ಮಾಜಿ ಸಚಿವ ಡಾ.ಎಚ್.ಸಿ.ಮಹದೇಪ್ಪ ವಾಗ್ದಾಳಿ
ಮೈಸೂರು : ಅಸ್ಪøಶ್ಯತೆ ಇನ್ನೂ ಜೀವಂತವಾಗಿದ್ದರೂ ಆರ್ಥಿಕವಾಗಿ ಸಬಲರಾದ ದಲಿತರ ಮೀಸಲಾತಿ ನಿಲ್ಲಿಸಬೇಕು ಎನ್ನುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಸಾಮಾಜಿಕ ಕಲ್ಪನೆಯೇ ಇಲ್ಲ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಾಗ್ದಾಳಿ ನಡೆಸಿದರು.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕೋಲಾರದಲ್ಲಿ ದೇವರ ಕೋಲು ಮುಟ್ಟಿದ ಎಂಬ ಒಂದೇ ಕಾರಣಕ್ಕೆ ಬಾಲಕನಿಗೆ ದಂಡ ವಿಧಿಸಲಾಗಿದೆ. ಹಿಂದೂ ನಾವೆಲ್ಲ ಒಂದು ಎಂದು ಹೇಳುವವರು ಎಲ್ಲಿಗೆ ಹೋದರು? ಎಂದು ಪ್ರಶ್ನಿಸಿದ ಅವರು, ಈಶ್ವರಪ್ಪ ಅವರಿಗೆ ಅಸ್ಪøಶ್ಯರ ನೋವು ತಿಳಿದಿಲ್ಲ. ಅಂಬೇಡ್ಕರ್ ಅವರ ಪೂನಾ ಫ್ಯಾಕ್ಟ್ ಅಗ್ರಿಮೆಂಟ್‍ನ ಗಂಧವೇ ಗೊತ್ತಿಲ್ಲದೆ ಆರ್ಥಿಕವಾಗಿ ಮುಂದುವರೆದ ದಲಿತರ ಮೀಸಲಾತಿ ನಿಲ್ಲಿಸಬೇಕು ಎನ್ನುತ್ತಿದ್ದಾರೆ. ಐದಾರು ಬಾರಿ ಗೆದ್ದರೂ ಈಶ್ವರಪ್ಪ ಅವರಿಗೆ ಸಾಮಾಜಿಕ ಸ್ಥಿತಿಗತಿ ತಿಳಿದಿಲ್ಲವೇ ಎಂದು ಕುಟುಕಿದರು.
ದೇವರ ಕೋಲು ಮುಟ್ಟಿದಕ್ಕೆ ಬಾಲಕನಿಗೆ 60 ಸಾವಿರ ದಂಡ ಹಾಕಿದ ಸವರ್ಣೀಯರು ಮಾನವ ಹಕ್ಕನ್ನು ಉಲ್ಲಂಘನೆ ಮಾಡಿದ್ದಾರೆ. ಬೇರೆಯದೆಲ್ಲದಕ್ಕೂ ಬಾಯಿ ಹರಿದು ಬಿಡುವ ಈಶ್ವರಪ್ಪ ಈಗ ಏಕೆ ಮಾತನಾಡುತ್ತಿಲ್ಲ.
ಧರ್ಮದಲ್ಲಿ ಅಧರ್ಮ ನಡೆಯುವುದನ್ನು ಖಂಡಿಸಿದರೆ ತಪ್ಪು ಎನ್ನುವವರು ಎಲ್ಲಿ ಕೂತಿದ್ದೀರಿ? ಸಾಮಾಜಿಕ ಬದ್ಧತೆ ಸಂವಿಧಾನದ ಮೇಲೆ ನಂಬಿಕೆ ಇಲ್ಲದೇ ಒಂದು ಕೋಮನ್ನು ಮುಂದಿಟ್ಟುಕೊಂಡು ಆಡಳಿತ ಮಾಡಲು ಆಗುತ್ತದಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿಯಾಗುತ್ತಿದೆ. ಜನ ಆತಂಕದಲ್ಲಿ ಬದುಕುತ್ತಿದ್ದಾರೆ. ನಮ್ಮನ್ನು ಆಳುತ್ತಿರುವ ಪ್ರಧಾನಿಯಾಗಲಿ, ಮುಖ್ಯಮಂತ್ರಿಗಳಾಗಲಿ ವ್ಯಕ್ತಿಗತವಾಗಿ ಪ್ರಾಬಲ್ಯರಲ್ಲ, ಅವರು ನಾಗಪುರದವರಿಗೆ ವಿಧೇಯರಾಗಿ ಆಡಳಿತ ನಡೆಸುತ್ತಿದ್ದಾರೆ. ಹಾಗಾಗಿಯೇ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.
ಚರಿತ್ರೆ ಮತ್ತು ಶಿಕ್ಷಣದ ಕತ್ತನ್ನು ಹಿಸುಕುವ ಕೆಲಸವನ್ನು ಬಿಜೆಪಿ ಮಾಡುತ್ತಿದ್ದು, ಶಿಕ್ಷಣ ಕೇಸರಿಕರಣವಾಗುತ್ತಿದೆ. ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರಿಸುವ ವಿಚಾರದಲ್ಲಿ ಕಾಂಗ್ರೆಸ್‍ನ ಸಂಪೂರ್ಣ ವಿರೋಧ ಇದೆ. ಕೇಸರಿಕರಣದ ಮೂಲಕ ತಮ್ಮ ಅಜೆಂಡಾವನ್ನು ಸಾಧಿಸಲು ಬಿಜೆಪಿ ಮತ್ತು ಆರ್‍ಎಸ್‍ಎಸ್ ಪ್ರಯತ್ನ ಪಡುತ್ತಿದ್ದೆ. ಬ್ರಾಹ್ಮಣರು ಬ್ರಾಹ್ಮಣ್ಯ ಹೇರಲು ಹೊರಟರೆ ಹೇಗೋ ಎದುರಿಸಬಹುದು. ಆದರೆ ಈಶ್ವರಪ್ಪ ನಂತವರೇ ಬ್ರಾಹ್ಮಣ್ಯ ಹೇರಲು ಮುಂದಾಗಿರುವುದು ಅತ್ಯಂತ ದುರಂತ ಎಂದು ಹೇಳಿದರು.
ಭಾರತ್ ಜೋಡೊ ಐತಿಹಾಸಿಕ ಪಾದಯಾತ್ರೆ:
ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಹುಲ್‍ಗಾಂಧಿಯವರು 3570 ಕಿ.ಮೀ. ನಡೆಯುವ ಮೂಲಕ ಐತಿಹಾಸಿಕ ಪಾದಯಾತ್ರೆ ಮಾಡುತ್ತಿದ್ದಾರೆ.
ಸೆ.30 ರಂದು ಗುಂಡ್ಲುಪೇಟೆಗೆ ಆಗಮಿಸಲಿದ್ದು ಈ ಸಂದರ್ಭದಲ್ಲಿ ಪಕ್ಷದ ಸಾವಿರಾರು ಕಾರ್ಯಕರ್ತರು ಅವರೊಂದಿಗೆ ನಡಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
·
