಆಸ್ತಿ ಅವರ ನೇತೃತ್ವದಲ್ಲೇ ನಂಜನಗೂಡು
ಚುನಾವಣೆ ನಡೆಯುತ್ತದೆ ಎಂದಾಗಲಂತೂ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಈ ಮೂಲಕ ಡಿಕೆಶಿ ನಂಜನಗೂಡು
ಕೈ ಅಭ್ಯರ್ಥಿ ಆರ್.ಧ್ರುವನಾರಾಯಣ ಎಂಬ ಸುಳಿವು ನೀಡಿದರು.
0 ಕಾಮೆಂಟ್‌ಗಳು