2023ರ ವಿಧಾನಸಭಾ ಚುನಾವಣೆಗೆ ರೈತಸಂಘ ರೆಡಿ, ಡಿಸೆಂಬರ್‍ನಿಂದ ದರ್ಶನ್ ಪುಟ್ಟಣ್ಣಯ್ಯ ಚುನಾವಣಾ ಪ್ರಚಾರ


ರೈತನಾಯಕ ದರ್ಶನ್ ಪುಟ್ಟಣ್ಣಯ್ಯ ಹುಟ್ಟುಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

 -ನಜೀರ್ ಅಹಮದ್, ಪಾಂಡವಪುರ

ಪಾಂಡವಪುರ : 2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ಅವರು ಡಿಸೆಂಬರ್ ತಿಂಗಳಿನಿಂದ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ರೈತಸಂಘದ ವರಿಷ್ಠ ನಾಯಕಿ ಸುನೀತಾ ಪುಟ್ಟಣ್ಣಯ್ಯ ಹೇಳಿದರು.
ರೈತನಾಯಕ ದರ್ಶನ್ ಪುಟ್ಟಣ್ಣಯ್ಯ ಅವರ ಹುಟ್ಟುಹಬ್ಬದ ಪ್ರಯುಕ್ತ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆಗೆ ರೈತಸಂಘ ಸಿದ್ದವಿದ್ದು, ದರ್ಶನ್ ಪುಟ್ಟಣ್ಣಯ್ಯ ಅವರು ತಮ್ಮ ಕಂಪನಿ ವ್ಯವಹಾರದ ಹಿನ್ನೆಲೆಯಲ್ಲಿ ಎರಡು ಬಾರಿ ಅಮೇರಿಕಾಕ್ಕೆ ಹೋಗಿ ಬರಲಿದ್ದು, ಬಳಿಕ ಪೂರ್ಣ ಪ್ರಮಾಣದಲ್ಲಿ ರೈತಸಂಘದ ಸಂಘಟನೆಯಲ್ಲಿ ತೊಡಗಿಸಿಕೊಂಡು ಡಿಸೆಂಬರ್‍ನಲ್ಲಿ ಕ್ಷೇತ್ರದಾದ್ಯಂತ ಚುನಾವಣಾ ಪ್ರವಾಸ ನಡೆಸುವರು ಎಂದರು.

ರೈತನಾಯಕ ದರ್ಶನ್ ಪುಟ್ಟಣ್ಣಯ್ಯ ಹುಟ್ಟುಹಬ್ಬದ ಪ್ರಯುಕ್ತ ಪಾಂಡವಪುರ ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು

ತಾಲೂಕಿನಲ್ಲಿ ದರ್ಶನ್ ಪುಟ್ಟಣ್ಣಯ್ಯ ಇಲ್ಲದಿದ್ದರೂ ಅಭಿಮಾನದಿಂದ ರೈತಸಂಘದ ಕಾರ್ಯಕರ್ತರು, ಹಿರಿಯ ಹೋರಾಟಗಾರರು ಹಾಗೂ ಅಭಿಮಾನಿಗಳು, ಯುವಕರು ಅವರ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ತಾಲೂಕಿನ ವಿವಿಧೆಡೆ ದರ್ಶನ್ ಪುಟ್ಟಣ್ಣಯ್ಯ ಅವರ ಹುಟ್ಟುಹಬ್ಬ ಆಚರಿಸುತಿದ್ದು, ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಶ್ರಮದಾನ, ಕೊಳಗಳ ಸ್ವಚ್ಚತೆ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೆ.ಎಸ್.ಪುಟ್ಟಣ್ಣಯ್ಯ ಕುಟುಂಬವೆಂದರೆ ತಾಲೂಕಿನ ಪ್ರತಿಯೊಬ್ಬರಿಗೆ ಎಲ್ಲಿಲ್ಲದ ಅಭಿಮಾನ ಹಾಗೂ ಗೌರವ ಇದೆ. ತಾಲೂಕಿನ ಜನರು ಕೆ.ಎಸ್.ಪುಟ್ಟಣ್ಣಯ್ಯ ಅವರ ಕುಟುಂಬಕ್ಕೆ ಪಂಚೇದ್ರಿಯಗಳು ಇದ್ದಂತೆ ಎಂದರು.

ರೈತನಾಯಕ ದರ್ಶನ್ ಪುಟ್ಟಣ್ಣಯ್ಯ ಹುಟ್ಟುಹಬ್ಬದ ಪ್ರಯುಕ್ತ ರೈತಸಂಘದ ಕಾರ್ಯಕರ್ತರು ಕೊಳಗಳ ಸ್ವಚ್ಚತೆ ನಡೆಸಿ ಶ್ರಮದಾನ ಮಾಡಿದರು.

ಈ ವೇಳೆ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಚಿಕ್ಕಾಡೆ ಹರೀಶ್, ಪ್ರಧಾನ ಕಾರ್ಯದರ್ಶಿ ಕೆನ್ನಾಳು ವಿಜಯಕುಮಾರ್, ರೈತಸಂಘದ ಮುಖಂಡರಾದ ಶಂಭೂನಹಳ್ಳಿ ಕಾಳೇಗೌಡ, ಚಿಟ್ಟನಹಳ್ಳಿ ಮಹೇಶ್, ಸ್ವಾಮಿಗೌಡ, ಎಣ್ಣೆಹೊಳೆಕೊಪ್ಪಲು ಮಂಜುನಾಥ್, ವೈ.ಜಿ.ರಘು ಇತರರಿದ್ದರು.