ಮೈಸೂರು : ಕೆಆರ್‍ಎಸ್ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಕಟಾವಿಗೆ ಬಂದ ಕಬ್ಬು ನೀರಿಲ್ಲದೆ ಒಣಗುತ್ತಿದ್ದು, ಕೂಡಲೇ ವಿಶ್ವೇಶ್ವರಯ್ಯ ನಾಲೆಗೆ ಒಂದು ಕಟ್ಟು ನೀರು ಬಿಡಲು ಕರ್ನಾಟಕ ರಾಜ್ಯ ರೈತ ಸಂಘ(ರೈತಬಣ)ದ ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಒತ್ತಾಯಿಸಿದ್ದು, ನೀರು ಬಿಡದಿದ್ದಲ್ಲಿ ಕೆಆರ್‍ಎಸ್ ಇಂಜಿಯರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಸಂಜೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ರಾಜ್ಯ ಸರ್ಕಾರ ಇನ್ನೂ ಐಪಿಎಲ್ ಗೆಲುವಿನ ಗುಂಗಿನಲ್ಲಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಹನ್ನೊಂದು ಜನ ಅಮಾಯಕರು ಪ್ರಾಣ ಕಳೆದುಕೊಂಡು ಐವತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮತ್ತೊಂದು ಕಡೆ ನೀರಿಲ್ಲದೆ ಬೆಳೆಗಳು ಒಣಗುತ್ತಿದ್ದರೂ ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ, ವಿಶ್ವೇಶ್ವರಯ್ಯ ನಾಲಾ ವ್ಯಾಪ್ತಿಯಲ್ಲಿ ಕಬ್ಬು, ಭತ್ತ ಸೇರಿದಂತೆ ಇನ್ನಿತರ ಬೆಳೆಗಳು ಒಣಗುತ್ತಿವೆ. ಕೆರೆ ಕಟ್ಟೆಗಳು ಬತ್ತಿವೆ. ಜನ ಜಾನುವಾರುಗಳಿಗೆ ನೀರಿಲ್ಲ, ಕೆಆರ್‍ಎಸ್ ಜಲಾಶಯಕ್ಕೆ ನೀರು ಯಥೇಚ್ಛವಾಗಿ ಹರಿದು ಬರುತ್ತಿದ್ದರೂ ವಿಸಿ ನಾಲೆಗೆ ನೀರು ಹರಿಸುತ್ತಿಲ್ಲ. ಕೂಡಲೇ ಸರ್ಕಾರ ವಿಸಿ ನಾಲೆಗೆ ಒಂದು ಕಟ್ಟು ನೀರು ಹರಿಸಬೇಕು ಎಂದು ಕೃಷ್ಣೇಗೌಡ ಆಗ್ರಹಿಸಿದರು.
ಮತ್ತೆ ಮೈಕ್ರೋ ಫೈನಾನ್ಸ್‍ಗಳ ಕಿರುಕುಳ:
ರಾಜ್ಯದಲ್ಲಿ ಸುಗ್ರಿವಾಜ್ಞೆ ಬಳಿಕ ಒಂದಷ್ಟು ದಿನ ಸುಮ್ಮನಿದ್ದ ಮೈಕ್ರೋ ಫೈನಾನ್ಸ್ ನೌಕರರು ಈಗ ಮತ್ತೆ ಜನರಿಗೆ ಕಿರುಕುಳ ಕೊಡಲು ಪ್ರಾರಂಭಿಸಿದ್ದಾರೆ. ಅದರಲ್ಲೂ ವಾರದ ಕಂತು ವಸೂಲಿ ನಿಯಮ ಇಲ್ಲದಿದ್ದರೂ ವಾರಕ್ಕೊಮ್ಮೆ ಹಣ ಕಟ್ಟಿ ಎಂದು ಜನರಿಗೆ ಕಿರುಕುಳ ನೀಡುತ್ತಿದ್ದಾರೆ. ಸರ್ಕಾರ ಮತ್ತು ಇದಕ್ಕೆ ಸಂಬಂಧಪಟ್ಟ ತಹಸೀಲ್ದಾರರು, ಜಿಲ್ಲಾಧಿಕಾರಿಗಳು, ಪೊಲೀಸರ ಸಮ್ಮುಖದಲ್ಲಿ ತಾಲ್ಲೂಕು ಮಟ್ಟದಲ್ಲಿ ಫೈನಾನ್ಸ್‍ನವರ ಸಭೆ ಕರೆದು ವಾರದ ಕಂತು ವಸೂಲಿಯನ್ನು ನಿಲ್ಲಿಸಿ ಒಂದು ವಾರಕ್ಕೆ ಕಟ್ಟುತ್ತಿದ್ದ ಹಣವನ್ನು ಒಂದು ತಿಂಗಳಿಗೊಮ್ಮೆ ಕಟ್ಟಿಸಿಕೊಳ್ಳಬೇಕು. ತಿಂಗಳ ಕಂತನ್ನು ಮೂರು ತಿಂಗಳಿಗೊಮ್ಮೆ ಕಟ್ಟಿಸಿಕೊಳ್ಳಬೇಕೆಂದು ತಾಕೀತು ಮಾಡಬೇಕು. ಮನೆ ಹತ್ತಿತ ಹೋಗಿ ಗಲಾಟೆ ಮಾಡಬಾರದು, ಪದೇ ಪದೇ ಫೋನ್ ಮಾಡಿ ಕಿರುಕುಳ ನೀಡಬಾರದೆಂದು ಎಚ್ಚರಿಕೆಯನ್ನೂ ನೀಡಬೇಕು ಎಂದು ಕೃಷ್ಣೇಗೌಡರು ಆಗ್ರಹಿಸಿದರು.
ತಲಾ ಒಂದು ಕೋಟಿ ಪರಿಹಾರ ನೀಡಿ
ಆರ್‍ಸಿಬಿ ವಿಜಯೋತ್ಸವದಲ್ಲಿ ಮೃತಪಟ್ಟ 11 ಜನರಿಗೆ ಸರ್ಕಾರ ಪರಿಹಾರ ನೀಡಿದೆ. ಆರ್‍ಸಿಬಿ ಸಹ 10ಲಕ್ಷ ಪರಿಹಾರ ಘೊಷಿಸಿದೆ. ಆದರೇ, ಅದು ಸಾಲದು. ಈ ಘಟನೆಗೆ ಸರ್ಕಾರ ಮತ್ತು ಆರ್‍ಸಿಬಿ ನಿರ್ಲಕ್ಷ್ಯವೇ ಕಾರಣ ಆದ್ದರಿಂದ ರಾಜ್ಯ ಸರ್ಕಾರ ಮೃತ ಕುಟುಂಬಗಳಿಗೆ ತಲಾ 50 ಲಕ್ಷ ಮತ್ತು ಆರ್‍ಸಿಬಿ ಕಡೆಯಿಂದ ತಲಾ 1 ಕೋಟಿ ರೂ ಪರಿಹಾರಕೊಡಿಸಬೇಕು ಎಂದು ಕೃಷ್ಣೇಗೌಡ ಒತ್ತಾಯಿಸಿದರು.
0 ಕಾಮೆಂಟ್‌ಗಳು