ವರದಿ:ನಜೀರ್ ಅಹಮದ್, (9740738219)
ಮೈಸೂರು : ನಗರದ ಪ್ರತಿಷ್ಠಿತ ಜೆಕೆ ಟೈರ್ಸ್‍ನಲ್ಲಿ ಬದಲಿ ಮತ್ತು ದಿನಗೂಲಿ ಕಾರ್ಮಿಕರಿಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ. ಈ ಬಗ್ಗೆ ಕಾರ್ಮಿಕ ಇಲಾಖೆಗೆ ಹಲವು ಬಾರಿ ದೂರು ನೀಡಿದ್ದರೂ ಕಾರ್ಮಿಕರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಕಾರ್ಖಾನೆ ಆಡಳಿತ ನ್ಯಾಯಾಲಯದ ಆದೇಶವನ್ನೂ ಪಾಲಿಸುತ್ತಿಲ್ಲ. ಇದರ ವಿರುದ್ಧ ಜೂನ್ 29ಕ್ಕೆ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕಾರ್ಮಿಕ ಸಚಿವರಿಗೆ ಚಳವಳಿ ಮೂಲಕ ಪತ್ರ ಬರೆಯಲಾಗುವುದು ಎಂದು ಭಾರತೀಯ ಮಜ್ದೂರ್ ಸಂಘದ ಉಪಾಧ್ಯಕ್ಷರಾದ ವಾಸುದೇವ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಹಿಂದೆ ಕಾರ್ಮಿಕರ ಹಕ್ಕುಗಳ ಬಗ್ಗೆ ಮಾತನಾಡಿದ್ದಕ್ಕಾಗಿ 120 ಬದಲಿ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಲಾಗಿತ್ತು, ನಾವು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಕ್ಕೆ ನಮಗೆ ಕೆಲಸ ನೀಡಿದ್ದರು. ಬಳಿಕ ನಾವು ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಕಿರುಕುಳ, ಶೋಷಣೆ, ತಾರಮತ್ಯ ನಡೆಯುತ್ತಿರುವ ಬಗ್ಗೆ ಪ್ರಶ್ನಿಸದ್ದಕ್ಕೆ ಮತ್ತೆ 5 ಕಾರ್ಮಿಕರನ್ನು ವಜಾ ಮಾಡಿದ್ದಾರೆ. ಕಾರ್ಖಾನೆಯಲ್ಲಿ ಕ್ಯಾಂಟಿನಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಖಾಯಂ ಉದ್ಯೋಗಿಗಳಿಗೆ ಉತ್ತಮ ಆಹಾರ ಕೊಟ್ಟು ಮಿಕ್ಕಿದ ಹಳಸಿದ ಆಹಾರವನ್ನು ನಮಗೆ ಕೊಡುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ ನಮ್ಮನ್ನು ಹೊರ ಹಾಕುತ್ತಾರೆ. ಮಾರನೇ ದಿನ ಕೆಲಸ ನೀಡುವುದಿಲ್ಲ. ಜತೆಗೆ ಹೆಚ್ಚುವರಿ ಕೆಲಸ ಕೊಡುವುದು, ಕಿರುಕುಳ ನೀಡುವುದು ಮಾಡುತ್ತಾರೆ. 8 ಗಂಟೆ ಅವಧಿಯಲ್ಲಿ ಸ್ವಲ್ಪವೂ ಬಿಡುವು ನೀಡದೆ ಕಾರ್ಮಿಕರನ್ನು ಪ್ರಾಣಿಗಳ ರೀತಿ ಕಂಡು ದುಡಿಮೆ ಮಾಡಿಸಿಕೊಳ್ಳುತ್ತಾರೆ. ಈ ಬಗ್ಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಯಾವುದನ್ನೂ ಪ್ರಶ್ನಿಸುವುದಿಲ್ಲ, ಇವರೆಲ್ಲ ಕಾರ್ಖಾನೆ ಆಡಳಿತದೊಂದಿಗೆ ಶಾಮೀಲಾಗಿದ್ದಾರೆ ಎಂಬ ಅನುಮಾನವೂ ಇದೆ ಎಂದು ದೂರಿದರು.
20 ವರ್ಷಗಳಿಂದ ನಾವು ಇಲ್ಲಿ ಕೆಲಸ ಮಾಡುತ್ತಿದ್ದರೂ ನಮಗೆ ಯಾವುದೇ ದಾಖಲಾತಿ ನೀಡುವುದಿಲ್ಲ. ಈ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಿ ನಮಗೆ ನ್ಯಾಯ ದೊರಕಿಸಿಕೊಡುವಂತೆ ಕಾರ್ಮಿಕ ಸಚಿವರಿಗೆ ಪತ್ರ ಚಳವಳಿ ಮೂಲಕ ಮನವಿ ಮಾಡಲಾಗುತ್ತದೆ ಎಂದರು.
ಜೆಕೆ ಟೈರ್ಸ್ ಲಿಮಿಟೆಡ್ ಬದಲಿ ಮತ್ತು ದಿನಗೂಲಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಎಸ್.ಚಂದ್ರು ಮಾತನಾಡಿ, ಕೂಡಲೇ ಜೆಕೆ ಟೈರ್ಸ್ ಆಡಳಿತ ಮಂಡಳಿ ಈ ಹಿಂದೆ ನ್ಯಾಯಾಲಯ ಮಾಡಿರುವ ಆದೇಶವನ್ನು ತಪ್ಪದೆ ಪಾಲಿಸುವುದು, ಬದಲಿ ಮತ್ತು ದಿನಗೂಲಿ ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ಮಾತುಕತೆ ಮಾಡುವುದು, ಯಾವುದೇ ಕಾರಣಕ್ಕೂ ಬದಲಿ ಮತ್ತು ದಿನಗೂಲಿ ಕಾರ್ಮಿಕರಿಗೆ ಕಿರುಕುಳ ನೀಡದೆ ನಮ್ಮನ್ನು ಗೌರವಯುತವಾಗಿ ನಡೆಸಿಕೊಂಡು ಕಾರ್ಮಿಕರಿಗೆ ಸಿಗುವ ಸವಲತ್ತುಗಳನ್ನು ಕೊಡುವುದು ಮತ್ತು ಕ್ರಮೇಣ ನಮ್ಮನ್ನು ಕಾಯಂ ಮಾಡುವುದು ಮತ್ತು ಕಾರ್ಖಾನೆಯಲ್ಲಿ ತಾರತಮ್ಯ ಶೋಷಣೆ ನಿಲ್ಲಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಜುಲೈ 29 ರಂದು ಧರಣಿ ಮತ್ತು ಪತ್ರ ಚಳವಳಿ ನಡೆಸಲಾಗುವುದು, ಶಾಸಕರಾದ ಹರೀಶ್‍ಗೌಡ ಅವರು ನಮ್ಮ ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಂತಕುಮಾರ್, ಮೋಹನ್ ಕುಮಾರ್, ಸಿ.ಎಸ್.ಮಧು ಜಯೇಶ್ ಮತ್ತಿತರರು ಇದ್ದರು.
ಕಾರ್ಮಿಕರ ಮಕ್ಕಳಿಗೆ ಕೆಲಸ
ಬದಲಿ, ದಿನಗೂಲಿ ಕಾರ್ಮಿಕರು 20 ವರ್ಷಗಳಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರೂ ಅವರಿಗೆ ಕಾಯಂ ಮಾಡಿಲ್ಲ, ಆದರೇ, ಕಾಯಂ ನೌಕರರ ಮಕ್ಕಳು ಯಾವುದೇ ಅನುಭವ ಇಲ್ಲದಿದ್ದರೂ ಶೀಫಾರಸ್ಸಿನ ಮೇರೆಗೆ ಅವರನ್ನು ಕಾಯಂ ನೌಕರಿ ನೀಡುತ್ತಿದ್ದಾರೆ. ಇದರಿಂದ ಬದಲಿ ಕಾರ್ಮಿಕರಿಗೆ ಮಾಡಿದ ಅನ್ಯಾಯವಾಗಿದೆ.
• ವಾಸುದೇವ, ಉಪಾಧ್ಯಕ್ಷರು ಭಾರತೀಯ ಮಜ್ದೂರ್ ಸಂಘ
0 ಕಾಮೆಂಟ್‌ಗಳು