ವರದಿ:ನಜೀರ್ ಅಹಮದ್, ಪಾಂಡವಪುರ
ಪಾಂಡವಪುರ : ತಾಲ್ಲೂಕಿನ ಸುಂಕಾತೊಣ್ಣೂರು ಸರ್ಕಾರಿ ಪ್ರೌಢಶಾಲೆಯ 2007-2008 ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆ ಮತ್ತು ಸ್ನೇಹಿತರ ಸಮಾಗಮ ಕಾರ್ಯಕ್ರಮವು ಹೃದಯ ಸ್ಪರ್ಷಿಯಾಗಿ ನಡೆಯಿತು.
ಭಾನುವಾರ ಬೆಳಗ್ಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ತೆರೆದ ವಾಹನದ ಮೂಲಕ ವಿದ್ಯಾರ್ಥಿಗಳು ತಮ್ಮ ಮೆಚ್ಚಿನ ಗುರುಗಳನ್ನೆ ತೆರೆದ ವಾಹನದ ಮೂಲಕ ಮೆರವಣಿಗೆ ನಡೆಸಿ ಶಾಲೆಯಲ್ಲಿ ನಿರ್ಮಿಸಿದ್ದ ಭವ್ಯ ವೇದಿಕೆಗೆಕರೆ ತಂದರು.
ಈ ಸಂದರ್ಭದಲ್ಲಿ ದಾರಿಯುದ್ದಕ್ಕೂ ಪಟಾಕಿ ಸಿಡಿಸಲಾಯಿತಲ್ಲದೇ, ವಾದ್ಯಗಳ ಮೂಲಕ ಗುರುಗಳ ಮೆರವಣಿಗೆ ಸಾಗಿತು.
ಶಾಲೆಯಲ್ಲಿ ಹಬ್ಬದ ವಾತಾವರಣ ಮೂಡಿತ್ತು, ವಿದ್ಯಾರ್ಥಿಗಳು ಹೊಸ ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮಿಸಿದರು. ವಿದ್ಯಾರ್ಥಿನಿಯರು ಕಳಸ ಹೊತ್ತು ದೇವರನ್ನು ಕರೆತರುವಂತೆ ಗುರುಗಳನ್ನು ಶಾಲೆಯ ಆವರಣಕ್ಕೆ ಕರೆತಂದದ್ದು ಹೃದಯ ಸ್ಪರ್ಶಿಯಾಗಿತ್ತು.
ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮದ ಸವಿನೆನಪಿಗಾಗಿ ಸಸಿಯನ್ನು ನೆಡಲಾಯಿತು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರಸ್ಪರ ತಮ್ಮ ಪರಿಚಯ ಮಾಡಿಕೊಂಡು ತಾವು ಮಾಡುತ್ತಿರುವ ಉದ್ಯೋಗ, ವ್ಯವಹಾರ ಮತ್ತು ಕೌಟುಂಬಿಕ ವಿವರಣಗಳನ್ನು ಕಾರ್ಯಕ್ರಮದಲ್ಲಿ ಪರಸ್ಪರ ಹಂಚಿಕೊಂಡರು.
ಗುರುವಂದನಾ ಕಾರ್ಯಕ್ರಮದ ಸಂಭ್ರಮ ಕಂಡು ನಿವೃತ್ತರಾಗಿರುವ ಮತ್ತು ಹಾಲಿ ಕರ್ತವ್ಯದಲ್ಲಿರುವ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಪ್ರೀತಿ ಮತ್ತು ಅಭಿಮಾನಕ್ಕೆ ಮನಸೋತು ಮನಸಾರೆ ಹರಸಿದರು.
ಈ ಸಂದರ್ಭದಲ್ಲಿ ಹಲವು ವಿದ್ಯಾರ್ಥಿಗಳು ತಮ್ಮ ಪರಿಚಯ ಮಾಡಿಕೊಂಡ ಸಂದರ್ಭದಲ್ಲಿ ತಾವು ಕೃಷಿಕರಾಗಿರುವ ಕಾರಣ ತಮಗಿನ್ನೂ ವಿವಾಹವಾಗಿಲ್ಲ, ತಮ್ಮ ಜತೆ ವ್ಯಾಸಂಗ ಮಾಡುತ್ತಿದ್ದ ಎಲ್ಲ ವಿದ್ಯಾರ್ಥಿನಿಯರು ವಿವಾಹಿತರಾಗಿ ಅವರ ಮಕ್ಕಳು ಇದೀಗ ವಿವಾಹವಾಗುವ ಪ್ರೌಢಾವಸ್ಥೆಗೆ ಬಂದಿದ್ದರೂ ತಾವಿನ್ನೂ ಹೆಣ್ಣು ನೋಡುತ್ತಿದ್ದೇವೆ ಎಂದು ಹೇಳಿದರು. ಈ ವೇಳೆ ಈ ಮಾತು ಹಾಸ್ಯವಾಗಿ ಕಂಡರೂ ಗ್ರಾಮೀಣ ಪ್ರದೇಶದ ರೈತಾಪಿ ವರ್ಗದ ಯುವಕರಿಗೆ ಇನ್ನೂ ಹೆಣ್ಣು ಕೊಡಲು ಮುಂದೆ ಬಾರದ ಇದೇ ರೈತಾಪಿ ವರ್ಗದ ಜನರ ಮನಃಸ್ಥಿತಿ ಎಂತಹದು ಎಂದು ಅರ್ಥವಾಗಿ ಅವಿವಾಹಿತ ಯುವಕರ ಕಷ್ಟ ಕಾರ್ಪಣ್ಯಕ್ಕೆ ಮನಃ ಕರಗಿತು.
ಈ ಸಂದರ್ಭದಲ್ಲಿ ವಯೋವೃದ್ಧ ನಿವೃತ್ತ ಶಿಕ್ಷಕರಾದ ಇದೊಂದು ಮರೆಯಲಾಗದ ಸುದಿನ, ವಿದ್ಯಾರ್ಥಿಗಳು ನಮ್ಮನ್ನು ಕರೆದು ಅಭಿನಂದನೆ ಸಲ್ಲಿಸುತ್ತಿರುವುದರಿಂದ ನಮಗೆ ಸಾರ್ಥಕಭಾವ ಮೂಡಿದೆ. ವಿದ್ಯಾರ್ಥಿಗಳು ಸ್ವಾರ್ಥಿಗಳಾಗಬೇಡಿ, ದಾನಿಗಳಾಗಿ, ಹೃದಯವಂತರಾಗಿ, ಪರೋಪಕಾರದ ಗುಣಗಳನ್ನು ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಮುಖ್ಯ ಶಿಕ್ಷಕಿ ಟಿ.ಸರಿತ ಮಾತನಾಡಿ, ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ನಡೆಸಲು ಒಂದು ಟಿ.ವಿ.ಅವಶ್ಯಕತೆಯಿದ್ದು,ವಿದ್ಯಾರ್ಥಿಗಳು ಕೊಡಿಸಬೇಕೆಂದು ಮನವಿ ಮಾಡಿದರು.
ಗುರುವಂದನೆ ಸ್ವೀಕರಿಸಿದ ಶಿಕ್ಷಕರಾದ ಡಿ.ತಿಮ್ಮೇಗೌಡ, ಚಲುವರಾಜು, ಎಸ್.ಎನ್.ವರದರಾಜು, ಶ್ರೀನಿವಾಸ, ದೊಡ್ಡ ವೆಂಕಟಯ್ಯ, ಎಸ್.ವೈ.ಅನಿತಾ, ಐ.ಸಿ.ರೂಪ, ಆರ್.ನಾಗರಾಜು, ದೇವಪ್ಪ ನಿಂಗಪ್ಪ ಬಳಬಟ್ಟ, ಮುಂತಾದವರು ಮಾತನಾಡಿದರು.
ಬಳಿಕ ಗುರುಗಳನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.
ರಮ್ಯಾ ಅತ್ಯಂತ ಮನೋಜ್ಞವಾಗಿ ಕಾರ್ಯಕ್ರಮವನ್ನು ನಿರೂಪಿಸಿದರು.
ಇದೇ ವೇಳೆ ಮೃತ ಶಿಕ್ಷರಾದ ಪುಟ್ಟಸ್ವಾಮಪ್ಪ ಮತ್ತು ಮೈಲಾರಪ್ಪ ಹಾಗೂ ವಿದ್ಯಾರ್ಥಿಗಳಾದ ಕಿರಣ್, ನವೀನ್, ಪಾರ್ವತಮ್ಮ, ಅಕ್ಷತಾ ಅವರ ನಿಧನಕ್ಕೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.
ಕಾರ್ಯಕ್ರಮ ನಂತರ ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಲಾಗಿತ್ತು.
0 ಕಾಮೆಂಟ್‌ಗಳು