ಕಲೀಂವುಲ್ಲಾ ಬಂಧನ ಖಂಡಿಸಿ ಸಿಸಿಬಿ ಕಚೇರಿ ಎದುರು ಬೆಂಗಲಿಗರ ಪ್ರತಿಭಟನೆ
ಮೈಸೂರು : ನಗರದ ಪಿಎಫ್ಐ ಮುಖಂಡ ಮಹಮದ್ ಕಲೀಂವುಲ್ಲಾ ಖಾನ್ ಅವರ ಮನೆ ಮೇಲೆ ಗುರುವಾರ ಬೆಳ್ಳಂ ಬೆಳಿಗ್ಗೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ಕಲೀಂವುಲ್ಲಾ ಅವರನ್ನು ವಶಕ್ಕೆ ಪಡೆದಿದ್ದಾರೆ.
ಮಹಮದ್ ಕಲೀಂವುಲ್ಲಾ ಖಾನ್ ಪಿಎಫ್ಐ ಸಂಘಟನೆಯ ಮಾಜಿ ಜಿಲ್ಲಾಧ್ಯಕ್ಷರಾಗಿದ್ದು, ಉದಯಗಿರಿಯಲ್ಲಿರುವ ಅವರ ಮನೆಗೆ ಗುರುವಾರ ಬೆಳಗಿಜಾವ ಕೇಂದ್ರ ಭದ್ರತಾ ಪಡೆಯೊಂದಿಗೆ ದಿಢೀರ್ ದಾಳಿ ಮಾಡಿದ 8 ಜನ ಎನ್ಐಎ ಅಧಿಕಾರಿಗಳ ತಂಡ ಸತತ ಮೂರು ಗಂಟೆಗಳ ಕಾಲ ಮನೆಯನ್ನು ಜಾಲಾಡಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ನಂತರ ಅಧಿಕಾರಿಗಳು ಕಲೀಮುಲ್ಲಾ ಖಾನ್ ಅವರನ್ನು ಸೆಂಟ್ ಫಿಲೋಮಿನಾ ಕಾಲೇಜು ಬಳಿಯ ಸಿಸಿಬಿ ಕಚೇರಿಗೆ ಕರೆದೊಯ್ದು ಸುಮಾರು ಎರಡು ಗಂಟೆಗಳವರೆಗೆ ವಿಚಾರಣೆಗೊಳಪಡಿಸಿದರು.
ವಿಷಯ ತಿಳಿಯುತ್ತಿದ್ದಂತೆ ಕಲೀಮುಲ್ಲಾ ಖಾನ್ ಬೆಂಬಲಿಗರು ಮನೆಯ ಮುಂದೆ ಹಾಗೂ ಸಿಸಿಬಿ ಕಚೇರಿಯ ಮುಂದೆಯೂ ಹೋಗಿ ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ನಂತರ ಕಲೀಮುಲ್ಲಾ ಖಾನ್ ಅವರನ್ನು ಬೆಂಗಳೂರಿಗೆ ಕರೆದೊಯ್ಯಲು ಮುಂದಾದಾಗ ಪೊಲೀಸ್ ಜೀಪನ್ನು ಅಡ್ಡಗಟ್ಟಿ ಬೆಂಬಲಿಗರು ಪ್ರತಿಭಟಿಸಿದರು. ಇದೇ ವೇಳೆ ಬೆಂಬಲಿಗರು ಸಹ ಪೊಲೀಸ್ ಜೀಪನ್ನು ಬೆನ್ನತ್ತಿ ಬೆಂಗಳೂರಿನತ್ತ ತೆರಳಿದರು.
ಕಲೀಮುಲ್ಲಾಖಾನ್ ಬಂಧನ ಖಂಡಿಸಿ ಬೆಂಗಳೂರಿನ ಎನ್ಐಎ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಸುಮಾರು 4 ಬಸ್ಸುಗಳಲ್ಲಿ ನೂರಾರು ಬೆಂಬಲಿಗರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.

