ವರದಿ: ನಿಷ್ಕಲ ಎಸ್.,ಗೌಡ ಮೈಸೂರು
ಮೈಸೂರು : ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹ ಅಭಿಯಾನ ಮುಂದುವರಿದಿದ್ದು, ಶನಿವಾರ ಟೆರಿಷಿಯನ್ ಕಾಲೇಜಿನ ಮುಂಭಾಗದಲ್ಲಿ ನಗರಪಾಲಿಕೆ ಮಾಜಿ ಸದಸ್ಯರಾದ ರಘುರಾಜೇ ಅರಸ್ ನೇತೃತ್ವದಲ್ಲಿ ನಡೆದ ಅಭಿಯಾನಕ್ಕೆ ಶಾಸಕ ತನ್ವೀರ್ ಸೇಠ್ ಸಹಿ ಮಾಡುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ, ದೇಶಾದ್ಯಂತ ಲೋಕಸಭೆ ಮತ್ತು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ವೋಟ್ ಚೋರಿ ಮೂಲಕ ಅಧಿಕಾರಕ್ಕೆ ಬಂದಿದ್ದು, ಚುನಾವಣಾ ಆಯೋಗ ಇದಕ್ಕೆ ಬೆಂಬಲ ನೀಡಿದೆ ಎಂದು ಆರೋಪಿಸಿದರು.
ಈಗಾಗಲೇ ನಮ್ಮ ಪಕ್ಷದ ವರಿಷ್ಠ ನಾಯಕರಾದ ರಾಹುಲ್ ಗಾಂಧಿ ಅವರು, ದೇಶದಲ್ಲಿ ವೋಟ್ ಚೋರಿ ನಡೆದಿರುವುದು ಮತ್ತು ಇದನ್ನು ತಡೆಗಟ್ಟಲು ಚುನಾವಣಾ ಆಯೋಗದ ವೈಫಲ್ಯವನ್ನು ಪ್ರಾತ್ಯಕ್ಷಿಕೆ ಮೂಲಕ ದೇಶದ ಕೊಟ್ಯಾಂತರ ಮತದಾರರ ಗಮನಸೆಳೆದಿದ್ದಾರೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ನಿರಂತರವಾಗಿ ಇದರ ವಿರುದ್ಧ ಹೋರಾಟ ಮಾಡುತ್ತಿದೆ.
ಚುನಾವಣಾ ಆಯೋಗವು ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ. ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಮತದಾನಕ್ಕೆ ಕೆಲವೇ ದಿನಗಳ ಮೊದಲು ಕೊಟ್ಯಾಂತರ ಮಹಿಳೆಯರ ಖಾತೆಗೆ ತಲಾ ೧೦ ಸಾವಿರ ರೂ. ಹಾಕುವ ಮೂಲಕ ಮತದಾನಕ್ಕೆ ಅಮಿಷ ಒಡ್ಡಲಾಗಿದೆ. ಇದೂ ಕೂಡ ಮತಗಳ್ಳತನಕ್ಕೆ ಸಮನಾದ ಕೃತ್ಯ ಇದನ್ನು ತಪ್ಪಿಸಿ ಪ್ರಾಮಾಣಿಕವಾಗಿ ಚುನಾವಣೆ ನಡೆಸಲು ನಮ್ಮ ಪಕ್ಷ ಮತಗಳ್ಳತನದ ವಿರುದ್ಧ ಸಹಿ ಸಂಗ್ರಹ ಅಭಿಯಾನ ಕೈಗೊಂಡಿದೆ. ಎನ್ಆರ್ ಕ್ಷೇತ್ರದಲ್ಲಿ ಸುಮಾರು ೮೦ ಸಾವಿರಕ್ಕೂ ಅಧಿಕ ಸಹಿಗಳನ್ನು ಸಂಗ್ರಹಿಸಿ ಕೆಪಿಸಿಸಿ ಕಚೇರಿಗೆ ಕಳಿಸಲಾಗಿದೆ ಎಂದರು.
ಕರ್ನಾಟಕ ಬಿಹಾರ ಮಾತ್ರವಲ್ಲದೇ, ದೇಶದ ಹಲವು ರಾಜ್ಯಗಳಲ್ಲಿ ಮತಗಳ್ಳತನ ನಡೆದಿದ್ದು, ಅದರ ವಿರುದ್ಧ ಜನಜಾಗೃತಿ ಮಾಡುವ ಉದ್ದೇಶದೊಂದಿಗೆ ರಾಜ್ಯದಲ್ಲಿ ಈವರೆಗೆ ೧ ಕೋಟಿ ೧೨ ಲಕ್ಷ ಜನರಿಂದ ಕಾಂಗ್ರೆಸ್ ಪಕ್ಷದಿಂದ ಸಹಿ ಸಂಗ್ರಹ ಮಾಡಿದ್ದೇವೆ.
ಮತಗಳ್ಳತನದ ಬಗ್ಗೆ ‘ನಾವು ಚುನಾವಣಾ ಆಯೋಗದಿಂದ ಪೂರಕ ದಾಖಲೆಗಳನ್ನು ಕೋರುತ್ತಿದ್ದೇವೆ, ಆದರೆ ಅವರು ನಮಗೆ ಅವುಗಳನ್ನು ಒದಗಿಸುತ್ತಿಲ್ಲ ಎಂದು ದೂರಿದರು.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಸಂದೀಪ್, ಮಾಜಿ ಸಚಿವರಾದ ಕೋಟೆ ಶಿವಣ್ಣ, ನಗರ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಮೂರ್ತಿ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯ್ಯೂಬ್ ಖಾನ್, ನಗರಪಾಲಿಕೆ ಮಾಜಿ ಸದಸ್ಯರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ರಘುರಾಜೇ ಅರಸ್, ಶ್ರೀಧರ್ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ.ಎನ್.ಮಂಜುನಾಥ್, ಮುಖಂಡರಾದ ಶೌಕತ್ ಪಾಷ, ರಮೇಶ್, ಮೋಹನ್, ಅಬ್ರಾರ್ ಮೊಹಮ್ಮದ್ ಇತರರು ಇದ್ದರು.



