ಕೆಲಸಕ್ಕೆ ರಜೆ ಹಾಕಿ ಕಡತಗಳನ್ನು ಹೊತ್ತೊಯ್ದ ಪಿಡಿಓ: ಅಧ್ಯಕ್ಷರಿಂದಲೇ ಪಂಚಾಯ್ತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ಟಿ.ಬಿ.ಸಂತೋಷ, ಮದ್ದೂರು
ಮದ್ದೂರು : ತಾಲ್ಲೂಕಿನ ಕಾಡುಕೋತ್ತನಹಳ್ಳಿ ಪಂಚಾಯಿತಿ ಪಿಡಿಓ ಎನ್.ಲವ ಅವರು ಧೀರ್ಘಾವಧಿ ರಜೆಯ ಮೇಲೆ ತೆರಳುವ ಮುನ್ನ ಗ್ರಾಮ  ಪಂಚಾಯತಿಗೆ ಸೇರಿದ ಪ್ರಮುಖ ದಾಖಲೆಗಳ ಕಡತಗಳನ್ನು ಎತ್ತಿಕೊಂಡು ಹೋಗಿರುವ ಕಾರಣ ಸಾರ್ವಜನಿಕರ ಆಡಳಿತಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಿ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಸೇರಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಈ ವೇಳೆ ಅಧ್ಯಕ್ಷ ನವೀನ್ 
ಮಾತನಾಡಿ, ಪಿಡಿಓ ಲವ ರಜೆಗೆ ತೆರಳುವ ಮುನ್ನ ಬೇರೆಯವರಿಗೆ ಚಾರ್ಚ್ ನೀಡದೆ ಕಡತಗಳನ್ನು ಹೊತ್ತುಕೊಂಡು ಹೋಗಿದ್ದಾರೆ. ಇದು ಅಕ್ರಮವಾಗಿದೆ. 2021-22, 23ನೇ ಸಾಲಿನ ಡಿಸಿ ಬಿಲ್ ರಿಜಿಸ್ಟರ್ ಹಾಗೂ ವೊಚರ್ಸ್‍ಗಳು, 14 ಮತ್ತು 15ನೇ ಹಣಕಾಸು ಕ್ರಿಯಾ ಯೋಜನೆಯ ಕಡತಗಳು, ಸಿಬ್ಬಂದಿ ವೇತನ ಬಟವಾಡೆ ಪುಸ್ತಕ, ಸಾಮನ್ಯ ರಶೀದಿ ಪುಸ್ತಕ, ಜನರಲ್ ಲೈಸೆನ್ಸ್ ಪುಸ್ತಕ, ಕಟ್ಟಡ ನವೀಕರಣದ ಕಾಮಗಾರಿ ಕಡತಗಳನ್ನು ಪಿಡಿಓ ಎತ್ತಿಕೊಂಡು ಹೋಗಿದ್ದು, ಆಡಳಿತಕ್ಕೆ ತೊಂದರೆಯಾಗುತ್ತಿದೆ. ಅಲ್ಲದೇ ನರೇಗಾ ಕೂಲಿಕಾರ ರಿಗೆ ಸರಿಯಾಗಿ ಕೆಲಸಗಳನ್ನು ನೀಡದೆ ವಂಚಿಸಿದ್ದಾರೆ. ಕೂಡಲೇ ಇವರ ವಿರುದ್ಧ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಗ್ರಾಪಂ ಸದಸ್ಯರಾದ ಕೆಂಪರಾಜು, ಜಯರಾಜು, ಈ.ರುದ್ರಯ್ಯ, ಸಿಂಧೂ, ಸುನಂದಮ್ಮ, ಲೋಕೇಶ್, ಮುಖಂಡರಾದ ಕಿರಣ್, ರಘು, ರಾಮಣ್ಣ, ವೆಂಕಟೇಶ್, ರುದ್ರ ಮುಂತಾದವರು ಉಪಸ್ಥಿತರಿದ್ದರು. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು