ಮಾದಕ ವಸ್ತುಗಳ ಸೇವನೆಯಿಂದ ಬಲಹೀನತೆ ಉಂಟಾಗುತ್ತದೆ : ಕೆ.ಆರ್. ಆಸ್ಪತ್ರೆಯ ಆರ್‌ಎಂಓ ಡಾ.ನಯಾಜ್ ಪಾಷ ಎಚ್ಚರಿಕೆ

ಮೈಸೂರಿನಲ್ಲಿ ಸರ್ಕಾರಿ ಮುಸ್ಲಿಂ ನೌಕರರ ಸಂಘದಿಂದ ಮಾಧಕ ವಸ್ತುಗಳ ದುಷ್ಪರಿಣಾಮ ಕುರಿತು ಅಭಿಯಾನ


 ವರದಿ : ನಜೀರ್ ಅಹಮದ್, 9740738219

ಮೈಸೂರು : ಯಾವುದೇ ಮಾಧಕ ವಸ್ತುಗಳ ಸೇವನೆಯಿಂದ ವ್ಯಕ್ತಿ ದಿನೇ ದಿನೇ ಬಲಹೀನನಾಗುತ್ತಾನೆ. ಇದರಿಂದ ವಿದ್ಯಾರ್ಥಿಗಳು, ಯುವಕರು ಮಾಧಕ ವಸ್ತುಗಳ ಸೇವನೆ ಮಾಡಬಾರದು ಅದರ ಬಗ್ಗೆ ಜಾಗೃತರಾಗಿರಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷರು ಹಾಗೂ ಕೆ.ಆರ್. ಆಸ್ಪತ್ರೆಯ ಆರ್‍ಎಂಒ ಡಾ.ನಯಾಜ್ ಪಾಷ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.

ಇಲ್ಲಿನ ಗೌಸಿಯನಗರ(ಕಲ್ಯಾಣಗಿರಿ)ದ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಮೈಸೂರು ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ್ದ ‘ನಮ್ಮ ನಡೆ ಮಾದಕ ವಸ್ತುಗಳ ನಿರ್ನಾಮದ ಕಡೆ’, ‘ಬದುಕಿ, ಬದುಕಲು ಬಿಡಿ’ ಎಂಬ ಧ್ಯೆಯ ವಾಕ್ಯದೂಂದಿಗೆ ಆಯೋಜಿದ್ದ "ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತು ಅರಿವು ಅಭಿಯಾನ"ದಲ್ಲಿ ಅವರು ಮಾತನಾಡಿದರು.

ಡ್ರಗ್ಸ್ ಅಥವಾ ಗಾಂಜಾ ದಂತಹ ಕೆಲವು ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿ ನಿರಂತರಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗುತ್ತಾನೆ. ಸಮಾಜದಲ್ಲಿ ಆತನಿಗೆ ಗೌರವ ಸಿಗುವುದಿಲ್ಲ, ಕುರಾನ್, ಭಗವದ್ಗೀತೆ, ಬೈಬಲ್ ಮುಂತಾದ ಯಾವುದೇ ಧರ್ಮ ಗ್ರಂಥಗಳು ಸಹ ದುಶ್ಚಟಗಳಿಗೆ ಬಲಿಯಾಗಬೇಡಿ ಎಂದು ಬೋಧನೆ ಮಾಡುತ್ತವೆ. ವಿದ್ಯಾರ್ಥಿಗಳು ಮಾದಕ ವಸ್ತುಗಳ ಬಗ್ಗೆ ಜಾಗೃತರಾಗಬೇಕು, ಇಂದಿನ ಯುವಕರೇ ಮುಂದಿನ ಪ್ರಜೆಗಳು, ನೀವು ಉತ್ತಮ ವ್ಯಕ್ತಿಯಾದರೆ, ಒಳ್ಳೆಯ ಸಮಾಜ ನಿರ್ಮಾಣ ಮಾಡಬಹುದು. ಹಾಗಾಗಿ ವಿದ್ಯಾಥಿಗಳು ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತರಾಗಿರಿ ಎಂದು ಕರೆ ನೀಡಿದರಲ್ಲದೇ, ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ರೋಗ ರುಜಿನಗಳು, ಅದರ ದುಷ್ಪರಿಣಾಮಗಳ ಬಗ್ಗೆ ಪಿಪಿಟಿ ಮೂಲಕ ಪ್ರಾತ್ಯಕ್ಷಿಕೆ ನೀಡಿದರು.

ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರಾದ ಡಾ.ಸೈಯದ್ ಉಮರ್ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳಿಂದ ಬರುವ ರೋಗಗಳ ಹಾಗೂ ದೈಹಿಕ ಮಾನಸಿಕ ಆರೋಗ್ಯದ ಮೇಲೆ ಉಂಟಾಗುವ ಕೆಟ್ಟ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. 

ಡಾ.ಅಮೀನಾ ಸಿದ್ದೀಖಾ, ಕೆಎಸ್‍ಜಿ ಮೇವಾದ ಸಲಹೆಗಾರರಾದ ಜûರೀನ ಖುರ್ಷೀದ್, ಮುಖ್ಯ ಶಿಕ್ಷಕರಾದ ಮಹದೇವಸ್ವಾಮಿ, ಶಿಕ್ಷಕರಾದ ಸೈಯದ್ ನಯಾಜ್, ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಸೈಯದ್ ಮುದಸ್ಸೀರ್ ಮುಂತಾದವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಘದ ನಿಕಟ ಪೂರ್ವ ಕಾರ್ಯದರ್ಶಿ  ಅಜೀಜ್ ಖಾನ್,  ಮುಖ್ಯ ಶಿಕ್ಷಕಿ ಝಮೀರಾ ತಾಜ್, ಮಹಿಳಾ ಸಂಘಟನಾ ಕಾರ್ಯದರ್ಶಿ ತಸ್ನೀಮ್ ಫಿರ್ದೋಸ್, 

ಹಿರಿಯ ಉಪಾಧ್ಯಕ್ಷರಾದ ಸೈಯದ್ ದಸ್ತಗೀರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಸಾದಿಖ್ ಪಾಷ ಇತರರು ಇದ್ದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ನಿರಂತರ ಕಲಿಕೆ, ಕೌಶಲಗಳನ್ನು ಅಭಿವೃದ್ಧಿಪಡಿಸುವ ಮೂಲಕ ಉತ್ತಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬೇಕು. ಇಂದಿನ ಮಕ್ಕಳೆ ಭವ್ಯ ಭಾರತದ ಮುಂದಿನ ಪ್ರಜೆಗಳಾಗಿದ್ದು, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮೊದಲು ನೀವು ಆರೋಗ್ಯವಂತರಾಗಬೇಕು. ಇದಕ್ಕಾಗಿ ದುಷ್ಚಟಗಳಿಂದ ದೂರ ಇದ್ದು, ತಂದೆ, ತಾಯಿ ಕೊಡುವ ಸಲಹೆ ಸ್ವೀಕರಿಸಿ, ಅವರು ನೀಡುವ ಹಣವನ್ನು ಶಿಕ್ಷಣಕ್ಕೆ ಪೂರಕವಾಗಿ ಅಗತ್ಯವಾದ ಖರ್ಚು ವೆಚ್ಚಗಳಿಗೆ ಭರಿಸಬೇಕು. ವ್ಯಸನಿಗಳ ಸ್ನೇಹ ಮಾಡಬಾರದು.

ಸೈಯದ್ ಮುದಸ್ಸಿರ್, ಜಿಲ್ಲಾ ಅಧ್ಯಕ್ಷರು