’ವಿದ್ಯುತ್ ಖಾಸಗೀಕರಣ, ರೈತರ ಮರಣ ಶಾಸನ ಬರೆದಂತೆ’ ಖಾಸಗೀಕರಣ ನಿಲ್ಲಿಸದಿದ್ದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ : ರೈತನಾಯಕ ಇಂಗಲಗುಪ್ಪೆ ಕೃಷ್ಣೇಗೌಡ ಎಚ್ಚರಿಕೆ

ಮೈಸೂರು : ವಿದ್ಯುತ್ ವಲಯವನ್ನು ಖಾಸಗೀಕರಣ ಮಾಡುವುದು ರೈತರ ಮರಣ ಶಾಸನ ಬರೆದಂತೆ, ರೈತರ ಹೆಸರೇಳಿ ಅಧಿಕಾರಕ್ಕೆ ಬಂದವರು ಇಂದು ಹಣದ ಆಸೆಗಾಗಿ ಖಾಸಗಿ ಕಂಪನಿ ಜತೆ ಕೈ ಜೋಡಿಸಿ ರೈತರ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದು  ಕರ್ನಾಟಕ ರಾಜ್ಯ ರೈತಸಂಘದ(ರೈತಬಣ) ಅಧ್ಯಕ್ಷರಾದ ಇಂಗಲಗುಪ್ಪೆ ಕೃಷ್ಣೇಗೌಡ ಆರೋಪಿಸಿದರು. 

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದಲ್ಲಿರುವ ವಿದ್ಯುತ್ ಸರಬರಾಜು ಸಂಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಹೀಗಿದ್ದರೂ ಖಾಸಗಿ ಕಂಪನಿಗಳಿಗೆ ಪರವಾನಗಿ ನೀಡುವ ಮೂಲಕ ಸರ್ಕಾರ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆಸುತ್ತಿದೆ. ಇದು ಖಂಡನೀಯ ಮತ್ತು ಇದರ ಹಿಂದಿನ ಮರ್ಮ ಏನು? ಖಾಸಗಿ ಕಂಪನಿಗಳಿಂದ ಇಂದನ ಸಚಿವರು, ಮುಖ್ಯಮಂತ್ರಿಗಳು ಎಷ್ಟು ಕೋಟಿ ಕಿಕ್‌ಬ್ಯಾಕ್ ಪಡೆದಿದ್ದಾರೆ? ರೈತರಿಗೆ ವಿವರಣೆ ಕೊಡಿ ಎಂದು ಗುಡುಗಿದರು.

ವಿದ್ಯುತ್ ಖಾಸಗೀಕರಣದಿಂದ ಕೃಷಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ರೈತರು ತಮ್ಮ ಭೂಮಿಯಲ್ಲಿ ವ್ಯವಸಾಯ ಮಾಡಲು ದುಪ್ಪಟ್ಟು ದರ ನೀಡಿ ವಿದ್ಯುತ್ ಖರೀದಿ ಮಾಡಬೇಕಾಗುತ್ತದೆ. ನಂತರ ಬೆಳೆಗಳಿಗೆ ಬೆಲೆ ಸಿಗದಿದ್ದಲ್ಲಿ, ರೈತರು ಕ್ರಮೇಣ ಕೃಷಿಯಿಂದ ವಿಮುಖರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕರೋನಾ ನಂತರ ಐಟಿ, ಬಿಟಿ ಮತ್ತಿತರ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದವರು ಇದೀಗ ಕೃಷಿಯತ್ತ ಮುಖ ಮಾಡಿದ್ದಾರೆ, ಆದರೇ, ವಿದ್ಯುತ್ ಖಾಸಗೀಕರಣ ಮಾಡಿದರೆ ಮತ್ತೇ ಯುವಕರು ಕೃಷಿಯನ್ನು ಬಿಟ್ಟು ಪಟ್ಟಣಗಳಿಗೆ ವಲಸೆ ಹೋಗಬೇಕಾಗುತ್ತದೆ. ಕೃಷಿ ಭೂಮಿಗಳು ಉಳ್ಳವರ ಪಾಲಾಗುತ್ತವೆ. ವಿದ್ಯುತ್ ಕ್ಷೇತ್ರದ ಖಾಸಗೀಕರಣದಿಂದ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ ಇದ್ದು, ಗೃಹಜ್ಯೋತಿ ಯೋಜನೆ, ಕೃಷಿ ಪಂಪ್‌ಸೆಟ್‌ಗಳಿಗೆ ನೀಡಲಾಗುತ್ತಿರುವ ಉಚಿತ ವಿದ್ಯುತ್ ಹಾಗೂ ವಿವಿಧ ಸಹಾಯಧನ ಯೋಜನೆಗಳಿಗೆ ದಕ್ಕೆ ಉಂಟಾಗುತ್ತದೆ ಎಂದರು.

ಖಾಸಗಿ ಕಂಪನಿ ಅವರು ಯಾವುದೇ ನಿರ್ಧಾರ ಕೈಗೊಳ್ಳಬಹುದು, ವಿದ್ಯುತ್ ದರವನ್ನು ಖಾಸಗಿ ಕಂಪನಿಗಳು ತಮ್ಮ ಮನ ಬಂದಂತೆ ಹೆಚ್ಚಿಸಬಹುದಾದ ಅಪಾಯವೂ ಇದೆ. ವಿದ್ಯುತ್ ವಲಯದ ಖಾಸಗೀಕರಣದಿಂದ ಗ್ರಾಮೀಣ ಪ್ರದೇಶಗಳನ್ನು ಮತ್ತು ಕೃಷಿಯನ್ನು ನಿರ್ಲಕ್ಷ್ಯ ಮಾಡಲಾಗುತ್ತದೆ. ಇಲಾಖೆಯ ನೇಮಕಾತಿಗಳಲ್ಲಿ ಮೀಸಲಾತಿ ವ್ಯವಸ್ಥೆಗೆ ಹಿನ್ನಡೆಯಾಗುತ್ತದೆ.  ಹಾಗೂ ಸರ್ಕಾರಿ ಉದ್ಯೋಗಗಳ ಭದ್ರತೆಗೆ ಅಪಾಯ ಉಂಟಾಗಬಹುದು. ವಿದ್ಯುತ್‌ನಂತಹ ಮೂಲಭೂತ ಸೇವೆಯೇ ವ್ಯಾಪಾರದ ಸರಕಾಗುವ ಭೀತಿ ಎದುರಾಗಿದ್ದು, ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳು ಖಾಸಗಿ ಕಂಪನಿಗಳ ಪಾಲಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ರೈತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಟಾಟಾ ಪವರ್ ಸಂಸ್ಥೆಗೆ ಪರವಾನಗಿ ನೀಡಬಾರದು ಹಾಗೂ ವಿದ್ಯುತ್ ಖಾಸಗೀಕರಣ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಇಲ್ಲದಿದ್ದಲ್ಲಿ ಸಾವಿರಾರು ರೈತರ ಜತೆಗೂಡಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಚಾಲಕರಾದ ಕೆಆರ್‌ಎಸ್ ರಾಮೇಗೌಡ, ಮೈಸೂರು ಜಿಲ್ಲಾಧ್ಯಕ್ಷರಾದ ಮಾಲೀಕ್ ಆವರ್ತಿ, ಮುಖಂಡರಾದ ಶಿವಣ್ಣ, ಶಿವಕುಮಾರ್, ಅರಸಿನಕೆರೆ ಕೆಂಪರಾಜು ಇದ್ದರು.

ಬಿಡದಿ ಟೌನ್‌ಶಿಪ್‌ಗೆ ವಿರೋಧ

ಬಿಡದಿ ಟೌನ್‌ಶಿಪ್ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಡಬೇಕು. ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಅನ್ಯ ಉದ್ದೇಶಗಳಿಗೆ ಬಳಸಬಾರದು. ರಾಜಕೀಯ ಮುಖಂಡರು ತಮ್ಮ ಸ್ವಹಿತಾಸಕ್ತಿಗಾಗಿ ಇಂತಹ ಯೋಜನೆಗಳನ್ನು ರೂಪಿಸುತ್ತಾರೆ. ಇದರಿಂದ ಲಕ್ಷಾಂತರ ರೈತಕುಟುಂಬಗಳು ಬೀದಿಗೆ ಬೀಳುತ್ತವೆ.

ಇಂಗಲಗುಪ್ಪೆ ಕೃಷ್ಣೇಗೌಡ, ಅಧ್ಯಕ್ಷರು ಕರ್ನಾಟಕ ರಾಜ್ಯ ರೈತಸಂಘ (ರೈತಬಣ)