’ ನಮಗೆ ವಯಸ್ಸಾಗುತ್ತಿದೆ ಕೆಲಸ ಕೊಡಿ ಇಲ್ಲವೇ ಗಡಿಪಾರು ಮಾಡಿ’ : ಕೆಎಸ್‌ಆರ್‌ಟಿಸಿ ಉದ್ಯೋಗ ಆಕಾಂಕ್ಷಿಗಳಿಂದ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಎಚ್ಚರಿಕೆ


 ವರದಿ : ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು : ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯು 2020 ರಲ್ಲಿ 2545 ಜನ ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಅರ್ಜಿ ಕರೆದಿದ್ದು, 2000 ಜನರನ್ನು ಮಾತ್ರ ನೇಮಕಾತಿ ಮಾಡಿಕೊಂಡಿದೆ. ಉಳಿದ 545 ಹುದ್ದೆಗಳನ್ನು ಭರ್ತಿ ಮಾಡಿಲ್ಲ, ಕೂಡಲೇ ಉಳಿದ 545 ಜನರನ್ನು 20 ದಿನಗಳ ಒಳಗೆ ನೇಮಕಾತಿ ಮಾಡಿಕೊಳ್ಳುವ ಮೂಲಕ ಸರ್ಕಾರ ಆಕಾಂಕ್ಷಿಗಳ ನೆರವಿಗೆ ನಿಲ್ಲಬೇಕು, ಇಲ್ಲದಿದ್ದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕೆಲಸ ಕೊಡಿ ಇಲ್ಲವೇ ಗಡಿಪಾರು ಮಾಡಿ ಎಂಬ ಘೋಷಣೆಯೊಂದಿಗೆ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಉದ್ಯೋಗ ಆಕಾಂಕ್ಷಿಗಳು ಹೇಳಿದರು.

ಶುಕ್ರವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಉದ್ಯೋಗ ಆಕಾಂಕ್ಷಿಗಳಲ್ಲಿ ಒಬ್ಬರಾದ ಜಯರಾಮು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯು 2020 ರಲ್ಲಿ 2545 ಚಾಲಕ ಕಂ ನಿರ್ವಾಹಕ ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳುವುದಾಗಿ ಅಧಿಸೂಚನೆ ಹೊರಡಿಸಿತ್ತು. ನಾವುಗಳು 2545 ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದೇವೆ ವಿನಃ 2000 ಹುದ್ದೆಗಳಿಗೆ ಅಲ್ಲ, ಸಂಸ್ಥೆ ನಿಗದಿಪಡಿಸಿದ ಎಲ್ಲ ಪರೀಕ್ಷೆಗಳನ್ನೂ ನಾವು ಎದುರಿಸಿದ್ದು, ಉದ್ಯೋಗದ ನಿರೀಕ್ಷೆಯಲ್ಲಿದ್ದೇವು. ಕೋವಿಡ್ ಕಾರಣ ನೇಮಕಾತಿ ಮುಂದೂಡಲಾಗಿತ್ತು, 2024-25 ರಲ್ಲಿ 2000 ಹುದ್ದೆಗಳಿಗೆ ಮಾತ್ರ ಸರ್ಕಾರ ಅನುಮತಿ ನೀಡಿದೆ ಎಂದು 2000 ಹುದ್ದೆಗಳನ್ನು ಮಾತ್ರ ನೇಮಕಾತಿ ಮಾಡಿಕೊಂಡು ಉಳಿದವರಿಗೆ ಅನ್ಯಾಯ ಮಾಡಿರುತ್ತಾರೆ. ಅಂದು ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ವಿವಿಧ ರಾಜಕೀಯ ಮುಖಂಡರು, ಸಾರಿಗೆ ಸಚಿವರೂ ಸೇರಿದಂತೆ ವಿವಿಧ ಇಲಾಖೆಗಳ ಸಚಿವರು ನೇಮಕಾತಿ ಮಾಡಿಕೊಳ್ಳುವ ಭರವಸೆಯನ್ನು ನೀಡಿದ್ದರಿಂದ ಅಂದಿನಿಂದ ಇಂದಿನ ತನಕವೂ ನಾವು ಉದ್ಯೋಗ ಸಿಗುತ್ತದೆ ಎಂಬ ಭರವಸೆಯಿಂದ ಇದ್ದೇವೆ. ಇದೀಗ ನಮಗೆ ವಯೋಮಿತಿಯೂ ಹೆಚ್ಚಾಗುತ್ತಿರುವ ಕಾರಣ ಮುಂದೆ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಗುವುದಿಲ್ಲ, ಈ ನಿಟ್ಟಿನಲ್ಲಿ ಸರ್ಕಾರ, ಮುಖ್ಯಮಂತ್ರಿಗಳು,ಉಪ ಮುಖ್ಯಮಂತ್ರಿಗಳು, ಸಾರಿಗೆ ಸಚಿವರು ಆಕಾಂಕ್ಷಿಗಳ ಬಗ್ಗೆ ಕರುಣೆ ತೋರಿ ಮಾನವೀಯ ದೃಷ್ಟಿಯಿಂದ ಉಳಿದ 545 ಜನ ಚಾಲಕ ಕಂ ನಿರ್ವಾಹಕರನ್ನು ನೇಮಕಾತಿ ಮಾಡಿಕೊಳ್ಳಬೇಕು. ಇನ್ನು 20 ದಿನದಲ್ಲಿ ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ 545 ಜನ ಉದ್ಯೋಗ ಆಕಾಂಕ್ಷಿಗಳು ಪ್ರತಿಭಟನೆ ನಡೆಸಿ ಉದ್ಯೋಗ ಕೊಡಿ ಇಲ್ಲವೇ ರಾಜ್ಯದಿಂದ ನಮ್ಮನ್ನು ಗಡಿಪಾರು ಮಾಡಿ ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸುತ್ತೇವೆ. ನಮ್ಮ ಪ್ರತಿಭಟನೆ ಯಾರ ವಿರುದ್ಧವಾಗಿಯೂ ಅಥವಾ ಯಾರ ಪರವಾಗಿಯೂ ಇರುವುದಿಲ್ಲ, ಕೇವಲ ನಮ್ಮ ಉದ್ಯೋಗಿ ಆಕಾಂಕ್ಷಿಗಳ ಪರವಾಗಿ ನಾವು ದನಿ ಎತ್ತುತ್ತೇವೆ ಎಂದು ಹೇಳಿದರು.

ಕೋಲಾರದ ಎಂ.ವಿ.ಶ್ರೀರಾಮ ರೆಡ್ಡಿ ಮಾತನಾಡಿ, ಸರ್ಕಾರ 2000 ಹುದ್ದೆಗಳಿಗೆ ಮಾತ್ರ ಅನುಮೋದನೆ ನೀಡಿದೆ ಎಂದು ಸಚಿವರು ಹೇಳುತ್ತಾರೆ. ಆದರೇ, 2020 ರಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸುವಾಗ 2545 ಹುದ್ದೆಗಳಿಗೆ ಎನ್ನಲಾಗಿತ್ತು, ನಾವು 2545 ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದೇವೆಯೇ ವಿನಃ 2000 ಹುದ್ದೆಗಳಿಗೆ ಅಲ್ಲ, 545 ಹುದ್ದೆಗಳಿಗೆ ಹಣಕಾಸು ಇಲಾಖೆ ಅನುಮೋದನೆ ನೀಡಿಲ್ಲ ಎನ್ನುವವರು, ಇದೀಗ ಹೊರಗುತ್ತಿಗೆ ಆಧಾರದಲ್ಲಿ ಚಾಲಕರನ್ನು ನೇಮಕ ಮಾಡಿಕೊಳ್ಳುತ್ತಿರುವುದು ಸರಿಯೇ, ಈ ನೇಮಕಾತಿಯಲ್ಲಿ ಕೆಲಸಕ್ಕೆ ಬರುವವರನ್ನು ಪುಗಸಟ್ಟೆಯಾಗಿ ದುಡಿಸಿಕೊಳ್ಳಲು ಸಾಧ್ಯವೇ? ಸರ್ಕಾರ ಈ ದ್ವಂದ್ವ ನೀತಿಯನ್ನು ಬಿಟ್ಟು ನಮ್ಮ ಬಗ್ಗೆ ಕರುಣೆ ತೋರಬೇಕು. ಸರ್ಕಾರ 545 ಜನರನ್ನು ನೇಮಕ ಮಾಡಿಕೊಂಡರೆ ಇಷ್ಟೂ ಸಂಸಾರಗಳು ಬದುಕುತ್ತವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉದ್ಯೋಗ ಆಕಾಂಕ್ಷಿಗಳಾದ ವಿಜಯಕುಮಾರ್, ಸಂತೋಷ್ ಕುಮಾರ್, ಗಿರಿಧರ ಟಿ.ವಿ., ಶರತ್ ಕುಮಾರ್ ಇತರರು ಇದ್ದರು.