ಮೈಸೂರು ವಿವಿಯಲ್ಲಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಡಾ.ಚಂದ್ರಾನಾಯಕ್‍ರಿಂದ ಅವ್ಯವಹಾರ : ಡಾ.ಕೆ.ಮಹದೇವ್ ಆರೋಪ


 ಮೈಸೂರು : ಭಾರತೀಯ ಕೃಷಿ ಕೌನ್ಸಿಲ್ ಕೇಂದ್ರದಿಂದ ಮೈಸೂರು ವಿಶ್ವ ವಿದ್ಯಾನಿಲಯಕ್ಕೆ ಒಂದು ವರ್ಷದ ಅವಧಿಗೆ ನಿಯೋಜಿತರಾಗಿರುವ ಡಾ. ಚಂದ್ರನಾಯಕ್ ಅವರನ್ನು ನಿಯಮ ಬಾಹಿರವಾಗಿ ಪ್ರೊಫೆಸರ್ ಎಂದು ವಿವಿಯ ವೆಬ್‍ಸೈಟ್‍ನಲ್ಲಿ ಬಿಂಬಿಸಿ, ಆರ್‍ಟಿಐ ಅಧಿಕಾರಿ ಮತ್ತು ತಾತ್ಕಾಲಿಕ ನೌಕರರಾಗಿರುವ ಇವರಿಗೆ ನೂರು ಕೋಟಿ ಮೌಲ್ಯದ ಟೆಂಡರ್ ನೀಡುವ ಅಧಿಕಾರ ನೀಡಲಾಗಿದೆ ಎಂದು ಮೈಸೂರು ವಿವಿ ಯೋಜನಾ ಮಂಡಳಿ ಸದಸ್ಯರಾದ ಡಾ.ಕೆ.ಮಹದೇವ್ ಆರೋಪಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಈ ಕುರಿತ ದಾಖಲೆ ಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಇವರು ನಿಯೋಜಿತರಾದ ಉದ್ಯೋಗಿ ಆದ ಕಾರಣ ವಿವಿಗೂ ಇವರಿಗೂ ಯಾವುದೇ ಸಂಬಂಧವಿಲ್ಲ. ಜೈವಿಕ ವಿಜ್ಞಾನ ವಿಭಾಗಕ್ಕೆ ಇವರು ನೇಮಕಗೊಂಡಿದ್ದರೂ ವಿವಿಯ ಪ್ರತಿಯೊಂದೂ ಟೆಂಡರ್ ಕರೆಯುವ ಅಧಿಕಾರ ನೀಡಲಾಗಿದೆ.

ಜೊತೆಗೆ, ವಿದ್ಯಾರ್ಥಿಗಳು ದಾಖಲೆ ಪಡೆಯಲು ಅನುಕೂಲವಾಗುವಂತೆ ಕಿಯೋನಿಕ್ಸ್ ಸಂಸ್ಥೆಗೆ ಸುಮಾರು 1.80 ಕೋಟಿ ರೂ. ಗಳ ವರ್ಕ್ ಸರ್ಟಿಫಿಕೇಟ್ ನೀಡಲಾಗಿದೆ. ಆದರೆ ಎಲ್ಲಿ ಹುಡುಕಿದರೂ ಈ ಸಂಸ್ಥೆ ಕೆಲಸ ಮಾಡಿರುವ ಬಗ್ಗೆ ದಾಖಲೆ ಇಲ್ಲ. ಹೀಗಾಗಿ ಚಂದ್ರನಾಯಕ್ ಹಾಗೂ ಅವರಿಗೆ ಕುಮ್ಮಕ್ಕು ನೀಡಿರುವ ಕುಲಪತಿ ಮೊದಲಾದವರು ವಿವಿಯ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ. ಆದ್ದರಿಂದ ಇವರನ್ನು ಬಂಧಿಸಿ ಜೈಲಿಗಟ್ಟಬೇಕೆಂದು ಒತ್ತಾಯಿಸಿದರು.

ಜೊತೆಗೆ, ತಾವು ಈ ಕುರಿತು ಲೋಕಾಯುಕ್ತರಿಗೆ ದೂರು ನೀಡಿದ್ದು, ರಾಜ್ಯಪಾಲರ ಗಮನಕ್ಕೂ ತಂದಿರುವುದಾಗಿ ತಿಳಿಸಿದರು.