ಆರ್‌ಎಸ್‌ಎಸ್ ಬಿಜೆಪಿಯ ಪಾಪದ ಕೂಸು : ಸಿದ್ಧರಾಮಯ್ಯ ತಿರುಗೇಟು


 ಮೈಸೂರು : ಪಿಎಫ್‌ಐ ಕಾಂಗ್ರೆಸ್‌ನ ಪಾಪದ ಕೂಸಾದರೆ ಆರ್‌ಎಸ್‌ಎಸ್ ಏನು? ಅದು ಬಿಜೆಪಿಯ ಪಾಪದ ಕೂಸು ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ತಿರುಗೇಟು ನೀಡಿದರು.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿಎಫ್‌ಐ ಕಾಂಗ್ರೆಸ್ ಪಕ್ಷ ಪಾಪದ ಕೂಸು ಎಂದು ಟೀಕಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಗೆ ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಭಾರತ್ ಜೋಡೋ ಯಾತ್ರೆಗೆ ಸಕಲ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿದೆ. ನಾಳೆ ರಾಜ್ಯಕ್ಕೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ರಾಹುಲ್ ಗಾಂಧಿ ವಾಸ್ತವ್ಯಕ್ಕೆ ಎಲ್ಲ ತಯಾರಿ ನಡೆದಿದೆ. ಮೈಸೂರಿನಲ್ಲಿ ರಾಹುಲ್ ಗಾಂಧಿ ವಾಸ್ತವ್ಯ ಮಾಡಲ್ಲ. ಕಾರ್ಯಕ್ರಮ ಮಾತ್ರ ಇರಲಿದೆ ಎಂದರು.
ಇದೇ ವೇಳೆ ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ ಮಾತನಾಡಿ, ಪಿಎಫ್‌ಐ ಮತ್ತು ಎಸ್‌ಡಿಪಿಐ ಎರಡೂ  ಬಿಜೆಪಿಯ ಬಿ ಟೀಂ. ಅವರಿಂದಲೇ ಇವರ ಕೋಮುವಾದಿ ಬೇಳೆ ಬೇಯುತ್ತಿದೆ. ನಿಜವಾಗಲೂ ಅವರಿಗೆ ಬದ್ಧತೆ ಇದ್ದಿದ್ದರೆ ಸರ್ಕಾರ ಬಂದಾಗಲೇ ಬ್ಯಾನ್ ಮಾಡಬೇಕಿತ್ತು. ಚುನಾವಣೆ ಹತ್ತಿರ ಬರುತ್ತಿದೆ ಅಂತ ಗಿಮಿಕ್ ಮಾಡುತ್ತಿದ್ದಾರೆ. ನಾವು ಗಟ್ಟಿಯಾಗಿದ್ದೇವೆ ಎಂದು ತೋರಿಸಿಕೊಳ್ಳಲು ಈ ರೀತಿ ಬ್ಯಾನ್ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
ಪ್ಲೆಕ್ಸ್ ಹರಿದಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಾ.ಯತೀಂದ್ರ ಸಿದ್ಧರಾಮಯ್ಯ, ಭಾರತ್ ಜೋಡೋಯಾತ್ರೆ ತಡೆಯಲು ಬಿಜೆಪಿ ಯತ್ನಿಸುತ್ತಿದೆ. ಅದಕ್ಕಾಗಿ ಬ್ಯಾನರ್ ಹರಿಯುವ ಕೆಲಸ ಮಾಡಿದ್ದಾರೆ. ಜನ ಬೆಂಬಲ ನೋಡಿ ಬಿಜೆಪಿಯವರಿಗೆ ಹೊಟ್ಟೆಉರಿ ಎಂದು ಕಿಡಿಕಾರಿದರು.
ನಾಡಹಬ್ಬ ದಸರೆಯಲ್ಲೂ ಕಮೀಷನ್ ವಿಚಾರ ಇದೆ ಎಂಬ ವಿಚಾರ ನನಗೂ ಕೇಳಿಬಂದಿದೆ. ದಸರಾ ಅವ್ಯವಸ್ಥೆಗೆ ಬೇಸರವಿದೆ. ಇದರಿಂದ ಮೈಸೂರಿನ ಮಾನ ಹೋಗಿದೆ. ಈ ಬಾರಿ ಸರ್ಕಾರ ದಸರಾ ಯಶಸ್ವಿಯಾಗಿ ನಡೆಸಲು ವಿಫಲವಾಗಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೇ ನೇರ ಹೊಣೆ. ಈ ಅವ್ಯವಸ್ಥೆಯನ್ನ ಅವರೇ ಹೊರಬೇಕು ಎಂದು ವಾಗ್ದಾಳಿ ನಡೆಸಿದರು.
ಕಟೀಲ್‌ಗೆ ಮಂಪರು ಪರೀಕ್ಷೆ ಅಗತ್ಯ : 
ಮೊದಲು ಕಾಂಗ್ರೆಸ್ ಪಕ್ಷವನ್ನೇ ಬ್ಯಾನ್ ಮಾಡಬೇಕು ಎಂದು ಹೇಳಿಕೆ ನೀಡಿದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್‌ಗೆ ಮಂಪರು ಪರೀಕ್ಷೆ ಮಾಡಬೇಕು. ಎಂದು ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದರು. ಮಂಗಳೂರಿನಲ್ಲಿ ಯಾರ ಜತೆ ಪಿಎಫ್‌ಐ ಸಂಬಂಧ ಇದೆ ಎಂದು ನಳೀನ್ ಕುಮಾರ್ ಕಟೀಲ್‌ಗೆ ಮಂಪರು ಪರೀಕ್ಷೆ ಮಾ ಡಿದರೆ ಗೊತ್ತಾಗುತ್ತೆ. ಇನ್ನು ಚುನಾವಣೆ ವೇಳೆ ಮೋದಿಗೆ ಜೀವ ಬೆದರಿಕೆ ವಿಚಾರ ಹೊರ ಬರುತ್ತೆ ಎಂದ ಅವರು ಸಿಟಿ ರವಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಲೂಟಿ ರವಿಯ ಟೀಕೆಗಳಿಗೂ ನಾವು ಉತ್ತರಿಸುವ ಅಗತ್ಯವಿಲ್ಲ ಎಂದು ಬಿ.ಕೆ. ಹರಿಪ್ರಸಾದ್ ಟಾಂಗ್ ನೀಡಿದರು.