ಮುಖ್ಯಮಂತ್ರಿ ಮೈಸೂರು ಭೇಟಿ ಬೆನ್ನಲ್ಲೇ : ಪೇ ಸಿಎಂ ಪೋಸ್ಟರ್ ಅಭಿಯಾನಕ್ಕೆ ಕಾಂಗ್ರೆಸ್ ಚಾಲನೆ


 ವಿದ್ಯುತ್ ಖರೀದಿಯಲ್ಲಿ ಮುಖ್ಯಮಂತ್ರಿ ಮತ್ತು ಇಂದನ ಸಚಿವರಿಗೆ ವಾರ್ಷಿಕ ೬ ಸಾವಿರ ಕೋಟಿ ಕಮೀಷನ್ :  ಕೆಪಿಸಿಸಿ ವಕ್ತಾರ ಆರೋಪ


ಮೈಸೂರು : ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಭಾರಿ ಮುಜಗರವನ್ನುಂಟು ಮಾಡಿರುವ ಕಾಂಗ್ರೆಸ್ ಪಕ್ಷದ ಪೇ ಸಿಎಂ ಪೋಸ್ಟರ್ ಅಭಿಯಾನ ಮೈಸೂರಿನಲ್ಲೂ ಆರಂಭವಾಗಿದ್ದು, ಕೆಪಿಸಿಸಿ ವಕ್ತಾರ ಎಂ.ಲಕ್ಷö್ಮಣ್ ನಗರದ ಜೆಕೆ ಗ್ರೌಂಡ್ ಕಾಂಪೌಂಡ್‌ಗೆ ಪೇ ಸಿಎಂ ಪೋಸ್ಟರ್ ಅಂಟಿಸುವ ಮೂಲಕ ಭಾನುವಾರ ಚಾಲನೆ ನೀಡಿದರು.
ಕಾಂಗ್ರೆಸ್ ಭವನದಲ್ಲಿ ಭಾನುವಾರ ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿದ ಬಳಿಕ ಮುಖಂಡರೊಡನೆ ರಸ್ತೆಗೆ ಆಗಮಿಸಿ ಜೆಕೆ ಗ್ರೌಂಡ್ ಕಾಂಪೌಂಡ್ ಸೇರಿದಂತೆ ವಿವಿಧಕಡೆ ಪೇ ಸಿಎಂ ಪೋಸ್ಟರ್ ಅಂಟಿಸಿದರು.
ಇದಕ್ಕೂ ಮುನ್ನ ಅವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇಂದನ ಸಚಿವ ಸುನೀಲ್ ಕುಮಾರ್ ವಿದ್ಯುತ್ ಖರೀದಿಯಿಂದ ವಾರ್ಷಿಕವಾಗಿ ಸುಮಾರು ೬ ಸಾವಿರ ಕೋಟಿ ರೂ. ಕಮೀಷನ್ ಪಡೆಯುತ್ತಿದ್ದಾರೆಂದು ಆರೋಪಿಸಿದರು.
ಅಗತ್ಯ ಬಿದ್ದಲ್ಲಿ ವರ್ಷಕ್ಕೆ ಒಂದು ಬಾರಿ ಮಾತ್ರ ವಿದ್ಯುತ್ ದರ ಪರಿಷ್ಕರಣೆ ಮಾಡಬಹುದು ಎಂಬ ನಿಯಮವಿದ್ದರೂ ರಾಜ್ಯ ಸರ್ಕಾರ ೨ ವರ್ಷದಲ್ಲಿ ಕಾನೂನು ಬಾಹಿರವಾಗಿ ಇದುವರೆಗೂ ೬ ಬಾರಿ ವಿದ್ಯುತ್ ದರ ಏರಿಕೆ ಮಾಡಿದೆ. ಇದರಿಂದ ಜನಸಾಮಾನ್ಯದ ಬದುಕಿನ ಮೇಲೆ ಬಹಳಷ್ಟು ಕೆಟ್ಟ ಪರಿಣಾಮ ಬೀರುತ್ತಿದೆ. ಜನ ನೆಮ್ಮದಿಯಿಂದ ಬದುಕಲು ಈ ಸರ್ಕಾರ ಬಿಡುತ್ತಿಲ್ಲ. ಇವರ ಹಣದ ದಾಹ ಹೆಚ್ಚಾಗಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಎಲ್ಲಾ ಮೂಲಗಳಿಂದ ಒಟ್ಟು ೧೫ ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯವಿದ್ದರೂ ಕೇವಲ ೬೭೦೮ ಮೆಗಾವ್ಯಾಟ್ ವಿದ್ಯುತ್ ಮಾತ್ರ ಉತ್ಪಾದನೆ ಮಾಡಿ, ಕೊರತೆ ಇರುವ ೪೩೦೦ ಮೆಗಾವ್ಯಾಟ್ ವಿದ್ಯುತ್ ಅನ್ನು ಖಾಸಗಿಯವರಿಂದ ವಾಸ್ತವ ದರಕ್ಕಿಂತ ಪ್ರತಿ ಯೂನಿಟ್‌ಗೆ ೨ರೂ ೩೮ ಪೈಸೆ ಹೆಚ್ಚಾಗಿ ನೀಡಿ ಖರೀದಿಸುತ್ತಿದೆ. ಖರೀದಿಯಲ್ಲಿ ಒಂದು ಯೂನಿಟ್‌ಗೆ ಒಂದು ರೂ. ಕಮೀಷನ್‌ನಂತೆ ವಾರ್ಷಿಕ ಸುಮಾರು ೬ ಸಾವಿರ ಕೋಟಿ ರೂ. ಕಮೀಷನ್ ಇಂದನ ಸಚಿವರು ಮತ್ತು ಮುಖ್ಯಮಂತ್ರಿಗಳು ಪಡೆಯುತ್ತಿದ್ದಾರೆಂದು ಆರೋಪಿಸಿದರು.
ಅಕ್ಟೋಬರ್,೨೦೨೦ರಲ್ಲಿ ಅಂದಿನ ಕೆಪಿಟಿಸಿಎಲ್ ಎಂಡಿ ಆಗಿದ್ದ ಪೊನ್ನುರಾಜ್ ಅವರು, ಸರ್ಕಾರಕ್ಕೆ ಪತ್ರ ಬರೆದು ಹೆಚ್ಚು ಬೆಲೆ ನೀಡಿ ವಿದ್ಯುತ್ ಖರೀದಿ ಮಾಡುವುದರಿಂದ ಸರ್ಕಾರಕ್ಕೆ ೪ ವರ್ಷಕ್ಕೆ ೪೪ ಸಾವಿರ ಕೋಟಿ ನಷ್ಟವುಂಟಾಗಿದೆ ಎಂದು ತಿಳಿಸಿದ್ದಾರೆ ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಿಎಂ ರಾಮು ಮುಖಂಡರಾದ ಶಫಿ, ಗಿರೀಶ್, ಮಹೇಶ್ ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು