ಗುಜರಾತ್ ನಲ್ಲಿ ತೂಗು ಸೇತುವೆ ಮುರಿದು ಬಿದ್ದು 60ಕ್ಕೂ ಹೆಚ್ಚು ಸಾವು

ಮೋರ್ಬಿ : ಗುಜರಾತ್‍ನ ಮೊರ್ಬಿ ನಗರದಲ್ಲಿ ಮಚ್ಚು ನದಿಯ ಮೇಲೆ ನಿರ್ಮಿಸಲಾದ ತೂಗು ಸೇತುವೆ ಭಾನುವಾರ ಸಂಜೆ ಮುರಿದು ಬಿದ್ದ ಕಾರಣ ಸೇತುವೆ ಮೇಲಿದ್ದ ಹಲವಾರು ಜನರು ನದಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ದುರಂತದಲ್ಲಿ ಸುಮಾರು 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. .
ಸ್ಥಳದಲ್ಲಿದ್ದ ಗುಜರಾತ್ ಪಂಚಾಯತ್ ಸಚಿವ ಬ್ರಿಜೇಶ್ ಮೆರ್ಜಾ ಹಾಜರಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. 60ಕ್ಕೂ ಹೆಚ್ಚು ಮೃತದೇಹಗಳು ಪತ್ತೆಯಾಗಿದ್ದು, ಅದರಲ್ಲಿ ಹೆಚ್ಚು ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಇದ್ದಾರೆ. ಉಳಿದವರನ್ನು ರಕ್ಷಿಸಲಾಗಿದೆ. ಎನ್‍ಡಿಆರ್‍ಎಫ್ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಇದು ತುಂಬಾ ದುಃಖಕರವಾಗಿದೆ ಎಂದು ರಾಜ್‍ಕೋಟ್‍ನ ಬಿಜೆಪಿ ಸಂಸದ ಮೋಹನ್‍ಭಾಯ್ ಕಲ್ಯಾಣ್‍ಜಿ ಕುಂದರಿಯಾ ಪ್ರತಿಕ್ರಿಯಿಸಿದ್ದಾರೆ.

ಸೇತುವೆ ಕುಸಿದ ನಂತರ ಹಲವರು ಈಜಿಕೊಂಡು ಬದುಕುಳಿಯಲು ಯತ್ನಿಸುತ್ತಿರುವುದು ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜತೆಗೆ ಮುರಿದ ಸೇತುವೆ ತುದಿಗೆ ಜನರ ಗುಂಪು ಅಂಟಿ ಕುಳಿತಿರುವ ದೃಶ್ಯಗಳು ಕಂಡುಬಂದಿವೆ. ಮರಿದ ಸೇತುವೆಯೂ ಕೂಡ ಭಾಗಶಃ ನೀರಿನಲ್ಲಿ ಮುಳುಗಿದೆ.
ಶತಮಾನದಷ್ಟು ಹಳೆಯದಾದ ಈ ಐತಿಹಾಸಿಕ ಸೇತುವೆಯನ್ನು ಇತ್ತೀಚೆಗೆ ನವೀಕರಿಸಿದ ನಂತರ ಜನರ ಉಪಯೋಗಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇಂದು ಸಂಜೆ 6.42ರ ವೇಳೆಗೆ ಸೇತುವೆ ಮುರಿದು ಬಿದ್ದಿದೆ.
100ಕ್ಕೂ ಹೆಚ್ಚು ಜನರು ನೀರಿನಡಿ ಸಿಕ್ಕಿಬಿದ್ದಿದ್ದಾರೆ. ಸೇತುವೆ ಕುಸಿದಾಗ ಸೇತುವೆ ಮೇಲೆ ಸುಮಾರು 500 ಮಂದಿ ಇದ್ದರು. ಛಾತ್ ಪೂಜೆಯ ನಿಮಿತ್ತ ಕೆಲವು ವಿಧಿವಿಧಾನಗಳನ್ನು ನೆರವೇರಿಸಲು ಜನರು ಜಮಾಯಿಸಿದ್ದರು. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
“ಈ ದುರಂತದ ಹೊಣೆಯನ್ನು ಸರ್ಕಾರ ಹೊರುತ್ತದೆ. ಪ್ರಧಾನಿಯವರು ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದಾರೆ. ಎಲ್ಲಾ ಉನ್ನತ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಕಳೆದ ವಾರ ನವೀಕರಣ ನಡೆದಿತ್ತು. ನಮಗೂ ಆಘಾತವಾಗಿದೆ. ನಾವು ಈ ವಿಷಯವನ್ನು ಪರಿಶೀಲಿಸುತ್ತಿದ್ದೇವೆ” ಎಂದು ಗುಜರಾತ್‍ನ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ (ಸ್ವತಂತ್ರ ಉಸ್ತುವಾರಿ) ರಾಜ್ಯ ಸಚಿವ ಬ್ರಿಜೇಶ್ ಮೆರ್ಜಾ ತಿಳಿಸಿದ್ದಾರೆ.
ಘಟನೆಯ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಮತ್ತು ಇತರ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. “ನವೀಕರಣದ ನಂತರ ಸಾರ್ವಜನಿಕರಿಗೆ ಇತ್ತೀಚೆಗೆ ತೆರೆಯಲಾದ ಸೇತುವೆಯು ಕುಸಿದು ಉಂಟಾಗಿರುವ ಘಟನೆಯಿಂದ ತೀವ್ರ ದುಃಖವಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮೋರ್ಬಿಯಲ್ಲಿ ಸಂಭವಿಸಿದ ದುರ್ಘಟನೆಗೆ ಸಂಬಂಧಿಸಿದಂತೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಇತರ ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಪ್ರಧಾನಿಯವರ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ರಕ್ಷಣಾ ಕಾರ್ಯಾಚರಣೆಗಾಗಿ ತಂಡಗಳನ್ನು ತುರ್ತು ಸಜ್ಜುಗೊಳಿಸುವಂತೆ ಕೋರಿದ್ದಾರೆ. ಪರಿಸ್ಥಿತಿಯನ್ನು ಸರಿಯಾಗಿ ಮತ್ತು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕೆಂದು ತಿಳಿಸಿರುವ ಅವರು, ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ವಿಸ್ತರಿಸಬೇಕು ಎಂದು ಸೂಚಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಮೋರ್ಬಿ ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಎಎಪಿ ಮುಖ್ಯಸ್ಥರಾದ ಅರವಿಂದ ಕೇಜ್ರೀವಾಲ್ ಅವರು, ಸಂತ್ರಸ್ತರು ಬದುಕುಳಿಯಲಿ ಎಂದು ಪ್ರಾರ್ಥಿಸಿದ್ದಾರೆ.
ಅಪಘಾತದಲ್ಲಿ ತಮ್ಮವರನ್ನು ಕಳೆದುಕೊಂಡವರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ನೀಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಗಾಯಗೊಂಡವರಿಗೆ ತಲಾ 50 ಸಾವಿರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಅವರು ರಾಜ್ಯ ರಾಜಧಾನಿ ಅಹಮದಾಬಾದ್‍ನಿಂದ ಸುಮಾರು 200 ಕಿಮೀ ದೂರದಲ್ಲಿರುವ ಘಟನಾ ಸ್ಥಳಕ್ಕೆ ತೆರಳಿದ್ದಾರೆ.
ಮೋರ್ಬಿಯಲ್ಲಿರುವ ಕೇಬಲ್ ಸೇತುವೆಯು ಐತಿಹಾಸಿಕವಾದದ್ದು. ಕಳೆದ ವಾರ ಅದನ್ನು ನವೀಕರಿಸಲಾಗಿತ್ತು. ನವೀಕರಣದ ನಂತರ, ಅಕ್ಟೋಬರ್ 26 ರಂದು ಗುಜರಾತಿ ಹೊಸ ವರ್ಷದ ದಿನದಂದು ಅದನ್ನು ಸಾರ್ವಜನಿಕರ ಉಪಯೋಗಕ್ಕೆ ತೆರೆಯಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು