ಅರಮನೆಯಿಂದ ವಾಪಸ್ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ

ಜಿಲ್ಲಾಡಳಿತದಿಂದ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಡುಗೆ

ಮೈಸೂರು : ವಿಖ್ಯಾತ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿ ಮುಗಿದಿದ್ದು, ದಸರಾ ಪ್ರಮುಖ ಆಕರ್ಷಣೆಯಾಗಿದ್ದ ಗಜಪಡೆಗಳು ಶುಕ್ರವಾರ ಅರಮನೆಯಿಂದ ಮತ್ತೆ ಕಾಡಿನತ್ತ ಪ್ರಯಾಣ ಬೆಳೆಸಿದವು.
ಐತಿಹಾಸಿಕ ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ಧ ದಸರಾ ಗಜಪಡೆಗೆ ಜಿಲ್ಲಾಡಳಿತದಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು.
ದಸರಾ ಆರಂಭಕ್ಕೂ ಒಂದೂವರೆ ತಿಂಗಳಿಗೂ ಮೊದಲೇ ಕಾಡಿನಿಂದ ಮೈಸೂರಿಗೆ ಆಗಮಿಸಿ ಅರಮನೆಯಲ್ಲಿ ಬೀಡುಬಿಟ್ಟಿದ್ಧ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಆನೆಗಳು ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದವು.  ಕ್ಯಾಪ್ಟನ್ ಅಭಿಮನ್ಯು 750 ಕೆ.ಜಿ ಚಿನ್ನದ ಅಂಬಾರಿ ಹೊತ್ತು ಹೆಜ್ಜೆ ಹಾಕಿದ್ದನು.  ವಿವಿಧೆಡೆಯಿಂದ ಆಗಮಿಸಿದ್ಧ ಲಕ್ಷಾಂತರ ಜನರು ಜಂಬೂ ಸವಾರಿ ಮೆರವಣಿಗೆಯನ್ನ ಕಣ್ತುಂಬಿಕೊಂಡರು.

ಭಾವುಕರಾದ ಶಶಿಕಲಾ ಸುರೇಂದ್ರ 

ಕಳೆದ ಒಂದೂವರೆ ತಿಂಗಳಿಂದ ಅರಮನೆಯಲ್ಲಿ ಬೀಡುಬಿಟ್ಟಿದ್ದ ಆನೆಗಳ ಕುಟುಂಬದವರು ಮತ್ತು ಮಕ್ಕಳ ಜತೆ ಒಡನಾಟವಿಟ್ಟುಕೊಂಡಿದ್ದ ಸಮಾಜ ಸೇವಕಿ ಶಶಿಕಲಾ ಸುರೇಂದ್ರ ಗಜಪಡೆ ಬೀಳ್ಕೊಡುಗೆ ಸಂದರ್ಭದಲ್ಲಿ ಭಾವುಕರಾದರು.
ಅಶ್ರುತರ್ಪಣದೊಂದಿಗೆ ಆನೆಗಳಿಗೆ ಮುತ್ತಿಕ್ಕಿ ಬಿಳ್ಕೊಟ್ಟರು. ಮಾವುತರು ಮತ್ತು ಕಾವಾಡಿಗಳ ಮಕ್ಕಳು ಟೆಂಟ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭ ಶಶಿಕಲಾ ತಮ್ಮ ಗೆಳಯರ ಜತೆಗೂಡಿ ಮಕ್ಕಳಿಗೆ ಪುಸ್ತಕ ಮತ್ತಿತರ ಶೈಕ್ಷಣಿಕ ವಸ್ತುಗಳನ್ನು ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಗಾದಿ ಗೌತಮ್, ಡಿಸಿಎಫ್ ಕರಿಕಾಳನ್, ಸಮಾಜ ಸೇವಕಿ ಶಶಿಕಲಾ ಸುರೇಂದ್ರ ಸೇರಿದಂತೆ ಇತರೆ ಅರಣ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು. ಜಿಲ್ಲಾಡಳಿತದ ವತಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗೆ ಗೌರವ ಸಮರ್ಪಣೆ ಮಾಡಲಾಯಿತು.