ಭಾರತ್ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಉಚಿತ ಎಚ್‌ಪಿವಿ ಲಸಿಕೆ ಅಭಿಯಾನಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಚಾಲನೆ


 ಮೈಸೂರು: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಶುಕ್ರವಾರ ಭಾರತ್ ಆಸ್ಪತ್ರೆ ಮತ್ತು ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿ (ಬಿಎಚ್‍ಐಒ) ವತಿಯಿಂದ ಹಮ್ಮಿಕೊಂಡ ಉಚಿತ ಎಚ್‍ಪಿವಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. 

ಈ ಕಾರ್ಯಕ್ರಮವನ್ನು ಬಿಎಚ್‍ಐಒ ಅಧ್ಯಕ್ಷ ಡಾ. ಬಿ.ಎಸ್. ಅಜಯ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ರೂಪಿಸಲಾಗಿದ್ದು, ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಮಹಿಳೆಯರಲ್ಲಿ ಮುನ್ನೆಚ್ಚರಿಕೆ ಆರೋಗ್ಯ ಜಾಗೃತಿ ಮೂಡಿಸುವುದೇ ಮುಖ್ಯ ಉದ್ದೇಶವಾಗಿದೆ. ಮೊದಲ 200 ನೋಂದಾಯಿತ ಮಹಿಳೆಯರಿಗೆ ಉಚಿತ ಎಚ್ ಪಿ ವಿ ಲಸಿಕೆ ನೀಡಲಾಗುತ್ತದೆ.

ಡಾ.ನಾಗಲಕ್ಷ್ಮಿ ಚೌಧರಿ ಕಾರ್ಯಕ್ರಮದಲ್ಲಿ ಮಾತನಾಡಿ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಉಚಿತ ಎಚ್‍ಪಿವಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡುವ ಅವಕಾಶ ನನಗೆ ದೊರೆತಿರುವುದು ತುಂಬಾ ಹೆಮ್ಮೆಯ ವಿಷಯ, ನನಗೆ ಬಹಳ ಸಂತೋಷವಾಗಿದೆ. ನಾಳೆ ಮೊದಲಾಗಿ ನೋಂದಣಿ ಮಾಡಿಸಿಕೊಳ್ಳುವ ಇನ್ನೂ 200 ಮಹಿಳೆಯರಿಗೆ ಉಚಿತವಾಗಿ ಎಚ್ಪಿವಿ ಲಸಿಕೆ ನೀಡುವ ಕಾರ್ಯಕ್ರಮವನ್ನು ನೀವು ಆರಂಭಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ.

ಕ್ಯಾನ್ಸರ್ ರೋಗಿಗಳನ್ನು ನೋಡಿದಾಗ ನಮಗೆ ತಿಳಿಯುವುದು ಏನೆಂದರೆ ಔಷಧಿ, ಇಂಜೆಕ್ಷನ್ ಮತ್ತು ಶಸ್ತ್ರಚಿಕಿತ್ಸೆ ಮಾತ್ರ ಸಾಕಾಗುವುದಿಲ್ಲ. ಅವರ ಮನೋಬಲವನ್ನು ಹೆಚ್ಚಿಸುವುದು ಬಹಳ ಮುಖ್ಯ. ನಮ್ಮ ಪ್ರೀತಿ, ಮಮತೆ ಮತ್ತು ಆತ್ಮಸ್ಥೈರ್ಯವು ಅವರಿಗೆ ದೊಡ್ಡ ಔಷಧಿಯಂತೆ ಕೆಲಸ ಮಾಡುತ್ತದೆ. ನಾವು ಅವರನ್ನು ಮಾನಸಿಕವಾಗಿ ಬೆಂಬಲಿಸಿದರೆ ಅವರು ಯಾವ ಕಾಯಿಲೆಯನ್ನಾದರೂ ಜಯಿಸುವ ಶಕ್ತಿ ಪಡೆಯುತ್ತಾರೆ. ಭಾರತ್ ಆಸ್ಪತ್ರೆಯವರು ಬಡವರಿಗೆ ಮತ್ತು ಅಗತ್ಯವಿರುವವರಿಗೆ ಉಚಿತ ಅಥವಾ ಸಹಾಯಧನದ ಚಿಕಿತ್ಸೆಯನ್ನು ನೀಡುತ್ತಿರುವುದು ನಿಜವಾಗಿಯೂ ಶ್ಲಾಘನೀಯ ಕಾರ್ಯ. ಹಲವಾರು ಮಕ್ಕಳು ಮತ್ತು ರೋಗಿಗಳಿಗೆ ಸಹಾಯ ಮಾಡುವಲ್ಲಿ ಸಮಾಜದ ಸಹಕಾರವೂ ಬಹಳ ಮುಖ್ಯ. ಪ್ರಚಾರಕ್ಕಾಗಿ ಅಲ್ಲ, ಸೇವೆಯ ಮನೋಭಾವದಿಂದ ಮಾಡಿದ ಕೆಲಸವೇ ನಿಜವಾದ ಯಶಸ್ಸನ್ನು ತರುತ್ತದೆ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದೇಶವೇ ``ರೈಟ್ಸ್ ಜಸ್ಟೀಸ್ ಅಂಡ್ ಆಕ್ಷನ್'' ಮಹಿಳೆಯರು ತಮ್ಮ ಹಕ್ಕುಗಳನ್ನು ತಿಳಿದುಕೊಂಡು, ನ್ಯಾಯಕ್ಕಾಗಿ ಧೈರ್ಯವಾಗಿ ನಿಲ್ಲಬೇಕು. ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿರುವ ಮಹಿಳೆಯರು ಈ ಜಗತ್ತಿನ ಅತ್ಯಂತ ಬಲಿಷ್ಠ ವ್ಯಕ್ತಿಗಳಾಗುತ್ತಾರೆ. ಆದ್ದರಿಂದ ಎಲ್ಲ ಮಹಿಳೆಯರೂ ಆರೋಗ್ಯವಾಗಿರಲಿ, ದೀರ್ಘಾಯುಷ್ಯ ಹೊಂದಿರಲಿ ಮತ್ತು ಆತ್ಮವಿಶ್ವಾಸದಿಂದ ಬದುಕಲಿ ಎಂದು ಹಾರೈಸುತ್ತೇನೆ. ವಿಶೇಷವಾಗಿ ಕ್ಯಾನ್ಸರ್ ರೋಗಿಗಳಿಗೂ ಧೈರ್ಯ ಮತ್ತು ಆಶೀರ್ವಾದಗಳನ್ನು ಕೋರುತ್ತೇನೆ.

"ಈ ಕಾಯಿಲೆಯ ತೀವ್ರತೆಯನ್ನು ಎತ್ತಿ ತೋರಿಸುತ್ತಾ, ಬಿ.ಹೆಚ್.ಐ.ಒ (ಃಊIಔ) ಸಂಸ್ಥೆಯ ಮುಖ್ಯ ವೈದ್ಯಕೀಯ ಆಂಕೊಲಾಜಿಸ್ಟ್ ಆದ ಡಾ. ಸಿ.ಬಿ. ಅವಿನಾಶ್ ಅವರು ಹೀಗೆ ಹೇಳಿದರು..."ಗರ್ಭಕಂಠದ ಕ್ಯಾನ್ಸರ್ ಇನ್ನೂ ಮಹಿಳೆಯರ ಆರೋಗ್ಯದ ಪ್ರಮುಖ ಸಮಸ್ಯೆಯಾಗಿದ್ದು, ಜಾಗತಿಕವಾಗಿ ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್ ಗಳಲ್ಲಿ ಇದು ಎರಡನೇ ಸಾಮಾನ್ಯ ಕಾಯಿಲೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 1.23 ಲಕ್ಷ ಮಹಿಳೆಯರು ಹೊಸದಾಗಿ ಈ ರೋಗಕ್ಕೆ ತುತ್ತಾಗುತ್ತಾರೆ ಮತ್ತು ಸುಮಾರು 67,500 ಮಹಿಳೆಯರು ಸಾವನ್ನಪ್ಪುತ್ತಾರೆ. ಸರಿಯಾದ ಸಮಯದಲ್ಲಿ ಲಸಿಕೆ ಪಡೆಯುವ ಮೂಲಕ ಈ ಕಾಯಿಲೆಯನ್ನು ಬಹುಮಟ್ಟಿಗೆ ತಡೆಗಟ್ಟಬಹುದು. ಲಸಿಕೆ 9-14 ವರ್ಷದ ಬಾಲಕರು ಮತ್ತು ಬಾಲಕಿಯರಿಗೆ ಹೆಚ್ಚು ಪರಿಣಾಮಕಾರಿಯಾಗಿದೆ, ಮತ್ತು 26 ವರ್ಷದವರೆಗೆ ಅಥವಾ ವೈದ್ಯರ ಸಲಹೆಯ ಮೇರೆಗೆ 45 ವರ್ಷದವರೆಗೆ ಪಡೆಯಬಹುದಾಗಿದೆ ಎಂದರು

 ಬಿಎಚ್‍ಐಒನ ಮುಖ್ಯ ಕಾರ್ಯಾಚರಣಾ ಅಧಿಕಾರಿ ಗೌತಮ್ ಧಾಮರ್ಲ ಮಾತನಾಡಿ, ಮುನ್ನೆಚ್ಚರಿಕಾ ಆರೋಗ್ಯ ಸೇವೆಗಳನ್ನು ಉತ್ತೇಜಿಸಲು ಈ ಅಭಿಯಾನವನ್ನು ಕೈಗೊಳ್ಳಲಾಗಿದೆ. ಮೊದಲ 200 ನೋಂದಣಿಗಳಿಗೆ ಉಚಿತ ಎಚ್ ಪಿ ವಿ ಲಸಿಕೆ ನೀಡಲಾಗುತ್ತದೆ. ಕುವೆಂಪುನಗರದಲ್ಲಿರುವ ಬಿಎಚ್‍ಐಒ ಹೊಸ ಡೇ ಕೇರ್ ಕ್ಲಿನಿಕ್ ನಲ್ಲಿ ಲಸಿಕೆ ನೀಡಲಾಗುತ್ತಿದ್ದು, ಅರ್ಹ ಮಹಿಳೆಯರು ಕೂಡಲೇ ನೋಂದಾಯಿಸಿಕೊಂಡು ಈ ಸೌಲಭ್ಯವನ್ನು ಪಡೆಯುವಂತೆ ಮನವಿ ಮಾಡಲಾಗಿದೆ.

"ಈ ಸಂದರ್ಭದಲ್ಲಿ ಕ್ಯಾನ್ಸರ್ನಿಂದ ಚೇತರಿಸಿಕೊಂಡವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಹೆಚ್ಚಿನ ಅರ್ಥ ಮತ್ತು ಮೆರುಗನ್ನು ನೀಡಿದರು. ಇದೇ ವೇಳೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಎಲ್ಲಾ ಕ್ಯಾನ್ಸರ್ ವಿಜೇತರನ್ನು ಸನ್ಮಾನಿಸಿದರು.