ಚಿರತೆ ದಾಳಿಯಿಂದ ಮೃತಪಟ್ಟ ಗೋವಿಂದಯ್ಯ ಮನೆಗೆ ಶಾಸಕ ಆರ್.ನರೇಂದ್ರ ಭೇಟಿ, ಸಾಂತ್ವಾನ

 ವರದಿ : ಶಾರುಕ್ ಖಾನ್ ಹನೂರು 

ಚಿರತೆ ದಾಳಿಗೆ ಮೃತಪಟ್ಟ ಕೆ.ವಿ.ಎನ್ ದೊಡ್ಡಿ ಗ್ರಾಮದ ಗೋವಿಂದಯ್ಯ ಅವರ ಮನೆಗೆ ಶಾಸಕ ಆರ್ ನರೇಂದ್ರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.
ಹನೂರು : ಶುಕ್ರವಾರ ಬೆಳಿಗ್ಗೆ ಚಿರತೆ ದಾಳಿಗೆ ಮೃತಪಟ್ಟ ಗೋವಿಂದಯ್ಯ ಮನೆಗೆ ಶಾಸಕ ಆರ್.ನರೇಂದ್ರ ಶನಿವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಬಳಿಕ ಅವರು ಮಾತನಾಡಿ, ಹನೂರು ಕ್ಷೇತ್ರದಲ್ಲಿ ಇದುವರೆಗೂ ಇಂತಹ ಪ್ರಕರಣಗಳು ನಡೆದಿರಲಿಲ್ಲ. ಇದೀಗ ಚಿರತೆ ದಾಳಿಗೆ ಗೋವಿಂದಯ್ಯ ಮೃತಪಟ್ಟಿರುವುದು ದುರ್ದೈವ. ಅರಣ್ಯ ಇಲಾಖೆ ವತಿಯಿಂದ ನೀಡಲಾಗುವ ೭.೫ ಲಕ್ಷ ಪರಿಹಾರವನ್ನು ೧ ವಾರದೊಳಗೆ ನಿಮ್ಮ ಖಾತೆಗೆ ಜಮಾ ಮಾಡಲು ಅಧಿಕಾರಿಗಳಿಗೆ ತಿಳಿಸುತ್ತೇನೆ. ಈ ಭಾಗದ ರೈತರು ಹಾಗೂ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು ಈಗಾಗಲೇ ಅರಣ್ಯ ಇಲಾಖೆಗೆ ಕ್ರಮ ವಹಿಸಲು ಸೂಚನೆ ನೀಡಲಾಗಿದೆ. ಚಿರತೆ ಸೆರೆ ಹಿಡಿಯುವವರೆಗೂ ಜಾನುವಾರುಗಳನ್ನು ಮೇಯಿಸಲು ಕಾಡಿಗೆ ತೆರಳಬಾರದು ಎಂದು ಸಲಹೆ ನೀಡಿದರು.
ಕಾವೇರಿ ವನ್ಯಜೀವಿ ವಿಭಾಗದ ಡಿಸಿಎಫ್ ನಂದೀಶ್ ಮಾತನಾಡಿ, ಈಗಾಗಲೇ ಚಿರತೆ ಸೆರೆ ಹಿಡಿಯಲು ಹದಿನೈದು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದಲ್ಲದೆ ೪ ಬೋನುಗಳನ್ನು ಸಹ ಇಡಲಾಗಿದ್ದು ಆದಷ್ಟು ಬೇಗ ಚಿರತೆ ಸೆರೆ ಹಿಡಿಯಲು ಕ್ರಮ ವಹಿಸಲಾಗುವುದು. ಗ್ರಾಮಸ್ಥರು ಇಲಾಖೆಗೆ ಸಹಕರಿಸಬೇಕು. ರಾತ್ರಿ ಗಸ್ತು ಹಾಗೂ ಬೆಳಗಿನ ವೇಳೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗ್ರಾಮಸ್ಥರಿಗೆ ಚಿರತೆ ಕಂಡು ಬಂದರೆ ತಕ್ಷಣ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ಎಸಿಎಫ್ ಅಂಕರಾಜು, ವೃತ್ತ ನಿರೀಕ್ಷಕ ಸಂತೋಷ್ ಕಶ್ಯಪ್, ಎಎಸ್‌ಐ ಶಿವರಾಜು, ಪೇದೆಗಳಾದ ಮೂರ್ತಿ, ರಾಘವೇಂದ್ರ, ಮುಖಂಡರುಗಳಾದ ವೆಂಕಟರಮಣನಾಯ್ಡು, ನಾಗೇಶ್, ಮಲ್ಲಯ್ಯ ಇನ್ನಿತರರು ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು